ಸೋಮವಾರಪೇಟೆ, ಜ. 30: ಪ್ರಸಕ್ತ ವರ್ಷ ತಾಲೂಕಿನಲ್ಲಿ ಬರದ ಛಾಯೆ ಆವರಿಸಿರುವದರಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೂ ಸಂಚಕಾರ ಬಂದಿರುವದು ಒಂದೆಡೆಯಾದರೆ, ಬರದ ಪರಿಣಾಮ ಭತ್ತ ಕೃಷಿಯಲ್ಲೂ ನಿರೀಕ್ಷಿತ ಸಾಧನೆ ಆಗದಿರುವದರಿಂದ ಜಾನುವಾರು ಗಳ ಮೇವಿಗೂ ತೊಂದರೆ ಎದುರಾಗಿದ್ದು, ಭತ್ತದ ಹುಲ್ಲಿನ ಮೇವಿಗೆ ಭಾರೀ ಬೇಡಿಕೆ ಬಂದಿದೆ.

ಬರಪೀಡಿತ ತಾಲೂಕ್ಕೆಂದು ಘೋಷಣೆಯಾದ ನಂತರ ಜಾನುವಾರುಗಳ ಆಹಾರಕ್ಕಾಗಿ ಉಪಯೋಗಿಸುವ ಭತ್ತದ ಹುಲ್ಲಿಗೆ ಬೇಡಿಕೆ ಜಾಸ್ತಿಯಾಗಿದೆ. ಗ್ರಾಮೀಣ ಭಾಗದಲ್ಲಿ ಭÀತ್ತ ಕೃಷಿಕರು ಹುಲ್ಲಿನ ಒಕ್ಕಲು ಕೆಲಸ ಮುಗಿಸಿ ಮೇವನ್ನು ಸಂಗ್ರಹಿಸಿಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ವಾಯುಭಾರ ಕುಸಿತದಿಂದಾಗಿ ಡಿಸೆಂಬರ್ ಮೂರನೆ ವಾರದಲ್ಲಿ ಸುರಿದ ಮಳೆಯಿಂದ ಭತ್ತ ಫಸಲು ನಷ್ಟವಾಗಿತ್ತು. ಇದರೊಂದಿಗೆ ಭತ್ತ ಹಾಗೂ ಹುಲ್ಲು ಗುಣಮಟ್ಟ ಕಳೆದುಕೊಂಡಿತ್ತು. ಬಿಸಿಲು ಬಂದ ನಂತರ ಭತ್ತವನ್ನು ತೆಗೆದು ಮಾರಾಟ ಮಾಡಿದ್ದರು. ಈಗ ಹುಲ್ಲಿಗೆ ಬೇಡಿಕೆ ಬಂದ ಹಿನ್ನೆಲೆ ಹುಲ್ಲನ್ನು ಹದ ಮಾಡಿ, ಕಂತೆ ಕಟ್ಟಿ “ಹುಲ್ಲಿನ ಮುಂಡ”ಗಳಲ್ಲಿ ಸಂಗ್ರಹಿಸಿಡುತ್ತಿ ದ್ದಾರೆ.

ಪ್ರಸಕ್ತ ಸಾಲಿನಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿ ದ್ದರೂ ಕಳೆದ ಸಾಲಿನಷ್ಟು ಇಳುವರಿ ದೊರಕದ ಹಿನ್ನೆಲೆ ಭತ್ತದ ಕೃಷಿಯೂ ನಷ್ಟದಲ್ಲೇ ಮುಗಿದಿದೆ. ತಾಲೂಕಿನ ಸಣ್ಣ ರೈತರೇ ಹೆಚ್ಚಿನ ಸಂಖ್ಯೆಯಲ್ಲಿ ಭತ್ತ ಕೃಷಿ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಹೆಚ್ಚು ಜಾನುವಾರು ಗಳಿದ್ದು, ಇವುಗಳಿಗೆ ವರ್ಷಪೂರ್ತಿ ಮೇವು ಅಗತ್ಯವಿರುವ ಹಿನ್ನೆಲೆಯಲ್ಲಿ ತಮ್ಮ ಗದ್ದೆಗಳಲ್ಲಿ ಉತ್ಪತ್ತಿಯಾದ ಹುಲ್ಲನ್ನು ಮಾರಾಟ ಮಾಡಲೂ ಸಹ ರೈತರು ಹಿಂದೇಟು ಹಾಕುತ್ತಿ ದ್ದಾರೆ. ಅಗತ್ಯಕ್ಕಿರುವಷ್ಟು ದಾಸ್ತಾನಿರಿಸಿ ಉಳಿದ ಹುಲ್ಲನ್ನು ಮಾರಾಟ ಮಾಡಲು ಮುಂದಾದರೂ ಸಹ ನಿರೀಕ್ಷಿತ ಬೆಲೆ ದೊರಕದೇ ನಿರಾಸೆಗೊಳಗಾಗುತ್ತಿದ್ದಾರೆ.

ಬರಗಾಲದ ಹಿನ್ನೆಲೆಯಲ್ಲಿ ತಾಲೂಕಿನಿಂದ ಹುಲ್ಲನ್ನು ಹೊರ ರಾಜ್ಯಗಳಿಗೆ ಸಾಗಿಸಲು ಜಿಲ್ಲಾಡಳಿತ ನಿರ್ಬಂಧ ಹೇರಿರುವದರಿಂದ, ಹೊರರಾಜ್ಯದ ವ್ಯಾಪಾರಸ್ಥರು ಜಿಲ್ಲೆಗೆ ಬರುತ್ತಿಲ್ಲ. ಈ ಕಾರಣದಿಂದ ಉತ್ತಮ ಬೆಲೆಯೂ ಸಿಗುತ್ತಿಲ್ಲ ಎಂಬ ಅಸಹಾಯಕತೆಯನ್ನು ಕೃಷಿಕರು ವ್ಯಕ್ತಪಡಿಸಿದ್ದಾರೆ.

2016ರ ಜಾನುವಾರು ಗಣತಿ ಪ್ರಕಾರ, ತಾಲೂಕಿನಲ್ಲಿ 1,14,469 ಜಾನುವಾರುಗಳಿವೆ. 41,403 ದನಗಳು, 5505 ಎಮ್ಮೆಗಳು, 2939 ಮೇಕೆಗಳು, 3459 ಹಂದಿಗಳು, 1130 ಕುರಿಗಳು, 75,754 ಕುಕ್ಕಟಗಳು, 180 ಮೊಲಗಳಿದ್ದು, ಇವುಗಳಿಗೆ ಆಹಾರದ ಲಭ್ಯತೆ ಬೇಕಾಗಿರುವದರಿಂದ

ತಾಲೂಕು ಆಡಳಿತ ರೈತರಿಂದ ಹುಲ್ಲನ್ನು ಖರೀದಿಸಲು ಸಿದ್ದತೆ ಮಾಡಿಕೊಂಡಿದೆ. ಕೃಷಿಕರು ಭತ್ತದ ಹುಲ್ಲನ್ನು ಮಾರಾಟ ಮಾಡಲು ಇಚ್ಚಿಸಿ ಮಾಹಿತಿ ನೀಡಿದರೆ ಸ್ಥಳದಲ್ಲೇ ಒಂದು ಟನ್ ಹುಲ್ಲಿಗೆ 6000ರೂ. ನೀಡಿ ಖರೀದಿ ಮಾಡಲಾಗುತ್ತದೆ. ಖರೀದಿಸಿದ ಹುಲ್ಲನ್ನು ಸೋಮವಾರ ಪೇಟೆ ಹಾಗೂ ಕುಶಾಲನಗರ ಎಪಿಎಂಸಿ ಯಲ್ಲಿ ಸಂಗ್ರಹ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಅತೀವೃಷ್ಟಿ, ಅನಾವೃಷ್ಟಿಯಿಂದ ಹಲವಷ್ಟು ರೈತ ಭತ್ತ ಕೃಷಿಯಿಂದ ಹಿಮ್ಮುಖವಾಗುತ್ತಿದ್ದರೂ, ಗ್ರಾಮೀಣ ಭಾಗದಲ್ಲಿ ಕೆಲವರು ಇಂದಿಗೂ ಭತ್ತಕೃಷಿಯನ್ನು ತಪಸ್ಸಿನಂತೆ ನಡೆಸಿಕೊಂಡು ಬರುತ್ತಿದ್ದಾರೆ. ಇದೀಗ ಬರಗಾಲದ ಪರಿಸ್ಥಿತಿ ಯಿದ್ದು, ಅಳಿದುಳಿದ ಭತ್ತವನ್ನು ಮನೆತುಂಬಿಸಿ ಕೊಂಡಿರುವ ರೈತರು, ತಮ್ಮ ಜಾನುವಾರುಗಳಿಗೆ ಬೇಕಿರುವಷ್ಟು ಹುಲ್ಲನ್ನು ಸಂಗ್ರಹಿಸಿ ಉಳಿದ ಹುಲ್ಲನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಕನಿಷ್ಟ ಪಕ್ಷ 1 ಟನ್ ಹುಲ್ಲಿಗೆ 12 ಸಾವಿರ ರೂ. ದೊರಕಿದರೆ ಮಾತ್ರ ಕೃಷಿಕರು ಬದುಕಬಹುದು ಎಂದು ರೈತರು ಅಭಿಪ್ರಾಯಿಸಿದ್ದಾರೆ.

ತಾಲೂಕಿನಲ್ಲಿ ಜಾನುವಾರುಗಳ ಆಹಾರಕ್ಕೆ ಹೆಚ್ಚು ಭತ್ತದ ಹುಲ್ಲನ್ನೇ ಉಪಯೋಗಿಸಲಾಗುತ್ತಿದೆ. ಬರದ ಹಿನ್ನೆಲೆಯಲ್ಲಿ ಜಾನುವಾರುಗಳ ಆಹಾರ ಸಂಗ್ರಹಣೆ ನಡೆಯುತ್ತಿದೆ. ಹೊರರಾಜ್ಯಗಳಿಗೆ ಹುಲ್ಲನ್ನು ಸಾಗಿಸುವ ಯತ್ನ ಮಾಡುತ್ತಿರುವ ಲಾರಿಗಳನ್ನು ಗಡಿಪ್ರದೇಶಗಳಲ್ಲಿ ಮುಟ್ಟುಗೋಲು ಹಾಕಿಕೊಂಡು, ಹುಲ್ಲಿಗೆ ಸೂಕ್ತ ಬೆಲೆಯನ್ನು ನೀಡಿ, ಗೋಣಿಕೊಪ್ಪದಲ್ಲಿ ಸಂಗ್ರಹಿಸಿಡ ಲಾಗುತ್ತಿದೆ. ಹುಲ್ಲನ್ನು ಮಾರಾಟ ಮಾಡುವ ಕೃಷಿಕರಿಗೆ ಉತ್ತಮ ಬೆಲೆ ನೀಡಲಾಗುತ್ತದೆ. ಆಸಕ್ತರು ತಾಲೂಕು ತಹಸೀಲ್ದಾರ್‍ರನ್ನು ಸಂಪರ್ಕಿ¸ Àಬಹುದು ಎಂದು ಪಶುವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಿಟ್ಟಿಯಪ್ಪ ತಿಳಿಸಿದ್ದಾರೆ.