ಮಡಿಕೇರಿ, ಅ. 1: ಜಾನಪದ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಲು; ಜಾನಪದ ಕಲೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಕೊಡಗು ಜಾನಪದ ಪರಿಷತ್ ಕೈಗೊಳ್ಳುವ ಎಲ್ಲಾ ಕಾರ್ಯಗಳಿಗೂ ಅಗತ್ಯ ಸಹಕಾರ ನೀಡುವದಾಗಿ ವಿಧಾನ ಪರಿಷತ್ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ ಹಾಗೂ ಮಂಡೇಪಂಡ ಸುನಿಲ್ ಸುಬ್ರಮಣಿ ಇವರುಗಳು ಭರವಸೆ ನೀಡಿದರು. ಕೊಡಗು ಜಿಲ್ಲಾ ಜಾನಪದ ಪರಿಷತ್ ವತಿಯಿಂದ
(ಮೊದಲ ಪುಟದಿಂದ) ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ‘ಸಾಧಕರಿಗೆ ಸನ್ಮಾನ’ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಸುನಿಲ್ ಹಾಗೂ ವೀಣಾ ಮಾತನಾಡಿದರು. ಜಾನಪದ ಪರಿಷತ್ ವತಿಯಿಂದ ಸಂಶೋಧನೆ ಹಾಗೂ ಡಾಕ್ಯುಮೆಂಟರಿ ತಯಾರಿಗೆ ತಲಾ 2 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದರು. ಅತಿಥಿಯಾಗಿದ್ದ ಪರಿಷತ್ ಉಪಾಧ್ಯಕ್ಷೆ ನಗರಸಭಾಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಇವರುಗಳು ಮಾತನಾಡಿ, ಪರಿಷತ್ ಜೊತೆಗೆ ಕೈಜೋಡಿಸುವದಾಗಿ ಆಶ್ವಾಸನೆಯಿತ್ತರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಜಾನಪದ ಪರಿಷತ್ ಉದ್ದೇಶದ ಬಗ್ಗೆ ವಿವರಿಸಿದರು. ಜಾನಪದ ಕಲಾವಿದರ ಪರಿಚಯದ ಪುಸ್ತಕ ಹೊರತರುವದು, ಜಾನಪದ ಗಾದೆಗಳು, ಹಾಡುಗಳು, ನೃತ್ಯಗಳ ಕುರಿತ ಸಂಶೋಧನೆ, ನಡೆಸಿ ಡಾಕ್ಯುಮೆಂಟರಿ ತಯಾರಿಸುವ ಯೋಜನೆ ಹಮ್ಮಿಕೊಂಡಿರುವ ಬಗ್ಗೆ ತಿಳಿಸಿದರು.
ಪಟ್ಟಣಗಳಲ್ಲಿ ಪ್ರೀತಿ ವಿಶ್ವಾಸವೆಂಬದು ಮರೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿ ಪ್ರೀತಿ ವಿಶ್ವಾಸ ನೆಲೆಯೂರಿದೆ. ಅಂತಹ ಗ್ರಾಮೀಣ ಸಂಸ್ಕøತಿಯನ್ನು ಬೆಳೆಸುವ ಕೆಲಸವನ್ನು ಜಾನಪದ ಪರಿಷತ್ ಮಾಡಲಿದೆ ಎಂದರು.
ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ, ಪರಿಷತ್ ಉಪಾಧ್ಯಕ್ಷ ಮುರಳಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾನಿರ್ದೇಶಕಿ ಜಯಲಕ್ಷ್ಮಿ ಬಾಯಿ ಉಪಸ್ಥಿತರಿದ್ದರು.
ಸನ್ಮಾನ: ಪರಿಷತ್ ವತಿಯಿಂದ ಒಟ್ಟು 9 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್, ರಾಜ್ಯಮಟ್ಟಕ್ಕೆ ಆಯ್ಕೆ ಆದ ಜಾನಪದ ಗಾಯಕರುಗಳಾದ ಸುಶೀಲಾ ಕುಶಾಲಪ್ಪ, ತನ್ವಿರ್ ರಜಾ, ಭರತನಾಟ್ಯದಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಮೌನ, ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ರೇವತಿ ರಮೇಶ್, ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷೆ ರಾಣಿ ಮಾಚಯ್ಯ, ಆತಿಥ್ಯಕ್ಕಾಗಿ ಮದರ್ ಥೆರೆಸಾ ಪ್ರಶಸ್ತಿ ಪಡೆದ ಜಯಶ್ರೀ ಅನಂತಶಯನ, ಕಾಂಗ್ರೆಸ್ ವೃತ್ತಿಪರ ಘಟಕದ ಜಿಲ್ಲಾಧ್ಯಕ್ಷರಾಗಿ ಆಯ್ಕೆ ಆದ ನವೀನ್ ಕುಶಾಲಪ್ಪ ಇವರುಗಳನ್ನು ಅತಿಥಿಗಳು ಸನ್ಮಾನಿಸಿ ಗೌರವಿಸಿದರು.
ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ನಿರೂಪಿಸಿದರು. ಮೌನ ಪ್ರಾರ್ಥಿಸಿದರು. ಸಹ ಸಂಚಾಲಕ ಚಿ.ನಾ. ಸೋಮೇಶ್ ಸ್ವಾಗತಿಸಿ, ಉಪಾಧ್ಯಕ್ಷ ಎಂ.ಬಿ. ಜೋಯಪ್ಪ ವಂದಿಸಿದರು.