ಸೋಮವಾರಪೇಟೆ, ಆ. 23: ಕೂಲಿ ಮಾಡಿ ಜೀವನ ಸಾಗಿಸುತ್ತಿರುವ ಗಿರಿಜನರು ತಾಲೂಕು ಕಚೇರಿಯಿಂದ ಜಾತಿ ದೃಢೀಕರಣ ಪತ್ರ ಪಡೆಯಲು ಕಂದಾಯ ಇಲಾಖಾಧಿಕಾರಿಗಳಿಗೆ ಲಂಚ ನೀಡಬೇಕಾಗಿದೆ. ನಮಗಳ ಸ್ಥಿತಿಯಲ್ಲಿ ನಾವು ಹೇಗೆ ಹಣ ನೀಡಲು ಸಾಧ್ಯ ಎಂದು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸದಸ್ಯೆ ಗಿರಿಜನರ ಸೋಮಕ್ಕ ಪ್ರಶ್ನಿಸಿದರು.

ಸಮೀಪದ ದೊಡ್ಡಮಳ್ತೆ ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ಸುಳಿಮಳ್ತೆ ದಿವಾಕರ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಗ್ರಾಮ ಸಭೆಯಲ್ಲಿ ಸೋಮವಾರಪೇಟೆ ತಾಲೂಕು ಕಚೇರಿ ಹಾಗೂ ಶನಿವಾರಸಂತೆ ನಾಡಕಚೇರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಾತಿ ದೃಢೀಕರಣ ಪತ್ರಕ್ಕೆ ಗಿರಿಜನರು ಸೋಮವಾರಪೇಟೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ, ಅಲ್ಲಿನ ಸಿಬ್ಬಂದಿಗಳು ಕೈಯನ್ನೆ ನೋಡುತ್ತಾರೆ. ಲಂಚ ನೀಡದಿದ್ದರೆ ಗಿರಿಜನರ ಅರ್ಜಿಯನ್ನು ವಿಲೇವಾರಿ ಮಾಡುತ್ತಿಲ್ಲ ಎಂದು ಸೋಮಕ್ಕ ಅವರು ಆರೋಪಿಸಿದರು.

ಶಿವಮ್ಮ ಹಾಗೂ ಪುಟ್ಟಿ ಎಂಬವರು ವಸತಿ ಯೋಜನೆಗೆ ಆಯ್ಕೆಯಾಗಿದ್ದು, ಜಾತಿ ದೃಢೀಕರಣ ಪತ್ರ ಸಿಗದ ಹಿನ್ನೆಲೆಯಲ್ಲಿ ಅವರಿಗೆ ಮನೆ ನಿರ್ಮಿಸಿಕೊಡಲು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿ ಪಿಡಿಒ ಹೇಮಲತ ಸಭೆಯ ಗಮನಕ್ಕೆ ತಂದರು. ಕಾಗಡಿಕಟ್ಟೆ ಹಾರಳ್ಳಿ ಗ್ರಾಮದ ಪುಟ್ಟಿ ಹಾಗೂ ಶಿವಮ್ಮ ರಾಜು ಎಂಬವರಿಗೆ ಜಾತಿ ದೃಢೀಕರಣ ಪತ್ರ ಕೋರಿ ಅರ್ಜಿ ಸಲ್ಲಿಸಿ ಎರಡು ವರ್ಷಗಳು ಕಳೆದಿವೆ. ಇದುವರೆಗೆ ಜಾತಿ ದೃಢೀಕರಣ ಪತ್ರ ನೀಡಿಲ್ಲ. ಮಾನವೀಯತೆ ಇಲ್ಲದ ಸಿಬ್ಬಂದಿಗಳು ಕೂಲಿ ಮಾಡುವವರನ್ನು ಶೋಷಣೆ ಮಾಡುತ್ತಿದ್ದಾರೆ ಎಂದು ಸೋಮಕ್ಕ ಆಕ್ರೋಶ ವ್ಯಕ್ತಪಡಿಸಿದರು. ಶನಿವಾರಸಂತೆ ನಾಡಕಚೇರಿಯ ಕಂದಾಯ ನಿರೀಕ್ಷಕರು ಹಾಗೂ ಸಿಬ್ಬಂದಿಯ ವಿರುದ್ಧ ವಾಗ್ದಾಳಿ ನಡೆಸಿದ ಗ್ರಾಮಸ್ಥರು, ಅಲ್ಲಿನ ಕಂದಾಯ ನಿರೀಕ್ಷರನ್ನು ವರ್ಗಾವಣೆ ಮಾಡಬೇಕು. ಇಲ್ಲದಿದ್ದರೆ ದೊಡ್ಡಮಳ್ತೆ ಗ್ರಾಮವನ್ನು ಸೋಮವಾರಪೇಟೆ ಕಸಬಾ ಹೋಬಳಿಗೆ ಸೇರ್ಪಡೆ ಗೊಳಿಸುವಂತೆ ಆಗ್ರಹಿಸಿದರು. ಕಾಗಡಿಕಟ್ಟೆ ಗ್ರಾಮದ ಎಸ್.ಎಂ.ಹೊನ್ನಪ್ಪ, ಎಸ್.ಎಂ.ಕೃಷ್ಣ, ಡಿ.ಎಂ.ಕೊಮಾರಪ್ಪ ಅವರುಗಳು ಶನಿವಾರಸಂತೆ ನಾಡಕಚೇರಿ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ದೊಡ್ಡಮಳ್ತೆ ಗ್ರಾ.ಪಂ.ಯನ್ನು ಸೋಮವಾರಪೇಟೆ ಕಸಬಾ ಹೋಬಳಿಗೆ ಸೇರಿಸುವಂತೆ ಸರ್ವ ಸದಸ್ಯರ ಬೇಡಿಕೆಯಂತೆ ಸಭೆ ನಿರ್ಣಯ ಕೈಗೊಂಡಿತು.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಪ್ರತಿ ಗ್ರಾಮಸಭೆಗೆ ಬಹುತೇಕ ಅಧಿಕಾರಿಗಳು ಗೈರಾಗುತ್ತಿದ್ದಾರೆ. ಪ್ರತಿ ಸಭೆಯಲ್ಲಿ ಗೈರಾದ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಇದುವರೆಗೆ ಯಾವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಮಾಹಿತಿ ನೀಡಿ ಎಂದು ಗ್ರಾಪಂ ಸದಸ್ಯ ಶಿವನಂಜಪ್ಪ, ಕೂಗೆಕೋಡಿ ಗ್ರಾಮದ ಕೆ.ಆರ್.ರಮೇಶ್, ಹೊನವಳ್ಳಿ ವಿರೇಶ್, ದೊಡ್ಡಹಣ ಕೋಡು ಗೋಪಾಲಕೃಷ್ಣ ಮತ್ತಿತರರು ಪ್ರಶ್ನಿಸಿದರು. ಗೈರಾದ ಅಧಿಕಾರಿಗಳ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಲಾಗುವದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಯಶೋಧ ಹೇಳಿದರು. ಇಂತಹ ನಾಟಕೀಯ ಮಾತುಗಳು ಬೇಡ. ಯಾವ ಕ್ರಮ ಜರುಗಿಸಲಾಗಿದೆ ಎಂಬದನ್ನು ಸಭೆಗೆ ತಿಳಿಸಿ ಎಂದು ಗ್ರಾಮಸ್ಥರು ವ್ಯಂಗ್ಯವಾಡಿದರು. ಆರೋಗ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಇಲಾಖೆ ಮತ್ತಿತರ ಅಧಿಕಾರಿಗಳು ಇಲಾಖೆಯ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ದೊಡ್ಡಮಳ್ತೆ ಗ್ರಾಮಪಂಚಾಯಿತಿ ಬಯಲು ಬಹಿರ್ದೆಸೆ ಮುಕ್ತಾ ಗ್ರಾಮವಾಗಿದೆ ಎಂದು ಅಧ್ಯಕ್ಷ ಸುಳಿಮಳ್ತೆ ದಿವಾಕರ್ ಸಭೆಯಲ್ಲಿ ತಿಳಿಸಿದರು. ಸಭೆಯಲ್ಲಿ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾಪಂ ಸದಸ್ಯೆ ಕುಸುಮಾ ಅಶ್ವಥ್, ಗ್ರಾಪಂ ಉಪಾಧ್ಯಕ್ಷೆ ಕವಿತ, ಸದಸ್ಯರಾದ ರವಿ ಕುಮಾರ್, ಸುಮಾ, ಈಶ್ವರಿ, ಕುಸುಮಾವತಿ, ಪಂಚಾಯಿತಿ ಕಾರ್ಯದರ್ಶಿ ಬಿ.ಎಸ್.ಸುರೇಶ್ ಮತ್ತಿತರರು ಇದ್ದರು.