ಶನಿವಾರಸಂತೆ, ನ. 5: ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ವಿವಾದಾಸ್ಪದ ವಾಣಿಜ್ಯ ಸಂಕೀರ್ಣ ಕಟ್ಟಡದ ಜಾಗವನ್ನು ಸರ್ಕಾರದ ಸ್ವಾಧೀನಕ್ಕೆ ವಶಪಡಿಸಿಕೊಳ್ಳಲು ಮಡಿಕೇರಿ ಉಪ ವಿಭಾಗದ ಉಪ ವಿಭಾಗಾಧಿಕಾರಿ ಡಾ. ನಂಜುಂಡೇಗೌಡ ಹಾಗೂ ಉಪ ವಿಭಾಗೀಯ ದಂಡಾಧಿಕಾರಿಗಳು ಆದೇಶಿಸಿದ್ದು, ಅ. 27ರಂದು ಮುಕ್ತ ನ್ಯಾಯಾಲಯದಲ್ಲಿ ಘೋಷಿಸಲಾಗಿದೆ.

ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಇರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ನಿರ್ಮಾಣ ಮಾಡಲು ಗುತ್ತಿಗೆದಾರ ಎಸ್.ಎನ್. ರಘು ಅವರಿಗೆ 12 ವರ್ಷಗಳ ಅವಧಿಗೆ ನೆಲ ಬಾಡಿಗೆ ಒಪ್ಪಂದ ಮಾಡಿಕೊಳ್ಳ ಲಾಗಿತ್ತು. ಒಪ್ಪಂದದ ಪ್ರಕಾರ ಕಟ್ಟಡ ಉದ್ಘಾಟನೆಯಾಗದ 12 ವರ್ಷ 8 ತಿಂಗಳು ಕಳೆದರೂ ಸಹ ಗ್ರಾಮ ಪಂಚಾಯಿತಿಗೆ ಕಟ್ಟಡ ಹಸ್ತಾಂತರಿಸಿ ರುವದಿಲ್ಲ ಎಂದು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಅಧ್ಯಕ್ಷರು ರಾಜ್ಯ ಹೆದ್ದಾರಿ ಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ಮಡಿಕೇರಿಯ ಉಪ ವಿಭಾಗಾಧಿಕಾರಿ ಅವರ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಆದೇಶಿಸಿತ್ತು.

ಗುತ್ತಿಗೆದಾರ ಎಸ್.ಎನ್. ರಘು ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಪಂಚಾಯಿತಿ ಅಧ್ಯಕ್ಷರ ಅರ್ಜಿಗಳನ್ನು ವಿಚಾರಣೆ ಮಾಡಿ, ಉಪ ವಿಭಾಗಾಧಿಕಾರಿಗಳು ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಆದೇಶ ನೀಡಿರುತ್ತಾರೆ.

ಅರ್ಜಿದಾರರು ಒಪ್ಪಂದ ಮಾಡಿರುವ ಜಾಗವನ್ನು ಗ್ರಾಮ ಪಂಚಾಯಿತಿ ಸುಪರ್ದಿಗೆ ತೆಗೆದುಕೊಳ್ಳಲು ಹಾಗೂ ಅನಧಿಕೃತವಾಗಿ ವಾಣಿಜ್ಯ ಸಂಕೀರ್ಣ ಕಟ್ಟಡ ಕಟ್ಟಿರುವ ಚಿಕ್ಕಕೊಳತ್ತೂರು ಗ್ರಾಮ ಮತ್ತು ಬಿದರೂರು ಗ್ರಾಮದ ಜಾಗಕ್ಕೆ ವಾಣಿಜ್ಯ ಕಟ್ಟಡ ಕಟ್ಟಲು ಒಪ್ಪಂದ ಮಾಡಿರುವದು ದೃಢಪಟ್ಟಿರುವದಿಲ್ಲ. ಅಲ್ಲದೆ, ಈ ಜಮೀನುಗಳು ಸರ್ವೆ ನಕಾಶೆಯಂತೆ ಪಂಚಾಯಿತಿಗೆ ಸೇರದಿರುವದರಿಂದ ಕಟ್ಟಡವಿರುವ ಜಾಗವು ಚಿಕ್ಕಕೊಳತ್ತೂರು ಮತ್ತು ಬಿದರೂರು ಗ್ರಾಮಗಳ ಪೈಸಾರಿ ಜಾಗದಲ್ಲಿರುವದರಿಂದ ಅನಧಿಕೃತವಾಗಿ ಒತ್ತುವರಿ ಮಾಡಿರುವ ಜಾಗವನ್ನು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಅವರು ತೆರವುಗೊಳಿಸಿ, ಸರ್ಕಾರದ ಸ್ವಾಧೀನಕ್ಕೆ ತೆಗೆದುಕೊಳ್ಳಲು ಆದೇಶದಲ್ಲಿ ತಿಳಿಸಲಾಗಿದೆ.