ಶನಿವಾರಸಂತೆ, ಸೆ. 6: ಕೊಡ್ಲಿಪೇಟೆ ಹೋಬಳಿಯ ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಾರಳ್ಳಿ ಗ್ರಾಮದಲ್ಲಿರುವ ಸರ್ವೆ ನಂ. 33/1 ರಲ್ಲಿ ಅಂದಾಜು 4 ಎಕರೆ ಪೈಸಾರಿ ಜಾಗದಲ್ಲಿ ಸುಮಾರು 25 ಮಂದಿ ಬುಧವಾರ ಅತಿಕ್ರಮಣ ಮಾಡಿ ಮನೆ ಕಟ್ಟಿಕೊಳ್ಳಲು ಕಾಡು ಕಡಿದು 40ಘಿ60 ಅಳತೆಯಲ್ಲಿ ಗುರುತಿಸಿ ಕಂಬಗಳನ್ನು ನೆಟ್ಟಿರುವ ಪ್ರಕರಣ ನಡೆದಿದೆ. ಈ ಗ್ರಾಮದಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿಯ ಸುಮಾರು 20 ಕುಟುಂಬಗಳು ಇದನ್ನು ವಿರೋಧಿಸಿ ಸೋಮವಾರ ಪ್ರತಿಭಟಿಸಿದರು.

ಈ ಸರ್ವೆ ನಂಬರ್‍ನಲ್ಲಿ 66 ಎಕರೆ ಪೈಸಾರಿ ಜಾಗವಿದ್ದು, ಸುಮಾರು 51 ಎಕರೆ ಜಾಗವನ್ನು ಕೆಲವು ಬಂಡವಾಳ ಶಾಹಿಗಳು ಒತ್ತುವರಿ ಮಾಡಿಕೊಂಡು ತೋಟಗಳನ್ನು ಮಾಡಿಕೊಂಡಿರುವರು. ಇಲ್ಲಿನ ಗ್ರಾಮ ವಾಸಿಗಳು ತಮ್ಮ ಮುಂದಿನ ಪೀಳಿಗೆ ಗಾಗಿ ಉಳಿದಿರುವ ಈ ಜಾಗವನ್ನು ಕಾಯ್ದಿರಿಸಿಕೊಂಡು, ಈ ಜಾಗದಲ್ಲಿ ಅಂಗನವಾಡಿ ಶಾಲೆ, ಸಮುದಾಯಭವನ ದೇವಸ್ಥಾನ ಹಾಗೂ ನಿವೇಶನ ರಹಿತರಿಗೆ ಮನೆಕಟ್ಟಿಕೊಳ್ಳಲು ಲೆಕ್ಕಾಚಾರ ಹಾಕಿಕೊಂಡಿರುವದಾಗಿ ಗ್ರಾಮಸ್ಥರು ‘ಶಕ್ತಿ’ಗೆ ತಿಳಿಸಿದರು.

ಈ ಹಿಂದೆಯೂ ಕೆಲವರು ಈ ಜಾಗವನ್ನು ಅತಿಕ್ರಮಣ ಮಾಡಿ ಕೊಂಡಾಗ ಗ್ರಾಮಸ್ಥರೆಲ್ಲೂ ಸೇರಿ ಸಂಬಂಧ ಪಟ್ಟ ಕಂದಾಯ ಇಲಾಖೆಗೆ ಮನವಿ ಮಾಡಿ ತೆರವುಗೊಳಿಸಲಾಗಿತ್ತು. ಇದೀಗ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ, ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಕೆ.ಕೆ. ಕೊವರಪ್ಪ, ಕುಂಞ, ಶಾಂತ, ಪ್ರತಾಪ, ಪ್ರೇಮ, ಜೀವನ್, ಲತಾ, ಪುರುಷೋತ್ತಮ, ಆಸಿಯಾ, ಗಿರಿಜ, ಸಾವಿತ್ರಿ, ಗೌರಮ್ಮ, ಶಿವಪ್ಪ, ಬಾವ, ಕೆ.ಬಿ. ರಮ್ಯ, ಕೆ.ಕೆ. ಸುರೇಶ್, ಅಣ್ಣಮ್ಮ, ಕುಶಾಲಪ್ಪ, ಪುಟ್ಟರಂಗಯ್ಯ ಉತರರು ಹಾಜರಿದ್ದರು.