ಮಡಿಕೇರಿ, ಆ. 15: ಜಲ ಸಂರಕ್ಷಣೆ ಮತ್ತು ಪರಿಸರ ಶುಚಿತ್ವದ ಕಡೆ ಹೆಚ್ಚಿನ ಗಮನ ಅಗತ್ಯವಾಗಿದೆ ಎಂದು ಒಂದನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಡಿ. ಪವನೇಶ್ ಹೇಳಿದ್ದಾರೆ.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಜಿಲ್ಲಾ ಪಂಚಾಯಿತಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜಲ ಸಂರಕ್ಷಣೆ ಮತ್ತು ಶುಚಿತ್ವದ ಕುರಿತು ನಡೆದ ವಿಚಾರ ಸಂಕಿರಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಪ್ರಪಂಚದ ಪ್ರತಿಯೊಂದು ಜೀವಿಗೂ ನೀರಿನ ಅವಶ್ಯಕತೆ ಇದೆ. ಶುದ್ಧ ನೀರಿಲ್ಲದೆ ಬದುಕಲು ಸಾಧ್ಯವಿಲ್ಲ. ಪ್ರತಿ ಗ್ರಾಮ, ನಗರಗಳಲ್ಲಿ ಕುಡಿಯುವ ನೀರನ್ನು ಪಡೆಯುವ ಹಕ್ಕು ಪ್ರತಿಯೊಬ್ಬ ವ್ಯಕ್ತಿಗೂ ಇದೆ. ಆದ್ದರಿಂದ ಜಲ ಸಂರಕ್ಷಣೆ ಮತ್ತು ಪರಿಸರ ಶುಚಿತ್ವದ ಕಡೆ ಹೆಚ್ಚಿನ ಗಮನ ನೀಡುವದು ಅಗತ್ಯ ಎಂದು ಹೇಳಿದರು.
ಪ್ರಪಂಚದ ಒಟ್ಟು ನೀರಿನ ಪ್ರಮಾಣದಲ್ಲಿ ಶೇ. 2.5 ರಷ್ಟು ಮಾತ್ರ ನೀರು ಕುಡಿಯಲು ಉಪಯೋಗವಾಗುತ್ತಿದೆ. ಈ ನೀರಿನ ಪ್ರಮಾಣದಲ್ಲಿ ಹೆಚ್ಚಿನ ಪಾಲು ಕಲುಷಿತ ನೀರು ಆಗಿ ಮಾರ್ಪಡಾಗುತ್ತಿರುವದು ಆತಂಕದ ವಿಷಯವಾಗಿದೆ. ಆದ್ದರಿಂದ ಆರೋಗ್ಯಕರ ಬದುಕು ನಡೆಸಲು ಶುದ್ಧ ನೀರನ್ನು ಪಡೆಯುವಲ್ಲಿ ಪ್ರತಿಯೊಬ್ಬರು ಜಾಗೃತರಾಗಬೇಕು ಎಂದು ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಲೋಚಕ ಎ.ಎಂ. ಸೂರಜ್ ಮಾತನಾಡಿ, ಶುದ್ಧ ಕುಡಿಯುವ ನೀರಿನ್ನು ಪಡೆಯುವಲ್ಲಿ ಪ್ರತಿಯೊಬ್ಬರೂ ಕಾರ್ಯಯೋಜನೆಯನ್ನು ಮಾಡಿಕೊಳ್ಳಬೇಕು. ಸ್ವತಃ ಸುತ್ತಮುತ್ತಲಿನ ಪರಿಸರದಲ್ಲಿ, ಮನೆಗಳಲ್ಲಿ ಮಳೆ ನೀರಿನ ಸಂಗ್ರಹ, ನೀರಿನ ಮಿತ ಬಳಕೆಯಂತಹ ಕ್ರಮಗಳನ್ನು ಅನುಸರಿಸಬೇಕು, ದೇಶದಲ್ಲಿ ಬಹುತೇಕ ನದಿಗಳು ಕಲುಷಿತವಾಗಿದೆ, ತೆರೆದ ಬಾವಿ, ಬೋರ್ವೇಲ್ಗಳಲ್ಲಿ ನೀರಿನ ಪ್ರಮಾಣ ಕ್ಷೀಣಿಸುತ್ತಿದೆ. ಇದಕ್ಕೆ ಮೂಲ ಕಾರಣ ಪರಿಸರದಲ್ಲಿನ ಅಸಮಾತೋಲನ ವಾಗಿರುತ್ತದೆ ಆದ್ದರಿಂದ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕಿದೆ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮೋಹನ್ಪ್ರಭು ಮಾತನಾಡಿ, ಮೂಲ ಭೂತ ಸೌಕರ್ಯಗಳಲ್ಲಿ ಕುಡಿಯುವ ನೀರು ಎಲ್ಲಾರಿಗೂ ಅತ್ಯವಶ್ಯಕವಾಗಿದೆ. ಆದ್ದರಿಂದ ನೀರಿನ ಮಹತ್ವದ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯವಾಗಿದೆ ಎಂದು ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಪ್ರ.ದ. ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಜೆನಿಫರ್ ಲೋಲಿಟಾ, ವಕೀಲರ ಸಂಘದ ಅಧ್ಯಕ್ಷ ಸಿ.ಟಿ. ಜೋಸೆಫ್, ಕ.ರಾ.ಮಾ.ನಿ. ಮಂಡಳಿ ಪರಿಸರಾಧಿಕಾರಿ ಜಿ.ಆರ್. ಗಣೇಶನ್, ವಕೀಲ ಪಿ. ಪುಂಡರಿಕ, ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕ ಜಯಪ್ಪ, ಸ.ಪ್ರ.ದ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಕೆ.ಡಿ. ದಯಾನಂದ ಮತ್ತಿತರರು ಇದ್ದರು.