ಕುಶಾಲನಗರ, ನ. 17: ಕುಶಾಲನಗರದ ಐತಿಹಾಸಿಕ ಮಹಾಗಣಪತಿ ದೇವರ 97ನೇ ವಾರ್ಷಿಕ ರಥೋತ್ಸವ ಸಾವಿರಾರು ಸಂಖ್ಯೆಯ ಭಕ್ತಾದಿಗಳ ಸಮ್ಮುಖದಲ್ಲಿ ಇಂದು ಭಕ್ತಿಭಾವದಿಂದ ಜರುಗಿತು. ಕುಶಾಲನಗರ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಅಂದಾಜು 15 ಸಾವಿರಕ್ಕೂ ಅಧಿಕ ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡು ಪುನೀತರಾದ ದೃಶ್ಯ ಕಂಡುಬಂತು.
ರಥೋತ್ಸವದ ಅಂಗವಾಗಿ ಗಣಪತಿ ದೇವಾಲಯದಲ್ಲಿ ಬೆಳಿಗ್ಗೆಯಿಂದ ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ ನಂತರ ರಥಪೂಜೆ, ರಥಬಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ದೇವಾಲಯದ ಪ್ರಧಾನ ಅರ್ಚಕರಾದ ಆರ್.ಎಸ್. ಕಾಶೀಪತಿ ಮತ್ತು ಅರ್ಚಕರ ತಂಡದಿಂದ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಕುಶಾಲನಗರ ಶ್ರೀ ಗಣಪತಿ ದೇವಾಲಯ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ರಥೋತ್ಸವ ಸಂದರ್ಭ ಸಮಿತಿಯ ಉಪಾಧ್ಯಕ್ಷ ಆರ್. ಬಾಬು, ಗೌರವ ಕಾರ್ಯದರ್ಶಿ ಎಸ್.ಕೆ. ಶ್ರೀನಿವಾಸ್ರಾವ್, ಎಂ.ಕೆ. ದಿನೇಶ್ ಹಾಗೂ ಕಾರ್ಯಕಾರಿ ಮಂಡಳಿ ನೇತೃತ್ವದಲ್ಲಿ ನಡೆದ ರಥೋತ್ಸವ ಕಾರ್ಯಕ್ರಮದಲ್ಲಿ ದೇವಾಲಯದಿಂದ ರಥಬೀದಿ ಮೂಲಕ ಆಂಜನೇಯ ದೇವಸ್ಥಾನದವರೆಗೆ ಭಕ್ತಾದಿಗಳು ಜಯ ಘೋಷಣೆಗಳೊಂದಿಗೆ ಭಕ್ತಿಯಿಂದ
(ಮೊದಲ ಪುಟದಿಂದ) ರಥವನ್ನು ಎಳೆದೊಯ್ದರು. ಭಕ್ತಾದಿಗಳು ದೇವರಿಗೆ ಹಣ್ಣುಕಾಯಿ ಅರ್ಪಿಸಿ, ಭಕ್ತಿಯಿಂದ ವಿಘ್ನ ವಿನಾಯಕನಿಗೆ ನಮಿಸಿ ಪುನೀತರಾದರು. ರಥಕ್ಕೆ ಭಕ್ತಾದಿಗಳು ಹೂವು, ಬಾಳೆಹಣ್ಣು, ಜವುನ ಎಸೆಯುವದರೊಂದಿಗೆ ಭಕ್ತಿ ಪರಾಕಾಷ್ಟೆ ಮೆರೆದರು.
ರಥಬೀದಿಯ ಉದ್ದಗಲಕ್ಕೂ ಭಕ್ತಿ-ಭಾವಗಳೊಂದಿಗೆ ಭಕ್ತಾದಿಗಳು ರಥಕ್ಕೆ ನಮನ ಸಲ್ಲಿಸಿ, ಪೂಜೆಯಲ್ಲಿ ಪಾಲ್ಗೊಂಡರು. ರಥೋತ್ಸವದಲ್ಲಿ ಕುಶಾಲನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳು ಹಾಗೂ ನೆರೆಯ ಜಿಲ್ಲೆಗಳ ಸಾವಿರಾರು ಭಕ್ತರು ಪಾಲ್ಗೊಂಡರು.
ರಥೋತ್ಸವದ ಅಂಗವಾಗಿ ಭಕ್ತಾದಿಗಳು ದೇವಾಲಯದಿಂದ ರಥ ಬೀದಿಯ ಉದ್ದಕ್ಕೂ ಸಾವಿರಾರು ಸಂಖ್ಯೆಯಲ್ಲಿ ಈಡುಗಾಯಿ ಒಡೆದು ಹರಕೆ ತೀರಿಸುತ್ತಿದ್ದ ದೃಶ್ಯ ಗೋಚರಿಸಿತು. ರಥಬೀದಿಯ ವರ್ತಕರಿಂದ, ವಾಸವಿ ಯುವಜನ ಸಂಘ ಮೂಲಕ ಭಕ್ತಾದಿಗಳಿಗೆ ತಂಪುಪಾನೀಯ, ಸಿಹಿ ವಿತರಣೆ ನಡೆಯಿತು.
ಮೆರವಣಿಗೆ ಪ್ರಾರಂಭದಲ್ಲಿ ರಥದ ಮುಂಭಾಗದಲ್ಲಿ ಅಯ್ಯಪ್ಪ ವ್ರತಧಾರಿಗಳು ಕರ್ಪೂರ ಹಚ್ಚಿ ಅಯ್ಯಪ್ಪ ಸ್ಮರಣೆಯೊಂದಿಗೆ ದೇವರ ಕೀರ್ತನೆ ಹಾಡಿದರು.
ರಥೋತ್ಸವದ ನಂತರ ಗಣಪತಿ ರಥೋತ್ಸವ ಅನ್ನಸಂತರ್ಪಣ ಸಮಿತಿಯ ವತಿಯಿಂದ ರಥೋತ್ಸವದಲ್ಲಿ ಪಾಲ್ಗೊಂಡ ಭಕ್ತಾದಿಗಳಿಗೆ ಸ್ಥಳೀಯ ಮಾರುಕಟ್ಟೆ ರಸ್ತೆ ಗಾಯತ್ರಿ ಕಲ್ಯಾಣ ಮಂಟಪ ಆವರಣದಲ್ಲಿ ಅನ್ನಸಂತರ್ಪಣೆ ನಡೆಯಿತು.
ಜಾತ್ರೆ ಸಂದರ್ಭ ಸರಗಳ್ಳತನ, ಪಿಕ್ಪಾಕೆಟ್ ಪ್ರಕರಣಗಳು ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಡಿವೈಎಸ್ಪಿ ಸಂಪತ್ಕುಮಾರ್ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ಕ್ಯಾತೆಗೌಡ, ಠಾಣಾಧಿಕಾರಿಗಳಾದ ಜಗದೀಶ್, ಜೆ.ಇ. ಮಹೇಶ್, ಅನೂಪ್ ಮಾದಪ್ಪ, ಮಹೇಶ್ ಮತ್ತಿತರ ಅಧಿಕಾರಿಗಳು, ಸಿಬ್ಬಂದಿಗಳು ಸೂಕ್ತ ಬಂದೋಬಸ್ತ್ ಕಾರ್ಯ ನಿರ್ವಹಿಸಿದರು.
ಸಂಜೆ ದೇವರ ರಥವನ್ನು ಮಕ್ಕಳು, ಮಹಿಳೆಯರು ಆಂಜನೇಯ ದೇವಾಲಯ ಬಳಿಯಿಂದ ರಥಬೀದಿ ಮೂಲಕ ದೇವಾಲಯಕ್ಕೆ ಎಳೆದು ತಂದರು. ನಂತರ ರಾತ್ರಿ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವೆ, ಮಹಾಮಂಗಳರಾತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು. 97ನೇ ಗೋ ಪ್ರದರ್ಶನ ಮತ್ತು ಜಾತ್ರೆಯ ಅಂಗವಾಗಿ ತಾ. 27 ರಂದು ಬೆಳಿಗ್ಗೆ 10 ಗಂಟೆಗೆ ರಾಸುಗಳ ಆಯ್ಕೆ ನಡೆಯಲಿದೆ. ತಾ. 18 ರಂದು (ಇಂದಿನಿಂದÀ) 29ರ ತನಕ ಸಾಂಸ್ಕøತಿಕ ವೇದಿಕೆ ಕಾರ್ಯಕ್ರಮ ಗುಂಡೂರಾವ್ ಬಡಾವಣೆಯ ಜಾತ್ರಾ ಮೈದಾನದಲ್ಲಿ ನಡೆಯಲಿದೆ ಎಂದು ದೇವಾಲಯ ಕಾರ್ಯಕಾರಿ ಮಂಡಳಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ತಿಳಿಸಿದ್ದಾರೆ.