ಮಡಿಕೇರಿ, ಡಿ. 17: ಕೊಡಗು ಜಿಲ್ಲೆಯಲ್ಲಿ ಜಮ್ಮಾಬಾಣೆ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ನಿಗದಿ ಮಾಡಲಾಗುವದಿಲ್ಲ ಎಂದು ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ನೀಡಿರುವ ಹೇಳಿಕೆ ಸರಿಯಲ್ಲ ಎಂದು ಜಿಲ್ಲೆಯ ಶಾಸಕರಾದ ಕೆ.ಜಿ. ಬೋಪಯ್ಯ ಹಾಗೂ ಅಪ್ಪಚ್ಚುರಂಜನ್ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಮಡಿಕೇರಿಗೆ ಆಗಮಿಸಿದ್ದ ಸಚಿವರು ಈ ಬಗ್ಗೆ ನೀಡಿರುವ ಹೇಳಿಕೆ ಕುರಿತಾಗಿ ಈ ಹಿಂದೆ ಜಮ್ಮಾಬಾಣೆ ವಿಚಾರದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದ್ದ ಸಂದರ್ಭ ಹೋರಾಟ ನಡೆಸಿದ್ದ ಹಾಲಿ ಶಾಸಕರಾಗಿರುವ ಆ ಸಂದರ್ಭ ಸ್ಪೀಕರ್ ಕೂಡ ಆಗಿದ್ದ ಕೆ.ಜಿ. ಬೋಪಯ್ಯ ಹಾಗೂ ಸಚಿವರಾಗಿದ್ದ ಅಪ್ಪಚ್ಚುರಂಜನ್ ಅವರನ್ನು ‘ಶಕ್ತಿ' ಈ ಬಗ್ಗೆ ಸಂಪರ್ಕಿಸಿದ ಸಂದರ್ಭ ಅವರು ) ಹಿರಿಯ ರಾಗಿರುವ ಸಚಿವ ತಿಮ್ಮಪ್ಪ ಅವರು ಈ ಹೇಳಿಕೆ ನೀಡಬಾರದಿತ್ತು ಎಂದರು.

ಪೂರ್ಣ ಮಾಹಿತಿ ಇಲ್ಲದೆ ಸಚಿವರು ಈ ರೀತಿ ಹೇಳಿದ್ದಾರೆ. ಬಾಣೆ ಜಮೀನು ವಿಚಾರದಲ್ಲಿ ವಿಧಾನ ಸಭೆಯಲ್ಲಿ ಕಾನೂನು ತಿದ್ದುಪಡಿ ನಿರ್ಣಯ ಸರ್ವಾನುಮತದಿಂದ ಅಂಗೀಕಾರವಾಗಿದೆ. ರಾಷ್ಟ್ರಪತಿ ಗಳಿಂದಲೂ ಇದಕ್ಕೆ ಅಂಕಿತವಾಗಿದ್ದು, ಕಾಯ್ದೆಯಾಗಿ ರೂಪುಗೊಂಡಿದೆ. ಸಚಿವರು ಜವಾಬ್ದಾರಿ ಅರಿತು ನಡೆಯಬೇಕು. ಈ ರೀತಿ ಹೇಳಿಕೆ ನೀಡಿರುವದು ಹಿರಿಯರಾಗಿರುವ ಅವರಿಗೆ ಶೋಭೆ ಅಲ್ಲ ಎಂದು ಕೆ.ಜಿ. ಬೋಪಯ್ಯ ಹೇಳಿದರು. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಸ್ತಾಪಿಸಲಿರುವದಾಗಿ ಅವರು ತಿಳಿಸಿದರು.

ವಿಧಾನ ಸಭೆಯಲ್ಲಿ ಈ ಕುರಿತು ತಿದ್ದುಪಡಿಯಾಗಿ ಬಿಲ್ ಪಾಸ್ ಆಗಿದೆ. ಬಹುಶಃ ಸಚಿವರಿಗೆ ಅಧಿಕಾರಿಗಳು ಸೂಕ್ತ ಮಾಹಿತಿ ನೀಡಿಲ್ಲ. ಆದರೆ ಕಂದಾಯ ಸಚಿವರೇ ಹೀಗೆ ಹೇಳಿರುವದು ಸಮಂಜಸವಲ್ಲ. ವಿಧಾನಸಭೆಯಲ್ಲಿ ಬಿಲ್‍ಪಾಸ್ ಆದ ಬಳಿಕ ಅನುಷ್ಠಾನದ ಜವಾಬ್ದಾರಿ ಅಧಿಕಾರಿಗಳದ್ದು. ಜಮ್ಮಾ ವಿಚಾರ ರಾಜ್ಯದ ಇತರ ಭೂ ನಿಬಂಧನೆಗಳ ಮಾದರಿ ಅಲ್ಲ. ಇದು ಇಲ್ಲಿನ ಜನರ ವಿಶಿಷ್ಟ ಹಕ್ಕಾಗಿದೆ ಎಂದು ಶಾಸಕ ಅಪ್ಪಚ್ಚು ರಂಜನ್ ಪ್ರತಿಕ್ರಿಯಿಸಿದರು. ಈ ವಿಚಾರವನ್ನು ಅಧಿವೇಶನದಲ್ಲೂ ಪ್ರಸ್ತಾಪಿಸಲಾಗುವದು. ಅಗತ್ಯ ಬಿದ್ದರೆ ಮತ್ತೆ ಹೋರಾಟವನ್ನು ರೂಪಿಸ ಬೇಕಾಗುತ್ತದೆ ಎಂದು ಅವರು ಹೇಳಿದರು.

ಜಮ್ಮಾ ವಿಚಾರಕ್ಕೆ ಸಂಬಂಧಿಸಿ ದಂತೆ ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ತೀವ್ರ ಸ್ವರೂಪದ ಹೋರಾಟ ನಡೆದಿತ್ತು. ಕೊಡಗು ಬಂದ್, ರಾಜ್ಯೋತ್ಸವ ಬಹಿಷ್ಕಾರದೊಂದಿಗೆ ಬೆಂಗಳೂರು ಚಲೋ ಕಾರ್ಯಕ್ರಮವನ್ನು ಉದ್ದೇಶಿಸಲಾಗಿತ್ತು. ವಿಧಾನ ಸಭೆಯ ಒಳಗೆ ಹಾಗೂ ಹೊರಗೆ ನಡೆದ ಹೋರಾಟದ ಫಲವಾಗಿ ಇದು ವಿಧಾನಸಭೆಯಲ್ಲಿ ಸರ್ವಾನುಮತದಿಂದ ತಿದ್ದುಪಡಿಯಾಗಿ ಕಾಯ್ದೆಯಾಗಿ ರೂಪಿತವಾಗಿತ್ತು. ಬಳಿಕ ರಾಷ್ಟ್ರಪತಿ ಗಳಿಂದಲೂ ಇದಕ್ಕೆ ಅಂಕಿತ ದೊರೆತಿದ್ದನ್ನು ಇಲ್ಲಿ ಸ್ಮರಿಸಬಹುದು.