ಬೆಂಗಳೂರು, ಆ. 3 : ಬಗರ್ಹುಕುಂ ಅಡಿಯಲ್ಲಿ ಕಾನು, ಕುಮ್ಕಿ, ಸೊಪ್ಪಿನಬೆಟ್ಟ, ಜಮ್ಮಾ, ಬಾಣೆ ಜಮೀನುಗಳನ್ನು ಕಂದಾಯ ಜಮೀನು ಎಂದು ಪರಿಗಣಿಸುವಂತೆ ಆದೇಶ ಹೊರಡಿಸಿ ರುವದಾಗಿ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ. ಅಲ್ಲದೆ, ಬಗರ್ಹುಕುಂ ಅಡಿಯಲ್ಲಿ ಸಲ್ಲಿಕೆಯಾದ ಅರ್ಜಿಗಳನ್ನು ಡಿಸೆಂಬರ್ ವೇಳೆಗೆ ಸಂಪೂರ್ಣವಾಗಿ ಇತ್ಯರ್ಥ ಪಡಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ
ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಬಗರ್ಹುಕುಂ ಯೋಜನೆಯಡಿಯಲ್ಲಿ ಕಾನು, ಬಾಣೆ, ಕುಮ್ಕಿ, ಸೊಪ್ಪಿನಬೆಟ್ಟ ಹಾಗೂ ಜಮ್ಮಾ ಜಮೀನುಗಳನ್ನು ಪರಿಗಣಿಸ ಲಾಗುತ್ತಿರಲಿಲ್ಲ. ಆದೇಶದಲ್ಲಿ ಕಾನು, ಕುಮ್ಕಿ, ಸೊಪ್ಪಿನಬೆಟ್ಟ, ಜಮ್ಮಾ, ಬಾಣೆ ಎಂಬ ಉಲ್ಲೇಖವಿಲ್ಲದ ಕಾರಣ ಅರ್ಜಿಯನ್ನು ಅಧಿಕಾರಿಗಳು ಪರಿಗಣಿಸುತ್ತಿರಲಿಲ್ಲ. ಈ ಬಗ್ಗೆ ರೈತರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಈ ಜಮೀನುಗಳನ್ನು ಬಗರ್ ಹುಕುಂ ಯೋಜನೆ ಅಡಿಯಲ್ಲಿ ಪರಿಗಣಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಬಗರ್ಹುಕುಂ ಸಾಗುವಳಿ ಕುರಿತಂತೆ ರೈತರಿಂದ ಪ್ರತಿವಾರ ಅರ್ಜಿ ಸ್ವೀಕರಿಸಿ ಕೂಡಲೇ ವಿಲೇವಾರಿ ಮಾಡುವಂತೆ ತಹಶೀಲ್ದಾರ್‍ಗಳಿಗೆ ಸೂಚನೆ ನೀಡಲಾಗಿದೆ. ತಹಶೀಲ್ದಾರರು ಈ ಬಗ್ಗೆ ಪ್ರತಿವಾರ ಸಭೆ ನಡೆಸಬೇಕು. ಜಿಲ್ಲಾಧಿಕಾರಿಗಳು ಈ ಕುರಿತು ತಿಂಗಳಿಗೊಮ್ಮೆ ಸಭೆ ನಡೆಸಿ ಅರ್ಜಿ ವಿಲೇವಾರಿ ಮಾಡಬೇಕು. ಒಟ್ಟಾರೆ, ಡಿಸೆಂಬರ್ ಅಂತ್ಯದ ವೇಳೆಗೆ ಬಗರ್ಹುಕುಂ ಪ್ರಕರಣಗಳು ಇತ್ಯರ್ಥ ಗೊಳ್ಳಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಇದನ್ನು ನಿರ್ಲಕ್ಷಿಸುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವದು ಎಂದು ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.