ಗೋಣಿಕೊಪ್ಪಲು, ಆ. 4: ಪೊನ್ನಂಪೇಟೆ ಗ್ರಾ.ಪಂ.ನ ಗ್ರಾಮ ಸಭೆಯು ಟೌನ್ ಬ್ಯಾಂಕ್ ಮಹಡಿಯ ಮೇಲೆ ಪಂಚಾಯಿತಿ ಅಧ್ಯಕ್ಷೆ ಮೂಕಳೇರ ಸುಮಿತಾ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯಲ್ಲಿ ಹೋಂ ಸ್ಟೇ, ಗಡಿಗುರುತಿಸುವಿಕೆ, ಬಸ್ ತಂಗುದಾಣ, ಪಾರ್ಕಿಂಗ್ ವ್ಯವಸ್ಥೆ, ಮಾದಕ ವಸ್ತು ಮಾರಾಟ, ಅಕ್ರಮ ಸರಾಯಿ ಮಾರಾಟ, ಹಕ್ಕು ಪತ್ರ ವಿತರಣೆ ಸೇರಿದಂತೆ ಸಮಗ್ರ ಚರ್ಚೆ ನಡೆಸಲಾಯಿತು.

2012ರಲ್ಲಿ ಪೊನ್ನಂಪೇಟೆಯ ಶಾಂತಿ ನಗರ ಬಡಾವಣೆಯಲ್ಲಿ ತಲೆ ಎತ್ತಿ ನಿಂತಿರುವ ಹೋಂಸ್ಟೇಗೆ ಪಂಚಾಯಿತಿ ವತಿಯಿಂದ ಲೈಸನ್ಸ್ ನೀಡದಂತೆ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಹೋಂ ಸ್ಟೇ ಮಾಲೀಕರು ಆಗ್ಗಿಂದಾಗ್ಗೆ ಪಂಚಾಯಿತಿಗೆ ಲೈಸನ್ಸ್ ನೀಡುವಂತೆ ಅರ್ಜಿ ಬರೆದು ಅದರ ಪ್ರತಿಯನ್ನು ಪೊಲೀಸ್ ಠಾಣೆಗೆ ತೋರಿಸುತ್ತ ತೊಂದರೆ ನೀಡುತ್ತಿದ್ದಾರೆ. ಪಂಚಾಯಿತಿ ಈ ಬಗ್ಗೆ ನಿರ್ದಿಷ್ಟ ಕ್ರಮ ಕೈಗೊಳ್ಳಬೇಕೆಂದು ಠಾಣಾಧಿಕಾರಿ ಎಸ್.ಎನ್.ಜಯರಾಮ್ ಸಭೆಯಲ್ಲಿ ಪ್ರಸ್ತಾಪಿಸಿದರು.

ಈ ವಿಷಯ ಪ್ರಸ್ತಾಪ ವಾಗುತ್ತಿದ್ದಂತೆ ಚೀರಂಡ ಕಂದಾ ಭೀಮಯ್ಯ ಹಾಗೂ ಮಾಜಿ ಗ್ರಾ.ಪಂ. ಸದಸ್ಯ ಮೂಕಳೇರ ಮಧು ಕುಮಾರ್ ಅಧ್ಯಕ್ಷರ ಗಮನ ಸೆಳೆದು ಶಾಂತಿ ನಗರ ಜನವಸತಿ ಪ್ರದೇಶವಾಗಿರುವದರಿಂದ ಈ ಹಿಂದೆ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ಪಂಚಾಯಿತಿ ಲೈಸನ್ಸ್ ನೀಡದಂತೆ ತಡೆಹಿಡಿಯಲಾಗಿದೆ. ಈ ಬಾರಿ ನೂತನ ಆಡಳಿತ ಮಂಡಳಿ ಅನುಮತಿ ನೀಡುವ ಬಗ್ಗೆ ಕ್ರಮ ಕೈಗೊಂಡಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಸಮಜಾಯಿಷಿಕೆ ನೀಡಿ ಎಂದು ಒತ್ತಾಯಿಸಿದರು.

ಈ ಸಂದರ್ಭ ಪಿಡಿಓ ಶ್ರೀನಿವಾಸ್ ಮಾತನಾಡಿ, ಜನವಸತಿ ಪ್ರದೇಶದಲ್ಲಿ ಹೋಂಸ್ಟೇ ನಡೆಸಲು ಅವಕಾಶವಿಲ್ಲ. ಈ ಬಗ್ಗೆ ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಕಡ್ಡಾಯವಾಗಿದೆ ಎಂದರು. ಶಾಂತಿ ನಗರ ವಾರ್ಡ್‍ನ ಸದಸ್ಯ ಚಂದ್ರಸಿಂಗ್ ಮಧ್ಯ ಪ್ರವೇಶಿಸಿ ಮಾತನಾಡಿ, ಜನವಸತಿ ಪ್ರದೇಶದಲ್ಲಿ ಯಾವದೇ ಕಾರಣಕ್ಕೂ ಹೋಂಸ್ಟೇಗೆ ಅವಕಾಶ ಕಲ್ಪಿಸುವದಿಲ್ಲ. ಪಂಚಾಯಿತಿಯಲ್ಲೂ ಈ ಬಗ್ಗೆ ನಿರ್ಣಯ ಆಗಿರುವದರಿಂದ ಬಡಾವಣೆಯ ನಿವಾಸಿಗಳು ಆತಂಕ ಪಡಬೇಕಾಗಿಲ್ಲ ಎಂದರು. ಗ್ರಾಮಸ್ಥರು ಇದಕ್ಕೆ ಚಪ್ಪಾಳೆ ತಟ್ಟಿ ಪಂಚಾಯಿತಿಯ ಕಾರ್ಯವನ್ನು ಶ್ಲಾಘಿಸಿದರು.

ನಾಗರಿಕ ವೇದಿಕೆಯ ಪ್ರಮುಖರು ಪೊನ್ನಂಪೇಟೆಗೆ ಗಡಿ ಗುರುತಿಸುವಿಕೆ ಯಲ್ಲಿ ರೆವಿನ್ಯೂ ಇಲಾಖೆ ಎಡವಿದೆ. ನಿಗದಿತ ಸಮಯದಲ್ಲಿ ಗಡಿ ಗುರುತಿಸುವಿಕೆ ಮಾಡಿಲ್ಲ. ಕೂಡಲೇ ಗಡಿ ಗುರುತಿಸುವಿಕೆ ಮಾಡಬೇಕೆಂದು ಪ್ರಸ್ತಾಪಿಸಿದರು. ಈ ವಿಷಯಕ್ಕೆ ಧ್ವನಿಗೂಡಿಸಿದ ಮಾಜಿ ತಾ.ಪಂ. ಸದಸ್ಯ ಮೂಕಳೇರ ದಯಾ ಚಂಗಪ್ಪ ರೆವಿನ್ಯೂ ಇಲಾಖೆ ಚುನಾವಣೆ ಸಮಯದ ಕೊನೆ ಗಳಿಗೆಯಲ್ಲಿ ಗಡಿ ಗುರುತಿಸುವಿಕೆಯನ್ನು ರಾತೋರಾತ್ರಿ ಮಾಡಿರುವದರಿಂದ ತೊಂದರೆ ಎದುರಾಗಿದೆ. ಮುಂದೆ ಇದನ್ನು ಸರಿಯಾದ ರೀತಿಯಲ್ಲಿ ಮಾಡಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ. ನೂತನ ಸದಸ್ಯರುಗಳು 5 ವರ್ಷಗಳ ಅವಧಿಯಲ್ಲಿ ದೂರಾಲೋಚನೆಯ ಕಾರ್ಯಕ್ರಮ ಗಳನ್ನು ಪಟ್ಟಿ ಮಾಡಿ ಗ್ರಾಮದಲ್ಲಿ ಅಭಿವೃದ್ಧಿ ಕೆಲಸಕ್ಕೆ ಒತ್ತು ನೀಡಬೇಕು. ಪಂಚಾಯಿತಿಯ ಹಣವಲ್ಲದೆ ಶಾಸಕರು, ಸಂಸದರು, ಉಸ್ತುವಾರಿ ಸಚಿವರ, ಅನುದಾನವನ್ನು ಗ್ರಾಮಕ್ಕೆ ತರಲು ಎಲ್ಲರೂ ಒಟ್ಟಾಗಿ ಭೇಟಿ ಮಾಡಬೇಕು. ಈ ಕಾರ್ಯಕ್ಕೆ ತನ್ನ ಸಹಕಾರವಿದೆ ಎಂದು ಹೇಳಿದರು.

ಗ್ರಾಮಸ್ಥರಾದ ಐನಂಡ ಬೋಪಣ್ಣ ಮಾತನಾಡಿ, ಶಾಲಾ - ಕಾಲೇಜು ಬಿಡುವ ಸಮಯದಲ್ಲಿ ವಾಹನ ಸಂಚಾರ ಅಧಿಕವಿರುವದರಿಂದ ಆ ಸಂದರ್ಭದಲ್ಲಿ ಪೊಲೀಸ್ ನಿಯೋಜನೆ ಮಾಡಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು. ಗಾಂಜಾ ಮಾರಾಟಕ್ಕೆ ಕಡಿವಾಣ ಹಾಕಬೇಕು. ಮಾದಕ ವಸ್ತುವಿನ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು. ಇವರ ಪ್ರಶ್ನೆಗೆ ಉತ್ತರಿಸಿದ ಠಾಣಾಧಿಕಾರಿ ಜಯರಾಮ್ ಅವರು ಠಾಣೆಯಲ್ಲಿ ಸಿಬ್ಬಂದಿ ಕೊರತೆ ಇರುವದರಿಂದ ಸಿಬ್ಬಂದಿ ನಿಯೋಜನೆ ಮಾಡಲು ಕಷ್ಟವಾಗಿದೆ. 12 ಸಿಬ್ಬಂದಿಗಳ ಕೊರತೆಯಿದೆ. ಮುಂದೆ ನಾಲ್ಕು ಹೋಂ ಗಾರ್ಡ್ ನಿಯೋಜನೆ ಮಾಡುವ ಅವಕಾಶವಿದ್ದು ಇವರಿಂದ ಸಹಾಯ ಪಡೆಯುತ್ತೇವೆ. ಇಲಾಖೆಗೆ ಸಾರ್ವಜನಿಕರ ಸಹಕಾರ ಬೇಕಾಗಿದೆ. ಕಳ್ಳತನದ 2 ಪ್ರಕರಣಗಳು ಇನ್ನೂ ಪತ್ತೆಯಾಗಿಲ್ಲ. ಕೇರಳ ಮೂಲದವರು ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಗಾಂಜಾ, ಅಕ್ರಮ ಸಾರಾಯಿ ಮಾರಾಟಗಾರರ ಮೇಲೆ ಕ್ರಮ ಕೈಗೊಳ್ಳಲಾಗುವದು. ಟ್ರಾಫಿಕ್ ಸಮಸ್ಯೆ ಎದುರಾದಾಗ ಜನಪ್ರತಿನಿಧಿಗಳು ಶಿಫಾರಸ್ಸು ಮಾಡಿ ವಾಹನಗಳನ್ನು ಬಿಡುವಂತೆ ಒತ್ತಾಯಿಸುತ್ತಾರೆ. ಇದರಿಂದ ನಮಗೆ ತೊಂದರೆಯಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. ನಾಗರಿಕ ವೇದಿಕೆ ಹಾಗೂ ರೋಟರಿ ಸಂಸ್ಥೆ ಶಾಲಾ ವಿದ್ಯಾರ್ಥಿಗಳು ದಾಟುವ ರಸ್ತೆಗಳಿಗೆ ಜೀಬ್ರಾ ಕ್ರಾಸಿಂಗ್ ಮಾಡಲು ಧನ ಸಹಾಯ ಮಾಡುವದಾಗಿ ಸಭೆಯಲ್ಲಿ ತಿಳಿಸಿದರು.

ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಮಾತನಾಡಿ, ‘ನಮ್ಮ ಗ್ರಾಮ ನಮ್ಮ ಯೋಜನೆ’ಯಡಿ 5 ವರ್ಷಗಳಲ್ಲಿ ಕಾಮಗಾರಿಕೆಯನ್ನು ಗ್ರಾಮಸಭೆಯಲ್ಲಿ ಅನುಮೋದನೆ ಗೊಂಡು ಕಾಮಗಾರಿಗಳನ್ನು ಎ.ಬಿ.ಸಿ.ಡಿ ಯಾಗಿ ವಿಂಗಡಿಸಿ ತಾಲೂಕು ಸಮನ್ವಯ ಸಮಿತಿಯಿಂದ ಶಿಫಾರಸ್ಸುಗೊಂಡು ಜಿ. ಪಂಚಾಯಿತಿ ಮೂಲಕ ಅನುಮೋದಿಸಿ ಸರ್ಕಾರಕ್ಕೆ ಕಳುಹಿಸ ಬೇಕಾಗಿದೆ. ಆದಷ್ಟು ಕಾಮಗಾರಿಗಳು ಇವುಗಳಲ್ಲಿ ಸೇರಿಸುವ ಅವಕಾಶವಿದೆ ಎಂದು ಗ್ರಾಮಸ್ಥರಿಗೆ ಮಾಹಿತಿ ಒದಗಿಸಿದರು.

ಸಭೆಯಲ್ಲಿ 2016-17ನೇ ಸಾಲಿನ 14ನೇ ಹಣಕಾಸು ಕ್ರೀಯಾಯೋಜನೆಗೆ ಕಾಮಗಾರಿಗಳ ಆಯ್ಕೆ ನಡೆಯಿತು. ಅಂಬೇಡ್ಕರ್ ವಸತಿ ಯೋಜನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ‘ನಮ್ಮ ಗ್ರಾಮ ನಮ್ಮ ಯೋಜನೆ’ ಯಡಿ ಅಭಿವೃದ್ಧಿ ಯೋಜನೆ ರೂಪಿಸಲಾಯಿತು. ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಾಯಿತು. ನೋಡಲ್ ಅಧಿಕಾರಿಯಾಗಿ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಇ.ಇಬ್ರಾಹಿಂ ಸಮ್ಮುಖದಲ್ಲಿ ಗ್ರಾಮ ಸಭೆ ನಡೆಯಿತು. ಅಧ್ಯಕ್ಷೆ ಮೂಕಳೇರ ಸುಮಿತಾ ಮಾತನಾಡಿ, ಪಂಚಾಯಿತಿಯ ಅಭಿವೃದ್ಧಿಗೆ ಗ್ರಾಮದ ಜನತೆ ಕೈಜೋಡಿಸಬೇಕು. ಆಗಿಂದಾಗ್ಗೆ ಪಂಚಾಯಿತಿಗೆ ಆಗಮಿಸಿ ಯೋಜನೆಗಳನ್ನು ಪಡೆದುಕೊಳ್ಳಬೇಕು. ಶುಚಿತ್ವಕ್ಕೆ ಒತ್ತು ಕೊಡಬೇಕು ಎಂದರು.

ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕೆÀ್ಷ ಮಂಜುಳಾ ಸುರೇಶ್, ಸದಸ್ಯರಾದ ಲಕ್ಷಣ, ಹ್ಯಾರೀಸ್, ರಾಜು. ಪಿ.ಸಿ, ಅಮ್ಮತ್ತಿರ ಸುರೇಶ್, ಮೂಕಳೇರ ಕಾವೇರಮ್ಮ, ಅಣ್ಣೀರ ಹರೀಶ್, ಕಳಕಂಡ ಸುಮತಿ, ರಶಿಕ, ರೂಪ, ಮಂಜು, ಬೊಟ್ಟಂಗಡ ದಶಮಿ, ಯಶೋದ, ಎ.ಎಂ.ರಶೀದ್, ಸುಬೇದ, ಜಯಲಕ್ಷ್ಮ, ಜಿ.ಪಂ. ಸದಸೆÀ್ಯ ಶ್ರೀಜಾ ಸಾಜಿ ಅಚ್ಚುತ್ತನ್, ತಾ.ಪಂ. ಸದಸೆÀ್ಯ ಮೂಕಳೇರ ಅಶಾ, ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪೆಮ್ಮಂಡ ಮಾಯಮ್ಮ ಪ್ರಾರ್ಥಿಸಿ, ಕಳೆದ ಗ್ರಾಮ ಸಭೆಯ ನಡಾವಳಿಯನ್ನು ಗಣಪತಿ ಮಂಡಿಸಿದರು. ಸದಸ್ಯ ಅನೀಶ್ ಸ್ವಾಗತಿಸಿ, ರೂಪ.ಸಿ.ಎ ವಂದಿಸಿದರು.