ಗೋಣಿಕೊಪ್ಪಲು, ಡಿ. 25: ರಾಜ್ಯ ಸರ್ಕಾರದ ವತಿಯಿಂದ ಈಗಾಗಲೇ ರಾಜ್ಯದ ಎಲ್ಲೆಡೆ ಜಾತಿವಾರು ಸಮೀಕ್ಷೆ ಪೂರ್ಣಗೊಂಡಿದ್ದು, ಜನವರಿ ತಿಂಗಳಿನಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮೀಕ್ಷೆ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಬಣಜಿಗ, ಬಳೆ ಬಣಜಿಗ, ಶೆಟ್ಟಿ ಬಲಿಜ, ಬಲಿಜ, ನಾಯ್ಡು ಇತ್ಯಾದಿ ಹೆಸರಿನಲ್ಲಿ ನೋಂದಾವಣೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಪಟ್ಟಿ ಬಿಡುಗಡೆಯ ನಂತರ ಇಲ್ಲಿನ ಮೂಲ ಬಲಿಜ ಜನಾಂಗದ ಸಮಗ್ರ ಚಿತ್ರಣ ಸಿಗಲಿದೆ ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಮಾಹಿತಿ ನೀಡಿದರು.

ಗೋಣಿಕೊಪ್ಪಲಿನಲ್ಲಿ ತಾ.18 ರಂದು ಇಲ್ಲಿನ ಮಹಿಳಾ ಸಮಾಜದಲ್ಲಿ ಜಿಲ್ಲಾ ಬಲಿಜ ಸಮಾಜದ ನೂತನ ಕಾರ್ಯಕಾರಿ ಮಂಡಳಿ ಹಾಗೂ ಮೂರು ತಾಲೂಕಿನ ಅಧ್ಯಕ್ಷರ ಸಮ್ಮುಖದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಕೊಡಗಿನಲ್ಲಿ ಸುಮಾರು 8000 ಬಲಿಜ ಜನಾಂಗ ಇರುವ ಸಾಧ್ಯತೆ ಇದ್ದು, ಒಂದೊಮ್ಮೆ ಸಮೀಕ್ಷಾ ವರದಿಯಲ್ಲಿ ಸಮರ್ಪಕ ಮಾಹಿತಿ ಲಭ್ಯವಿಲ್ಲದಿದ್ದಲ್ಲಿ, ಬಿಟ್ಟು ಹೋದವರ ಹೆಸರನ್ನು ಸೇರಿಸುವ ಕೆಲಸ, ಆಧಾರ್ ಕಾರ್ಡ್ ಇತ್ಯಾದಿ ನೋಂದಾವಣೆ ಕಾರ್ಯವನ್ನು ಬಲಿಜ ಮುಖಂಡರು ಮಾಡಿಕೊಡುವ ಅಗತ್ಯವಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಕೊಡವ, ಅಮ್ಮಕೊಡವ, ಹೆಗ್ಗಡೆ, ಅರಮನೆ ಪಾಲೆ, ಬಿಲ್ಲವ ಮುಂತಾದ ಜನಾಂಗಗಳು ವಾರ್ಷಿಕವಾಗಿ ಕ್ರೀಡಾಕೂಟಗಳ ಮೂಲಕ ಒಗ್ಗೂಡುತ್ತಿದ್ದು, ಕ್ರೀಡಾ ಜಿಲ್ಲೆಯಾದ ಕೊಡಗಿನಲ್ಲಿ ಬಲಿಜ ಜನಾಂಗದ ಸಾಧಕರೂ ಇದ್ದಾರೆ. ಕೊಡಗು ಜಿಲ್ಲಾ ಮಟ್ಟದಲ್ಲಿ ಬಲಿಜ ಸಮಾಜ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲು ಸಲಹೆ ನೀಡಿದರು.

ಇದೇ ಸಂದರ್ಭ ಜಿಲ್ಲಾ ಬಲಿಜ ಸಮಾಜ ನೂತನ ಅಧ್ಯಕ್ಷ ಟಿ.ಎಲ್. ಶ್ರೀನಿವಾಸ್ ಅವರು, ಮುಂದಿನ ಜಿಲ್ಲಾ ಬಲಿಜ ಸಮಾಜ ಸಭೆಯನ್ನು ಕುಶಾಲನಗರದಲ್ಲಿ ಏರ್ಪಡಿಸಲಾಗಿದ್ದು, ಬೈಲಾ ರಚನೆ, ನೋಂದಾವಣೆ ಕಾರ್ಯ ಇತ್ಯಾದಿ ಅಗತ್ಯ ಕಾರ್ಯಯೋಜನೆಯನ್ನು ಚರ್ಚಿಸಲಾಗುವದು ಎಂದು ಹೇಳಿದರು.

ಸನ್ಮಾನ ಸಂದರ್ಭ ಜಿಲ್ಲಾ ಬಲಿಜ ಸಮಾಜ ಕಾನೂನು ಸಲಹೆಗಾರ, ವಕೀಲ ಸಂಜಯ್ ರಾಜ್, ಪ್ರಧಾನ ಕಾರ್ಯದರ್ಶಿ ಟಿ.ವಿ. ಲೋಕೇಶ್, ಮಡಿಕೇರಿ ತಾಲೂಕು ಬಲಿಜ ಸಮಾಜ ಅಧ್ಯಕ್ಷೆ ಮೀನಾಕ್ಷಿ ಕೇಶವ್, ಉಪಾಧ್ಯಕ್ಷ ಉದಯ್‍ಕುಮಾರ್, ವೀರಾಜಪೇಟೆ ಬಲಿಜ ಸಮಾಜ ಅಧ್ಯಕ್ಷ ಗಣೇಶ್ ನಾಯ್ಡು, ಸೋಮವಾರಪೇಟೆ ತಾಲೂಕು ಬಲಿಜ ಸಮಾಜ ಅಧ್ಯಕ್ಷ ಟಿ.ಎಸ್. ಬಾಲಕೃಷ್ಣ, ಮದಲಾಪುರದ ಬಲಿಜ ಪ್ರಮುಖ ಟಿ.ಆರ್. ಪ್ರಸನ್ನ ಮುಂತಾದವರು ಉಪಸ್ಥಿತರಿದ್ದರು.