ಕುಶಾಲನಗರ, ಜ. 16: ಕೊಡಗು ಜಿಲ್ಲಾ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಗೆ ಮತ್ತು ಆಹಾರ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆದರೂ ಉದ್ಘಾಟನಾ ಸಮಾರಂಭ ಸೇರಿದಂತೆ ಬಹುತೇಕ ಗೋಷ್ಠಿಗಳು ನೀರಸವಾಗಿ ಕಂಡುಬರುವದರೊಂದಿಗೆ ಹಲವು ನ್ಯೂನತೆಗಳ ಕೂಗು ಕೇಳಿಬಂದವು.
ಸಾವಿರಾರು ಸಂಖ್ಯೆಯ ಶಾಲಾ ವಿದ್ಯಾರ್ಥಿಗಳಿಂದ ಮೆರಗು ಕಂಡ ಮೆರವಣಿಗೆ ನಂತರ ಇಡೀ ಸಮ್ಮೇಳನ ಸಭಾಂಗಣವನ್ನು ತುಂಬುವಂತೆ ಮಾಡಿದರೆ.
ಉದ್ಘಾಟನೆಯ ನಂತರ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಮತ್ತು ಆಶಯ ನುಡಿಗಳಾಡಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ವೇದಿಕೆಯಿಂದ ನಿರ್ಗಮಿಸುತ್ತಿದ್ದಂತೆಯೇ ಅವರ ಬೆಂಬಲಿಗರು ಹಾಗೂ ಮಾಧ್ಯಮ ಮಿತ್ರರ ಕುರ್ಚಿಗಳು ಖಾಲಿಯಾಗ ತೊಡಗುವದರೊಂದಿಗೆ ನಂತರದ ಕಾರ್ಯಕ್ರಮ ಕಳೆಗುಂದಲು ಕಾರಣವಾಯಿತು ಎನ್ನಬಹುದು. ಇಲ್ಲಿ ಸಮ್ಮೇಳನಾಧ್ಯಕ್ಷರ ಭಾಷಣವನ್ನು ಕೇಳುವ ತವಕ ಯಾರಿಗೂ ಇಲ್ಲದಿರುವದು ಅಭಾಸ ಉಂಟು ಮಾಡಿತು.
ದಿವ್ಯ ಸಾನಿಧ್ಯ ವಹಿಸಿದ್ದ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಂಘಟಕರೊಂದಿಗೆ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು ಗೋಚರಿಸಿತು. ಸಮ್ಮೇಳನದ ಪ್ರಥಮ ದಿನ ಪ್ರತಿಯೊಬ್ಬರ ಬಾಯಲ್ಲಿ ಕೇಳಿಬಂದ ನ್ಯೂನತೆಗಳು ಹಾಗೂ ಕಂಡುಬಂದ ದೃಶ್ಯಗಳು ಈ ಕೆಳಗಿನಂತಿವೆ. ಮೆರವಣಿಗೆ ಸಂದರ್ಭ ಆಂಗ್ಲಭಾಷೆಯ ಫಲಕದೊಂದಿಗೆ ಶಾಲೆಯೊಂದರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಕೂಡ ಕನ್ನಡ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಯಿತು. ಇದನ್ನು ಗಮನಿಸಿದ ಸಂಘಟಕರು ಫಲಕವನ್ನು ತೆರವುಗೊಳಿಸಲು ಮುಂದಾಗ ಬೇಕಾಯಿತು.
ಪ್ರಾರಂಭದಲ್ಲಿ ಕೆಲವು ಕಾರ್ಯಕ್ರಮಗಳ ಉದ್ಘಾಟನಾ ಸಂದರ್ಭ ಉದ್ಘಾಟಕರಿಗೆ ಆಹ್ವಾನ ಪತ್ರಿಕೆ ತಲುಪಿಲ್ಲ ಎನ್ನುವ ಸಂದೇಶಗಳು ಅಲ್ಲಲ್ಲಿ ಕೇಳಿಬರತೊಡಗಿ ಒಟ್ಟು ಆಹ್ವಾನ ಪತ್ರಿಕೆಯಲ್ಲಿ ಮುದ್ರಣವಾಗಿದ್ದ ಬಹುತೇಕರಿಗೆ ಆಹ್ವಾನ ದೊರಕದೆ ಅಧ್ವಾನ ಸೃಷ್ಠಿಯಾಗಿ ಸುದ್ದಿಮನೆ, ಕೆಲವು ಘಟಕಗಳ ಚಾಲನೆ ಸಂದರ್ಭ ಸ್ವಲ್ಪಕಾಲ ಗೊಂದಲ ಉಂಟಾಯಿತು.
ಶಾಸಕ ಕೆ.ಜಿ. ಬೋಪಯ್ಯ ಅವರಿಗೂ ಆಹ್ವಾನ ಪತ್ರ ತಲಪಿಲ್ಲ ಎನ್ನುವ ಮಾತು ಕೇಳಿಬರುವದಕ್ಕೆ ಪುಷ್ಠಿ ಎಂಬಂತೆ ಸಮ್ಮೇಳನಕ್ಕೆ ಗೈರು ಹಾಜರಾಗಿದ್ದ ಶಾಸಕ ಬೋಪಯ್ಯ ಅವರು ಕುಶಾಲನಗರದಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಕಂಡುಬಂದು ಇದನ್ನು ಖಾತರಿ ಮಾಡಿದೆ ಎನ್ನಬಹುದು.
ಬಹುತೇಕ ಗೋಷ್ಠಿಗಳಲ್ಲಿ ಸಂಘಟಕರೂ ಸೇರಿದಂತೆ ಸಭಿಕರ ಕೊರತೆಯೊಂದಿಗೆ ಖಾಲಿ ಕುರ್ಚಿಗಳು ವೇದಿಕೆಯಲ್ಲಿದ್ದ ಗಣ್ಯರನ್ನು ಅಣಕಿಸುವಂತೆ ಕಂಡುಬಂತು.
ಉದ್ಘಾಟನಾ ಸಮಾರಂಭದ ನಂತರ ಸಮಯಕ್ಕೂ ಬೆಲೆ ನೀಡುವಲ್ಲಿ ವೈಫಲ್ಯ ಕಂಡ ಸಂಘಟಕರು ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಂಡುಬಂದಿಲ್ಲ. ಗೋಷ್ಠಿಯಲ್ಲಿ ಪಾಲ್ಗೊಳ್ಳಲು ಸಮಯಕ್ಕೆ ಸರಿಯಾಗಿ ಬಂದ ಕೆಲ ಗಣ್ಯರು ಇದರಿಂದ ಅಸಮಾಧಾನಗೊಂಡು ಹಿಂತಿರುಗಿದ್ದು ಕೂಡ ನಡೆದಿದೆ. ಬಹುತೇಕ ಗೋಷ್ಠಿಗಳಲ್ಲಿ ಪಾಲ್ಗೊಳ್ಳಬೇಕಾದ ಅತಿಥಿಗಳಿಗೆ ಶಿಷ್ಟಾಚಾರಕ್ಕಾದರೂ ಆಹ್ವಾನ ಪತ್ರಿಕೆ ನೀಡಬೇಕಾದ ಸಂಘಟಕರು ಆಹ್ವಾನ ನೀಡದೆ ಕನಿಷ್ಟ ದೂರವಾಣಿ ಸಂಪರ್ಕ ಮಾಡದೆ ಕಾಟಾಚಾರಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ಮುದ್ರಿಸಿದಂತೆ ಭಾಸವಾಯಿತು. ಮಾಧ್ಯಮ ಗೋಷ್ಠಿಯಲ್ಲಿ ಅಧ್ಯಕ್ಷತೆ ವಹಿಸಬೇಕಾಗಿದ್ದ ಸಂಸದರ ಗೈರು ಹಾಜರಿಯೊಂದಿಗೆ ಗೌರವ ಉಪಸ್ಥಿತಿ ಎಂದು ಮುದ್ರಣವಾಗಿದ್ದ ಪ್ರಮುಖ ಸಂಘಟನೆಗಳ ಯಾರೊಬ್ಬರೂ ಪಾಲ್ಗೊಳ್ಳದಿರುವದು ಕಂಡುಬಂತು. ಆಹ್ವಾನ ಪತ್ರಿಕೆ ನೀಡದೆ ಯಾವದೇ ಮಾಹಿತಿ ಒದಗಿಸದೆ ಕಾರ್ಯಕ್ರಮ ಸಂಘಟಿಸಿರುವದು ಈ ಗೈರು ಹಾಜರಿಗೆ ಕಾರಣ ಎನ್ನುವದು ಮೂಲಗಳಿಂದ ತಿಳಿದುಬಂತು. ಅಧ್ಯಕ್ಷತೆ ವಹಿಸಲು ಕೊರತೆ ಸೃಷ್ಠಿಯಾದಾಗ ಸಭೆಯಲ್ಲಿ ಆಸೀನರಾಗಿದ್ದ ಹಿರಿಯರೊಬ್ಬರನ್ನು ಅಧ್ಯಕ್ಷತೆ ವಹಿಸಲು ಮನವಿ ಮಾಡಬೇಕಾದ ಪ್ರಮೇಯವೂ ಒದಗಿಬಂತು.
ಗೋಷ್ಠಿಗಳ ನಿರ್ವಹಣೆ, ನಿರೂಪಣೆ ಮಾಡಬೇಕಾದ ಜವಾಬ್ದಾರಿ ಹೊತ್ತ ಸಂಘಟಕರಲ್ಲಿ ಕೆಲವರು ತಮಗೆ ಅರಿವಿಲ್ಲದಂತೆ ಜವಾಬ್ದಾರಿಯಿಲ್ಲದೆ ಗೈರು ಹಾಜರಾಗಿರುವದು ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಮುಜುಗರ ಉಂಟು ಮಾಡಿದೆ ಎಂದರೆ ತಪ್ಪಾಗಲಾರದು. ಸಮ್ಮೇಳನದ ಪ್ರಥಮ ದಿನ ಮಧ್ಯಾಹ್ನ 2.15 ಕ್ಕೆ ನಿಶ್ಚಿತವಾಗಿದ್ದ ಕೊಡವ ಅರಿವೋಲೆ ನಿಘಂಟು ಬಿಡುಗಡೆ ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಕುಲಪತಿಗಳು, ಕುಲಸಚಿವರು ಉಪಸ್ಥಿತರಿರಬೇಕಿದ್ದ ಗೋಷ್ಠಿ ದಿಢೀರನೆ ರದ್ದುಗೊಂಡಿರುವ ಬಗ್ಗೆ ಯಾರಿಗೂ ಸಮರ್ಪಕ ಮಾಹಿತಿ ಒದಗದಿರುವದು ಸಭಿಕರ ನಡುವೆ ಗೊಂದಲಕ್ಕೆ ಕಾರಣವಾಯಿತು. ಆಹ್ವಾನ ಪತ್ರಿಕೆಯಲ್ಲಿ 400 ಕ್ಕೂ ಅಧಿಕ ಗಣ್ಯರು, ಮತ್ತಿತರರ ಉಪಸ್ಥಿತಿಯ ಬಗ್ಗೆ ಮುದ್ರಣಗೊಂಡಿದ್ದರೂ ಶೇ. 40 ಕ್ಕೂ ಅಧಿಕ ಮಂದಿ ಅತಿಥಿಗಳಿಗೆ ಆಹ್ವಾನ ಪತ್ರಿಕೆ ತಲಪಿಸಿಲ್ಲ ಎನ್ನುವದೇ ಈ ಎಲ್ಲಾ ಧಾವಂತಗಳಿಗೆ ಪ್ರಮುಖ ಕಾರಣ ಎನ್ನಲಾಗಿದೆ.
ಎರಡನೇ ದಿನ ಗೋಷ್ಠಿಗಳಲ್ಲಿ ಸಭಿಕರಾಗಿ ಮಕ್ಕಳನ್ನು ಬಲವಂತವಾಗಿ ಕೂರುವಂತೆ ಮಾಡಿದ್ದು ವಿದ್ಯಾರ್ಥಿಗಳಲ್ಲಿ ಅಸಹನೆ ಮೂಡಿದಂತೆ ಕಂಡುಬಂದು ವೇದಿಕೆಗೂ ತಮಗೂ ಸಂಬಂಧವಿಲ್ಲದಂತೆ ವರ್ತನೆ ಕಾಣುತಿತ್ತು. ಸ್ಥಳೀಯ ಕಾಲೇಜೊಂದರ ಪೊಲೀಸ್ ಕೆಡೆಟ್ ತಂಡದ ಸದಸ್ಯರು ಮಕ್ಕಳನ್ನು ಬೆತ್ತ ಹಿಡಿದು ನಿಯಂತ್ರಿಸುತ್ತಿದ್ದ ದೃಶ್ಯ ಸಾಮಾನ್ಯ ವಾಗಿತ್ತು. ಸ್ಥಳೀಯ ಯಾವುದೇ ಸಾರ್ವಜನಿಕರು ಗೋಷ್ಠಿಗಳಲ್ಲಿ ಪಾಲ್ಗೊಳ್ಳದಿರುವದು ಎದ್ದು ಕಾಣುತ್ತಿತ್ತು. ಉಳಿದಂತೆ ಮೆರವಣಿಗೆ, ಆಹಾರ, ಪುಸಕ್ತ ಮಳಿಗೆ, ಕೃತಿಗಳ ಬಿಡುಗಡೆ, ಸ್ಮರಣ ಸಂಚಿಕೆ ಬಿಡುಗಡೆ ಸೇರಿದಂತೆ ಹಣಕಾಸು ಸಮಿತಿ ತಮ್ಮ ಕರ್ತವ್ಯವನ್ನು ಸ್ವತಂತ್ರವಾಗಿ ಮಾಡಿ ಅಕ್ಷರ ಜಾತ್ರೆಯಲ್ಲಿ ಭೇಷ್ ಎನ್ನುವಂತೆ ಮಾಡಿದ್ದು ಎಲ್ಲರ ಶ್ಲಾಘನೆಗೆ ಪಾತ್ರವಾಗಿದ್ದು ಸತ್ಯ.
ಒಟ್ಟಾರೆ ಸರಕಾರದ ಅನುದಾನ, ಸಾರ್ವಜನಿಕರಿಂದ ಹಾಗೂ ದಾನಿಗಳಿಂದ ಕನ್ನಡದ ಭಾಷೆಯ ಅಭಿವೃದ್ಧಿ ಹೆಸರಿನಲ್ಲಿ ಸಂಗ್ರಹಿಸಲಾದ ಹಣದ ಮೂಲಕ ನಡೆದ ಅಕ್ಷರ ಜಾತ್ರೆ ಬಹುತೇಕ ಸಂಘಟಕರ ದಿವ್ಯ ನಿರ್ಲಕ್ಷ್ಯ ಮನೋಭಾವದೊಂದಿಗೆ ನಡೆಯಿತು ಎಂದರೆ ತಪ್ಪಾಗಲಾರದು. ಮುಂದಿನ ದಿನಗಳಲ್ಲಿ ನಡೆಯುವ ಅಕ್ಷರ ಜಾತ್ರೆಗಳಲ್ಲಿ ಇಂತಹ ಅಚಾತುರ್ಯಗಳು ಮರುಕಳಿಸಬಾರದು ಎನ್ನುವದೇ ಈ ವರದಿಯ ಕಳಕಳಿಯಾಗಿದೆ.
- ಸಿಂಚು