ಕುಶಾಲನಗರ, ಜ. 17: ಹಾರಂಗಿ ಮತ್ತು ಹೇಮಾವತಿ ಜಲಾಶಯದ ನಿರ್ಮಾಣದಿಂದ ಹಾಗೂ ಜಲಾನಯನ ಹಿನ್ನೀರಿನಿಂದ ಸೋಮವಾರಪೇಟೆ ತಾಲೂಕಿನ ಶೀತ ಪೀಡಿತ ಪ್ರದೇಶಗಳಲ್ಲಿ ಜನರಿಗೆ ಒದಗಿಸಿರುವ ಮೂಲಭೂತ ಸವಲತ್ತುಗಳ ಬಗ್ಗೆ ಪರಿಶೀಲನೆ ನಡೆಸುವದರೊಂದಿಗೆ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸ ಲಾಗುವದು ಎಂದು ವಿಧಾನಸಭೆಯ ಸರಕಾರಿ ಭರವಸೆಗಳ ಸಮಿತಿಯ ಅಧ್ಯಕ್ಷ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.ಅವರು ದುಬಾರೆ ಜಂಗಲ್ ಲಾಡ್ಜ್ ಸಭಾಂಗಣದಲ್ಲಿ 2006 ರಲ್ಲಿ ಅಂದಿನ ಶಾಸಕ ಬಿ.ಎ.ಜೀವಿಜಯ ಅವರ ಪ್ರಶ್ನೆಗೆ ಸಂಬಂಧಿಸಿದಂತೆ ಶೀತಪೀಡಿತವಾಗಿರುವ ಸ್ಥಳಗಳಲ್ಲಿ ಅಧಿಕಾರಿಗಳು ತೆಗೆದುಕೊಂಡ ಕ್ರಮದ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಭರವಸೆ ಕಾರ್ಯಗತ ಬಗ್ಗೆ ಮಾಹಿತಿ ಕಲೆಹಾಕಿ ಶೀತಲ ಪ್ರದೇಶದ ಅಭಿವೃದ್ಧಿ ಹಿನ್ನಲೆಯಲ್ಲಿ 5 ಗ್ರಾಮಗಳಾದ ಜನಾರ್ಧನಹಳ್ಳಿ, ಮಾವಿನಹಳ್ಳಿ, ಮಾಗಡಿಹಳ್ಳಿ, ಹಿಪ್ಪಗಳಲೆ, ಹೊನ್ನೆಕೋಡಿ ವ್ಯಾಪ್ತಿಗೆ ಭೇಟಿ ನೀಡಲಾಗುವದು. ಜನರ ಸಮಸ್ಯೆಗಳನ್ನು ಅರ್ಥೈಸಿಕೊಳ್ಳುವದು ಹಾಗೂ ಈ ಬಗ್ಗೆ ಸರಕಾರದಲ್ಲಿ ವರದಿ ಮಂಡನೆ ಮಾಡಲಾಗುವದು ಎಂದು ತಿಳಿಸಿದ್ದಾರೆ.

ವಿಧಾನಸಭೆ ಸದಸ್ಯರು ಹಾಗೂ ಸಮಿತಿ ಸದಸ್ಯ

(ಮೊದಲ ಪುಟದಿಂದ) ಬಿ.ಎ. ಮೊೈದಿನ್ ಬಾವಾ, ಎಸ್.ಟಿ. ಸೋಮಶೇಖರ್, ಲಕ್ಷ್ಮಣ ಸಂಗಪ್ಪ ಸವದಿ, ಗೋವಿಂದ ಎಂ ಕಾರಜೋಳ, ಎಸ್. ಚಿಕ್ಕಮಾದು ಸೇರಿದಂತೆ 10 ಕ್ಕೂ ಅಧಿಕ ಸದಸ್ಯರು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.

ಜಲಸಂಪನ್ಮೂಲ ಇಲಾಖೆ, ಕಾವೇರಿ ನೀರಾವರಿ ನಿಗಮ, ಕಂದಾಯ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಸರಕಾರಿ ಭರವಸೆಗಳ ಸಮಿತಿ ಪ್ರಮುಖರು ನಂತರ ಹಾರಂಗಿ ಮತ್ತು ಹೇಮಾವತಿ ಅಣೆಕಟ್ಟು ಹಿನ್ನೀರಿನ ಗ್ರಾಮಗಳಿಗೆ ಭೇಟಿ ನೀಡಿ ವಾಸ್ತವಾಂಶದ ಬಗ್ಗೆ ಪರಿಶೀಲನೆ ನಡೆಸಿದರು.

ಈ ಸಂದರ್ಭ ಭರವಸೆಗಳ ಸಮಿತಿಯ ಜಂಟಿ ಕಾರ್ಯದರ್ಶಿ ಶಶಿಕಲಾ ಭಟ್, ಅಧೀನ ಕಾರ್ಯದರ್ಶಿ ಎಂ.ಎಸ್. ಕ್ಷಮಾ, ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾರ್ಯದರ್ಶಿ ರಾಮಚಂದ್ರ, ಕೊಡಗು ಅರಣ್ಯ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಉಪವಿಭಾಗಾಧಿಕಾರಿ ಡಾ. ನಂಜುಂಡೇಗೌಡ, ತಹಶೀಲ್ದಾರ್ ಕೃಷ್ಣ, ಸೋಮವಾರಪೇಟೆ ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಎಸ್. ಚಿಣ್ಣಪ್ಪ, ವಲಯ ಅರಣ್ಯಾಧಿಕಾರಿ ನೆಹರು ಮತ್ತಿತರ ಇಲಾಖೆಗಳ ಪ್ರಮುಖರು ಇದ್ದರು.