ಮಡಿಕೇರಿ, ನ. 9: ಕೊಡಗಿನ ಮೂಲಭೂತ ಸಮಸ್ಯೆಗಳ ಕುರಿತು ಜಿಲ್ಲೆಯ ಜನತೆಯನ್ನು ನಿರಂತರವಾಗಿ ವಂಚಿಸುತ್ತಲೇ ಬಂದಿರುವ ಭಾರತೀಯ ಜನತಾ ಪಕ್ಷ, ತನ್ನ ಈ ಎಲ್ಲಾ ವಿಚಾರಗಳನ್ನು ಮರೆ ಮಾಡಲು ಇದೀಗ ಟಿಪ್ಪು ವಿರೋಧಿ ವಿಚಾರವÀನ್ನು ಹರಿಯಬಿಟ್ಟಿದೆ ಎಂದು ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಡಾ. ಇ.ರ. ದುರ್ಗಾಪ್ರಸಾದ್ ಆರೋಪಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಫಿಗೆ ಬೆಂಬಲ ಬೆಲೆ, ಬಾಣೆ ಒಡೆತನದ ಪ್ರಶ್ನೆ, ಕಸ್ತೂರಿ ರಂಗನ್ ವರದಿ, ಕೊಡಗಿಗೆ ಪ್ರತ್ಯೇಕ ಲೋಕಸಭಾ ಸ್ಥಾನ, ದೇವಟ್ ಪರಂಬುವಿನಲ್ಲಿ ಸ್ಮಾರಕ ನಿರ್ಮಾಣ ಸೇರಿದಂತೆ ಪ್ರತಿಯೊಂದು ವಿಚಾರದಲ್ಲೂ ಬಿಜೆಪಿ ಕೊಡಗಿನ ಜನತೆಯ ಹಾದಿ ತಪ್ಪಿಸುತ್ತಲೇ ಬಂದಿದೆ. ಇದೀಗ ತನ್ನ ವಂಚನೆಯನ್ನು ಮರೆ ಮಾಚಲು ಟಿಪ್ಪು ಜಯಂತಿ ವಿರೋಧಿ ವಿಚಾರವನ್ನು ಪ್ರಸ್ತಾಪಿಸುತ್ತಿರುವದಾಗಿ ಟೀಕಿಸಿದರು.
ಟಿಪ್ಪು ಸುಲ್ತಾನ್ ಕೊಡವರನ್ನು ಹತ್ಯೆ ಮಾಡಿದ್ದಾನೆ, ಆತ ಕನ್ನಡ ವಿರೋಧಿ ಎನ್ನುವ ಬಿಜೆಪಿ, ನಾವು ಮುಸ್ಲಿಂ ವಿರೊಧಿಗಳಲ್ಲ, ಟಿಪ್ಪುವನ್ನು ಮಾತ್ರ ವಿರೋಧಿಸುವದಾಗಿ ಹೇಳುತ್ತಿದೆ. ಕೊಡವರನ್ನು ಕೊಂದವನು ಎನ್ನುವ ಕಾರಣಕ್ಕೆ ಟಿಪ್ಪುವನ್ನು ವಿರೋಧಿಸುವದಾದಲ್ಲಿ ಅದೇ ರೀತಿ ನಡೆದುಕೊಂಡಿದ್ದ ಮತ್ತು ಟಿಪ್ಪುಗಿಂತಲೂ ಕ್ರೌರ್ಯ ಮೆರೆದಿದ್ದ ಕೊಡಗಿನ ಹಾಲೇರಿ ರಾಜರನ್ನು ಬಿಜೆಪಿ ವಿರೋಧಿಸುತ್ತಿಲ್ಲವೇಕೆ ಎಂದು ದುರ್ಗಾಪ್ರಸಾದ್ ಪ್ರಶ್ನಿಸಿದರು.
ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನಲ್ಲ ಎನ್ನುವದು ಬಿಜೆಪಿ ಆಕ್ಷೇಪ. ಆದರೆ, ಇಂತಹ ವಿಚಾರವನ್ನು ಎತ್ತುವ ಬಿಜೆÀಪಿ ಸ್ವಾತಂತ್ರ್ಯ ಹೋರಾಟದ ಪರಂಪರೆಯನ್ನು ಹೊಂದಿದೆಯೆ ಎಂದು ಪ್ರಶ್ನಿಸಬೇಕಾಗುತ್ತದೆ. ಬಿಜೆಪಿ ಎನ್ನುವದು ಜನಸಂಘದ ಪಕ್ಷದ ಮುಂದುವರಿಕೆಯಾಗಿದೆ. ಈ ಪಕ್ಷ ಆರ್ಎಸ್ಎಸ್ ಸಂಘಟನೆಯ ಶಿಶು. ಬ್ರಿಟೀಷರ ವಿರುದ್ಧದ ಸ್ವಾತಂತ್ರ್ಯ ಚಳುವಳಿಯಲ್ಲಿ ಬ್ರ್ರಿಟೀಷರಿಗಿಂತ ಮೊದಲೇ ಮುಸಲ್ಮಾನರು ಈ ದೇಶಕ್ಕೆ ಆಕ್ರಮಣಕಾರಿಗಳಾಗಿ ಬಂದಿದ್ದಾರೆ. ಆದ್ದರಿಂದ ಸ್ವಾತಂತ್ರ್ಯಕ್ಕಾಗಿನ ಹೋರಾಟ ಬ್ರಿಟೀಷರಿಗಿಂತ ಮೊದಲು ಮುಸ್ಲಿಮರ ವಿರುದ್ಧ ನಡೆಯಬೇಕೆಂದು ವಾದ ಮಂಡಿಸಿ ಸ್ವಾತಂತ್ರ್ಯ ಹೋರಾಟದಲ್ಲಿ ಒಂದು ಸಂಘಟನೆಯಾಗಿ ಇದು ಪಾಲ್ಗೊಂಡಿರಲಿಲ್ಲ. ಇಂತಹವರು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಅಲ್ಲ ಎನ್ನುವದು ವಂಚನೆಯಾಗಿದೆಯೆಂದು ಡಾ. ದುರ್ಗಾಪ್ರಸಾದ್ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸಾಬು ಉಪಸ್ಥಿತರಿದ್ದರು.