ಮಡಿಕೇರಿ, ಡಿ. 5: ಸರ್ಕಾರ ಮೂರು ವರ್ಷಗಳ ಆಡಳಿತ ಪೂರೈಸಿ ಮುನ್ನಡೆಯುತ್ತಿದೆ. ಈ ಅವಧಿಯಲ್ಲಿ ಹಲವಾರು ಜನಪರ ಯೋಜನೆಗಳು ಜಾರಿಗೊಂಡಿವೆ. ಮತ್ತಷ್ಟು ಜಾರಿಗೊಳ್ಳುವ ದಿಸೆಯಲ್ಲಿವೆ. ಅನ್ನಭಾಗ್ಯ, ಕ್ಷೀರಭಾಗ್ಯ, ಕ್ಷೀರಧಾರೆ (ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ), ಮನಸ್ವಿನಿ, ಮೈತ್ರಿ, ಶಾದಿ ಭಾಗ್ಯ, ವಿದ್ಯಾಸಿರಿ, ವಸತಿ ಭಾಗ್ಯ, ಪಶುಭಾಗ್ಯ, ಸಾಲಮನ್ನಾ (ಋಣಮುಕ್ತ) ಗಳಂತಹ ಅನೇಕ ಯೋಜನೆಗಳು ಜನರಿಗೆ ಫಲ ನೀಡುತ್ತಿವೆ.
ರೈತರು, ಕಾರ್ಮಿಕರು, ಮಹಿಳೆಯರು, ಮಕ್ಕಳು, ಹಿರಿಯರು, ವಿಶೇಷ ಚೇತನರು, ಲಿಂಗ ಅಲ್ಪಸಂಖ್ಯಾತರು, ಪರಿಶಿಷ್ಟರು, ಹಿಂದುಳಿದ ವರ್ಗದವರು ಮತ್ತು ಅಲ್ಪಸಂಖ್ಯಾತರು ಹೀಗೆ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳು ದೊರೆಯುತ್ತಿವೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಲಾಭ ದೊರೆಯಬೇಕು ಎನ್ನುವದು ಸರ್ಕಾರದ ಸದುದ್ದೇಶ. ಇಂತಹ ಜನಪರ ಕಾಳಜಿಯಿಂದಾಗಿ ಜಿಲ್ಲೆಯಲ್ಲಿ ಹಲವು ಜನರು ಸರ್ಕಾರದಿಂದ ಒಂದಲ್ಲ ಒಂದು ರೀತಿಯಲ್ಲಿ ಪ್ರಯೋಜನ ಪಡೆದುಕೊಂಡು, ವಿವಿಧ ಯೋಜನೆಗಳ ಫಲಾನುಭವಿ ಗಳಾಗಿದ್ದಾರೆ.
‘ಸರ್ಕಾರವೇ ರೂಪುಗೊಳಿಸಿ, ಅನುಷ್ಠಾನಗೊಳಿಸಿದ ಈ ಯೋಜನೆಗಳು ಸಮಾಜದ ಎಲ್ಲಾ ವರ್ಗದ ಜನರಿಗೆ ನಿರೀಕ್ಷಿಸಿದಂತೆಯೇ ತಲುಪುತ್ತಿವೆಯೇ? ಸರ್ಕಾರದ ಮೂಲ ಉದ್ದೇಶ ಈಡೇರಿದೆಯೇ? ಇವುಗಳನ್ನು ಇನ್ನಷ್ಟು ಜನರಿಗೆ ಹೇಗೆ ತಲುಪಿಸಬಹುದು? ಮತ್ತಷ್ಟು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದು? ಹೀಗೆ ಒಂದು ಯೋಜನೆಯನ್ನು ಜಾರಿಗೊಳಿಸಿದ ಬಳಿಕ ಅನೇಕ ಪ್ರಶ್ನೆಗಳು ಮೂಡುತ್ತವೆ. ಇವುಗಳಿಗೆ ಉತ್ತರವನ್ನು ಫಲಾನುಭವಿಗಳಿಂದಲೇ ನೇರವಾಗಿ ಕೇಳಿ ತಿಳಿದುಕೊಳ್ಳುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ.’
ಆ ದಿಸೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಹಕಾರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ತಾ. 7 ರಂದು ಮಧ್ಯಾಹ್ನ 2.30 ಗಂಟೆಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಸಮ್ಮುಖದಲ್ಲಿ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಲಿದೆ ಎಂದು ವಾರ್ತಾಧಿಕಾರಿ ಚಿನ್ನಸ್ವಾಮಿ ತಿಳಿಸಿದ್ದಾರೆ.