(ಬಿ.ಎಂ. ಲವಕುಮಾರ್)
ಮಡಿಕೇರಿ, ಆ. 31: ಮೈಸೂರು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿರುವ ಗಜಪಡೆಗಳ ಪೈಕಿ ಕೊಡಗಿನ ಆನೆ ಶಿಬಿರಗಳಿಂದ ತೆರಳಿರುವ ಗಜಪಡೆಗಳು ಹೆಚ್ಚಿನ ಸಂಖ್ಯೆಯಲ್ಲಿರುವದು ಗಮನಾರ್ಹವಾಗಿದೆ.
ಜಂಬೂಸವಾರಿಯಲ್ಲಿ ಈ ಬಾರಿ ಸುಮಾರು 12 ಆನೆಗಳು ಭಾಗವಹಿಸುತ್ತಿದ್ದರೆ, ಅವುಗಳಲ್ಲಿ 9 ಆನೆಗಳು ಕೊಡಗಿನ ಮತ್ತಿಗೋಡು, ಮೂರ್ಕಲ್, ದುಬಾರೆ, ಆನೆಕಾಡು ಆನೆ ಶಿಬಿರಗಳಲ್ಲಿರುವ ಆನೆಗಳಾಗಿವೆ.
ಈ ಒಂಬತ್ತು ಆನೆಗಳು ಕೂಡ ಮೈಸೂರು ದಸರಾದಲ್ಲಿ ಪಾಲ್ಗೊಂಡು ಜಂಬೂಸವಾರಿಯ ಸಂದರ್ಭ ಒಂದೊಂದು ರೀತಿಯ ಜವಾಬ್ದಾರಿ ವಹಿಸುತ್ತಿವೆ. ಕಾಡಿನ ನಡುವೆ ಇರುವ ಆನೆ ಶಿಬಿರಗಳಲ್ಲಿ ಇದ್ದರೂ ದಸರಾ ಸಂದರ್ಭ ಮೈಸೂರು ನಗರದ ಗೌಜು, ಗದ್ದಲಗಳಿಗೆ ವಿಚಲಿತರಾಗದೆ ಗಂಭೀರವಾಗಿ ತಮಗೆ ನೀಡಿದ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬರುತ್ತಿವೆ.
ಅದರಲ್ಲೂ ಬಲರಾಮನ ಸೇವೆ ಮರೆಯಲಾರದ್ದು, ಸುಮಾರು 19 ವರ್ಷಗಳ ಅನುಭವವಿದೆ. ಅದಕ್ಕಿಂತ ಹೆಚ್ಚಾಗಿ 14ಬಾರಿ ಚಿನ್ನದ ಅಂಬಾರಿ ಹೊತ್ತಿದ್ದಾನೆ. 58ವರ್ಷ ವಯಸ್ಸಿನ ಬಲರಾಮನನ್ನು 1978ರಲ್ಲಿ ಕೊಡಗಿನ ಕಟ್ಟೆಪುರ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. ತಿತಿಮತಿಯ ಮತ್ತಿಗೋಡು ಆನೆಶಿಬಿರ ವಾಸ್ತವ್ಯದ ಸ್ಥಾನ. 2.7ಮೀ ಎತ್ತರ, 3.70 ಮೀ. ಉದ್ದವಿದ್ದಾನೆ.
ಪುಂಡ ಆನೆಗಳನ್ನು ಸದೆಬಡಿದು ಹೆಡೆಮುರಿಗೆ ಕಟ್ಟುವದರಲ್ಲಿ ನಿಸ್ಸೀಮನಾಗಿರುವ ಅಭಿಮನ್ಯು ಜಂಬೂ ಸವಾರಿಯಲ್ಲಿ 17ವರ್ಷಗಳ ಕಾಲ ಭಾಗವಹಿಸಿ ಅನುಭವ ಹೊಂದಿದ್ದಾನೆ. ಅರಮನೆ ವಾದ್ಯ ಸಂಗೀತದ ಗಾಡಿಯನ್ನು ಎಳೆಯುವ ಜವಾಬ್ದಾರಿ ಈತನದು. 1977ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾದ ಈತನ ವಯಸ್ಸು ಈಗ 50 ವರ್ಷ. ತಿತಿಮತಿಯ ಮತ್ತಿಗೋಡು ಆನೆಶಿಬಿರದಲ್ಲಿ ವಾಸ್ತವ್ಯ. 2.68 ಮೀ ಎತ್ತರ, 3.51 ಮೀ. ಉದ್ದವಿದ್ದಾನೆ.
ಕಳೆದ ಒಂಬತ್ತು ವರ್ಷಗಳಿಂದ ಜಂಬೂ ಸವಾರಿಯಲ್ಲಿ ಸಾಧುಸ್ವಭಾವದ ಹೆಣ್ಣು ಆನೆ ವಿಜಯ ಭಾಗವಹಿಸುತ್ತಿದ್ದಾಳೆ. ಆನೆಕಾಡು ಆನೆಶಿಬಿರದಲ್ಲಿರುವ ಈಕೆಯನ್ನು 1963ರಲ್ಲಿ ದುಬಾರೆ ಅರಣ್ಯದಲ್ಲಿ ಸೆರೆ ಹಿಡಿಯಲಾಗಿತ್ತು. 2.29ಮೀ. ಎತ್ತರ, 3.00ಮೀ ಉದ್ದ ಇದ್ದಾಳೆ.
2009ರಲ್ಲಿ ಕೊಡಗಿನ ಸೋಮವಾರಪೇಟೆಯ ಆಡಿನಾಡೂರು ಅರಣ್ಯ ಪ್ರದೇಶದಲ್ಲಿ ಸೆರೆಸಿಕ್ಕಿರುವ ಹೆಣ್ಣಾನೆ ಕಾವೇರಿಗೆ ಈಗ 38 ವರ್ಷ. 2.50 ಮೀ ಎತ್ತರ, 3.32 ಮೀ ಉದ್ದ ಹಾಗೂ ಅಂದಾಜು 3152 ಕೆಜಿ ತೂಕ ಹೊಂದಿರುವ ಈಕೆ ದುಬಾರೆ ಆನೆ ಶಿಬಿರದವಳು.
60ವರ್ಷದ ಪ್ರಶಾಂತನನ್ನು 1993ರಲ್ಲಿ ಕೊಡಗಿನ ಕಾರೆಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾಯಿತು. ದುಬಾರೆಯಲ್ಲಿ ವಾಸ್ತವ್ಯ ಹೂಡಿದ್ದಾನೆ. 2.61 ಮೀ ಎತ್ತರ, 3.46 ಮೀ ಉದ್ದ ಮತ್ತು 4329 ಕೆಜಿ ತೂಕ ಹೊಂದಿದ್ದಾನೆ.
ಗೋಪಾಲಸ್ವಾಮಿ ತಿತಿಮತಿಯ ಮೂರ್ಕಲ್ ಆನೆ ಶಿಬಿರದವನಾಗಿದ್ದು, ಶಾಂತ ಸ್ವಭಾವದ ಬಲಶಾಲಿ. 2009ರಲ್ಲಿ ಹಾಸನ ಜಿಲ್ಲೆಯ ಸಕಲೇಶಪುರದ ಎತ್ತೂರಿನಲ್ಲಿ ಸೆರೆಹಿಡಿಯಲಾಗಿದೆ. 2.62 ಮೀ. ಎತ್ತರ, 3.42ಮೀ. ಉದ್ದ ಅಂದಾಜು 3242ಕೆಜಿ ತೂಕ ಇದ್ದಾನೆ.
12ನೇ ಬಾರಿಗೆ ದಸರಾದಲ್ಲಿ ಭಾಗವಹಿಸುತ್ತಿರುವ ವಿಕ್ರಮನನ್ನು 1990ರಲ್ಲಿ ದೊಡ್ಡಬೆಟ್ಟ ಅರಣ್ಯಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಸದ್ಯ ದುಬಾರೆ ಆನೆ ಶಿಬಿರದಲ್ಲಿ ವಾಸ್ತವ್ಯ. 43ವರ್ಷ ವಯಸ್ಸು, 2.60ಮೀ. ಎತ್ತರ, 3.43ಮೀ ಉದ್ದ ಇದ್ದಾನೆ.
1993ರಲ್ಲಿ ಕಾರೆಕೊಪ್ಪ ಅರಣ್ಯಪ್ರದೇಶದಲ್ಲಿ ಸೆರೆಹಿಡಿಯಲಾದ ಗೋಪಿ ದುಬಾರೆ ಆನೆ ಶಿಬಿರದವನು. ಅಲ್ಲಿ ಸಫಾರಿ ಕಾರ್ಯ ನಿರ್ವಹಿಸುತ್ತಾನೆ. 34ವರ್ಷ, ಎತ್ತರ 2.92 ಮೀ. ಉದ್ದ 3.42 ಮೀ. ಇದ್ದು, ಈತನಿಗೆ 6ನೇ ಬಾರಿಯ ದಸರಾವಾಗಿದೆ.
ಹರ್ಷನಿಗೆ ಈಗ 49 ವರ್ಷ. 2.55 ಮೀ ಎತ್ತರ, 3.40 ಮೀ ಉದ್ದ ಅಂದಾಜು 3290 ಕೆಜಿ ತೂಕ ಹೊಂದಿದ್ದಾನೆ. ದುಬಾರೆ ಆನೆ ಶಿಬಿರದವನಾದ ಈತನನ್ನು 1990ರಲ್ಲಿ ದೊಡ್ಡಬೆಟ್ಟದಲ್ಲಿ ಸೆರೆಹಿಡಿಯಲಾಗಿದೆ. 14 ವರ್ಷದಿಂದ ಮೈಸೂರು ದಸರಾದಲ್ಲಿ ಪಾಲ್ಗೊಳ್ಳುತ್ತಿದ್ದಾನೆ.
ಒಟ್ಟಾರೆಯಾಗಿ ಹೇಳುವದಾದರೆ ಮೈಸೂರು ದಸರಾಕ್ಕೆ ಕಳೆ ನೀಡುವದೇ ಗಜಪಡೆ. ಈ ಗಜಪಡೆಯಲ್ಲಿ ಕೊಡಗಿನ ಗಜಗಳು ಹೆಚ್ಚಿನ ಸಂಖ್ಯೆಯಲ್ಲಿರುವದು ಸಂತಸ ತಂದಿದೆ.