ಮಡಿಕೇರಿ, ಜೂ. 11: ಕೊಡಗು ಚೈಲ್ಡ್‍ಲೈನ್ ಕುಶಾಲನಗರದ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ವೀರಾಜಪೇಟೆ ತಾಲೂಕಿನ ತಿತಿಮತಿ ಗ್ರಾಮದ ಸಮುದಾಯ ಭವನದಲ್ಲಿ ಇತ್ತೀಚೆಗೆ ವಿಶೇಷ ಅರಿವಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಸಂಕಷ್ಟ ಮತ್ತು ದೌರ್ಜನ್ಯಕ್ಕೆ ಒಳಗಾದ ಮಕ್ಕಳ ರಕ್ಷಣೆಗೆ ದಿನದ 24 ಗಂಟೆಗಳ ಉಚಿತ ಮತ್ತು ತುರ್ತು ಸೇವೆಯನ್ನು ಚೈಲ್ಡ್‍ಲೈನ್ (1098) ನೀಡುತ್ತಿದೆ. ಈ ಯೋಜನೆಯು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ, ರಾಜ್ಯ ಸರ್ಕಾರಗಳು, ಸರ್ಕಾರೇತರ ಸಂಸ್ಥೆಗಳು ಹಾಗೂ ಕೊಡಗಿನಲ್ಲಿ ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಹಯೋಗದೊಂದಿಗೆ ಚೈಲ್ಡ್‍ಲೈನ್ ಕಾರ್ಯ ನಿರ್ವಹಿಸುತ್ತಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಆಡಳಿತ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಮಕ್ಕಳ ನ್ಯಾಯ ಮಂಡಳಿ, ವಿಶೇಷ ಮಕ್ಕಳ ಪೊಲೀಸ್ ರಕ್ಷಣಾ ಘಟಕ ಮತ್ತಿತರ ಇಲಾಖೆಗಳ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಭಾರತ ದೇಶದಲ್ಲಿ 269 “ಚೈಲ್ಡ್‍ಲೈನ್” ಶಾಖೆಗಳಿದ್ದು ಕರ್ನಾಟಕದಲ್ಲಿ ಪ್ರತಿ ಜಿಲ್ಲೆಗೆ ಒಂದೊಂದು ಕೇಂದ್ರಗಳಿವೆ.

ಬೀದಿ ಮಕ್ಕಳು, ಅನಾಥ ಮಕ್ಕಳು, ಶೋಷಿತರು, ಬಾಲ ಕಾರ್ಮಿಕರು, ಮಾದಕ ವ್ಯಸನಿಗಳು, ಬಾಲ್ಯ ವಿವಾಹಕ್ಕೆ ಒಳಗಾದವರು, ಮಾನಸಿಕ ಹಾಗೂ ದ್ಯೆಹಿಕ ತೊಂದರೆಗಳಿಗೆ ಒಳಗಾದವರು, ಸಾಗಾಣೆಗೊಂಡ ಮಕ್ಕಳು, ಅಪಘಾತ ಮತ್ತು ದುರಂತಕ್ಕೆ ಸಿಕ್ಕಿದ ಮಕ್ಕಳು, ಶೋಷಣೆ, ಲ್ಯೆಂಗಿಕ ಹಿಂಸೆ, ಶಿಕ್ಷೆ ಹಾಗೂ ಬಂಧನಕ್ಕೊಳಗಾದ ಮಕ್ಕಳು ಈ ಕೇಂದ್ರ ಸಂಪರ್ಕಿಸಿ ಅಥವಾ ಈ 1098 ಕ್ಕೆ ಕರೆ ಮಾಡಿ ಸಹಾಯವನ್ನು ಪಡೆದುಕೊಳ್ಳಬಹುದು. ತೊಂದರೆಗೆ ಒಳಗಾದ ಮಗು ಅಥವಾ ಸಾರ್ವಜನಿಕರು 1098 ಕ್ಕೆ ಕರೆ ಮಾಡಿದರೆ ತೊಂದರೆಯಲ್ಲಿರುವ ಮಗುವಿಗೆ ಅವಶ್ಯಕತೆ ಇದ್ದಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಮುಖಾಂತರ ಸರ್ಕಾರಿ ಸಂಸ್ಥೆಗಳಲ್ಲಿ ಪುನರ್ವಸತಿ ಕಲ್ಪಿಸಲಾಗುವದು ಎಂದು ಹಾಗೂ ಬಾಲ್ಯ ವಿವಾಹ ನಿಷೇಧ ಕಾಯ್ದೆಯ ಬಗ್ಗೆ ಕೊಡಗು ಚೈಲ್ಡ್‍ಲೈನ್ ಜಿಲ್ಲಾ ಸಂಯೋಜಕ ಆರ್. ಶೀರಾಜ್ ಅಹ್ಮದ್ ತಿಳಿಸಿದರು

ಸಾರ್ವಜನಿಕರು ಏನು ಮಾಡಬೇಕು?

ಕಷ್ಟದಲ್ಲಿರುವ ಮಕ್ಕಳು ಕಂಡುಬಂದರೆ ಅಥವಾ ಅವರ ಬಗ್ಗೆ ಮಾಹಿತಿ ದೊರೆತರೆ ಕೂಡಲೇ 1098 ಕರೆ ಮಾಡಬೇಕು. ಈ ಕರೆಗೆ ಯಾವದೇ ಶುಲ್ಕವಿಲ್ಲ (ಇದು ಉಚಿತ ಕರೆ) ಕರೆ ಮಾಡಿದವರ ಹೆಸರು ಗೌಪ್ಯವಾಗಿ ಇಡಲಾಗುವದು ಹಾಗೂ ಚೈಲ್ಡ್‍ಲೈನ್ ತಂಡ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸ್ಥಳಕ್ಕೆ ಧಾವಿಸಿ ಇಂತಹ ಮಕ್ಕಳನ್ನು ರಕ್ಷಿಸಿ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸುತ್ತೇವೆ.

ಕೊಡಗು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕುಶಾಲನಗರ ಈ ಸೇವಾ ಸಂಸ್ಥೆಯ ಅಡಿಯಲ್ಲಿ “ಮಕ್ಕಳ ಸಹಾಯವಾಣಿ” ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈವರೆಗೆ ಒಟ್ಟು 564 ಮಕ್ಕಳ ಪ್ರಕರಣಗಳನ್ನು ಗುರುತಿಸಿ, ಪುನರ್ವಸತಿ ಕಲ್ಪಿಸಲಾಗಿದೆ ಎಂದು ಚೈಲ್ಡ್‍ಲೈನ್ ಇಂಡಿಯಾ ಫೌಂಡೇಷನ್, ಮುಂಬೈಯಿಂದ ಆಗಮಿಸಿದ್ದ ಚೈಲ್ಡ್‍ಲೈನ್ ಕಾರ್ಯಕ್ರಮ ಸಹಾಯಕರಾದ ಮಹೇಶ್ ಜಾಕಾಟ್ಟಿ ತಿಳಿಸಿದ್ದಾರೆ.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಗ್ರಾಮ ಪಂಚಾಯಿತಿ ಸದಸ್ಯ ಮತ್ತು ಸ್ತ್ರೀ ಶಕ್ತಿ ಸಂಘದ ತಾಲೂಕು ಅಧ್ಯಕ್ಷೆ ರಜನಿ ಮತ್ತು ಸದಸ್ಯರು, ಪೊಲೀಸ್ ಇಲಾಖೆಯಿಂದ ಬಾಲಕೃಷ್ಣ, ಚೈಲ್ಡ್‍ಲೈನ್, ಸಿಬ್ಬಂದಿಗಳಾದ ಪ್ರವೀಣ್ ಕುಮಾರ, ನವೀನ ಕುಮಾರ್, ಪ್ರಸಾದ್, ಬಿ.ಕೆ. ಶೋಭಲಕ್ಷ್ಮಿ, ಕುಸುಮಾ, ದೀಪ ಹಾಗೂ ಚೈಲ್ಡ್‍ಲೈನ್ ಜಿಲ್ಲಾ ಸಂಯೋಜಕ ಆರ್. ಶೀರಾಜ್ ಅಹ್ಮದ್, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.