ವರದಿ : ಚಂದ್ರಮೋಹನ್
ಕುಶಾಲನಗರ, ಅ. 9 : ಕಳೆದ ಕೆಲವು ತಿಂಗಳ ಕಾಲ ಪ್ರವಾಸಿಗರಿಂದ ಬಿಕೋ ಎನ್ನುತ್ತಿದ್ದ ಕೊಡಗು ಜಿಲ್ಲೆಯ ಪ್ರವಾಸೋದ್ಯಮ 2 ದಿನಗಳಿಂದ ಮತ್ತೆ ಚೇತರಿಸಿಕೊಳ್ಳತೊಡಗಿದೆ. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಕೊಡಗು ಜಿಲ್ಲೆಯಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ನೆರೆಯ ರಾಜ್ಯಗಳಿಂದ ಆಗಮಿಸುತ್ತಿದ್ದ ಪ್ರವಾಸಿಗರ ಸಂಖ್ಯೆ ಬಹುತೇಕ ಕ್ಷೀಣಗೊಂಡಿತ್ತು. ಈ ಮೂಲಕ ಕೊಡಗಿನ ಬಹುತೇಕ ಉದ್ಯಮಗಳು ವ್ಯಾಪಾರ ವಹಿವಾಟುಗಳು ಸಂಪೂರ್ಣ ನೆಲ ಕಚ್ಚಿತ್ತು. ಗಣಪತಿ ಆತ್ಮಹತ್ಯೆ ಪ್ರಕರಣ ನಂತರ ನಡೆದ ಪ್ರವೀಣ್ ಪೂಜಾರಿ ಹತ್ಯೆ, ಕಾವೇರಿ ಜಲವಿವಾದ ಘಟನೆಗಳು ನಡೆದು ಭಯದ ವಾತಾವರಣ ಸೃಷ್ಟಿಯಾಗಿ, ಕೊಡಗು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ತಮ್ಮ ಕಾರ್ಯಕ್ರಮಗಳನ್ನು ರದ್ದು ಮಾಡುವದರೊಂದಿಗೆ ಜಿಲ್ಲೆಯ ವ್ಯಾಪಾರ ಉದ್ಯಮ ಹೆಚ್ಚಿನ ಪ್ರಮಾಣದಲ್ಲಿ ನಷ್ಟಕ್ಕೆ ಒಳಗಾಗಿತ್ತು. ಜಿಲ್ಲೆಯ ಹೋಂ ಸ್ಟೇಗಳು, ವಸತಿ ಗೃಹಗಳಲ್ಲಿ ಬುಕ್ಕಿಂಗ್‍ಗಳು ಕೂಡ ರದ್ದಾಗಿದ್ದವು. ನೆರೆಯ ತಮಿಳುನಾಡು, ಕೇರಳ ರಾಜ್ಯಗಳಿಂದ ಪ್ರವಾಸಿಗರು ಕೊಡಗು ಜಿಲ್ಲೆಯನ್ನು ಹೊರತಾಗಿಸಿ ಪ್ರವಾಸ ತೆರಳುವ ಪರಿಸ್ಥಿತಿ ಸೃಷ್ಟಿಯಾ ಗಿತ್ತು ಎನ್ನುತ್ತಾರೆ ಕುಶಾಲನಗರದ ಅತಿಥಿ ಕಂಫಟ್ರ್ಸ್ ಮಾಲೀಕ ಭಾಸ್ಕರ್.
ಜಿಲ್ಲೆಯ ಪ್ರವಾಸಿ ಕೇಂದ್ರಗಳಾದ ದುಬಾರೆ, ಕಾವೇರಿ ನಿಸರ್ಗಧಾಮ ಸೇರಿದಂತೆ ಹಲವು ಪ್ರವಾಸಿ ತಾಣಗಳು ಕೂಡ ಪ್ರವಾಸಿಗರ ಕೊರತೆ ಎದುರಿಸಬೇಕಾಯಿತು. ಇದೀಗ ಈ ವಾರಾಂತ್ಯದಿಂದ ಪ್ರಾರಂಭಗೊಂಡ ದಸರಾ ರಜಾ ಹಾಗೂ ಸರ್ಕಾರಿ ರಜಾಗಳ ಬೆನ್ನಲ್ಲೇ ಕೊಡಗು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ವಾಹನಗಳ ಸಂಖ್ಯೆ ಏರತೊಡಗಿದೆ. ಕುಶಾಲನಗರ, ಮಡಿಕೇರಿ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಲಾಡ್ಜ್‍ಗಳು, ಹೋಂಸ್ಟೇಗಳು ಸಂಪೂರ್ಣ ಭರ್ತಿಯಾಗಿವೆ. ಹಾರಂಗಿ ಜಲಾಶಯ ಹೊರತು ಪಡಿಸಿದಂತೆ ಎಲ್ಲಾ ಪ್ರವಾಸಿ ಕೇಂದ್ರಗಳು ಕಳೆದ 2 ದಿನಗಳಿಂದ ಗಿಜಿಗುಡುತ್ತಿರುವ ದೃಶ್ಯ ಗೋಚರಿಸಿದೆ. ಕುಶಾಲನಗರ ಕಾವೇರಿ ನಿಸರ್ಗಧಾಮಕ್ಕೆ ವಾರಾಂತ್ಯದ ಅವಧಿಯಲ್ಲಿ 10 ಸಾವಿರಕ್ಕೂ ಅಧಿಕ ಪ್ರವಾಸಿಗರು ಭೇಟಿ ನೀಡಿರುವ ಮಾಹಿತಿ ದೊರೆತಿದೆ. ಸತತ 5 ದಿನಗಳ ರಜಾದ ಮಜಾ ಅನುಭವಿಸುವಲ್ಲಿ ಬಹುತೇಕ ಕುಟುಂಬಗಳು ಕೊಡಗಿನತ್ತ ಮುಖ ಮಾಡಿವೆ ಎಂದರೆ ತಪ್ಪಾಗಲಾರದು.