*ಗೋಣಿಕೊಪ್ಪಲು, ಜು. 30: ಪಟ್ಟಣದಲ್ಲಿ ಕಸದ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಮತ್ತು ವರ್ತಕರು ಎಚ್ಚೆತ್ತುಕೊಳ್ಳಬೇಕು ಎಂದು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನಿಲ್ ಮಾದಪ್ಪ ಹೇಳಿದರು.

ಇಲ್ಲಿನ ಸಿಲ್ವರ್ ಸ್ಕೈ ಸಬಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ವಾರ್ಷಿಕ ವರದಿ ಮಂಡನೆ ನಂತರ ನಡೆದ ಚರ್ಚೆಯಲ್ಲಿ ಕಸದ ಸಮಸ್ಯೆಯನ್ನು ಪ್ರಸ್ತಾಪಿಸಿದ ಡಾ. ಚಂದ್ರಶೇಖರ್ ಬೆಂಗಳೂರು ಮಹಾನಗರಗಳಲ್ಲಿ ಕಸದ ಸಮಸ್ಯೆಯಿಂದ ಚಿಕೂನ್ ಗುನ್ಯ, ಡೆಂಗಿಯಂತ ಕಾಯಿಲೆಗಳು ಹರಡುತ್ತಿದ್ದು. ಗೋಣಿಕೊಪ್ಪದಲ್ಲಿಯೂ ಸಹ ಕಸದಿಂದ ಬಹಳಷ್ಟು ತೊಂದರೆ ಸಂಭವಿಸುವ ಸಾಧ್ಯತೆ ಇದೆ. ಎಲ್ಲೆಂದರಲ್ಲಿ ನೊಣ, ಸೊಳ್ಳೆಗಳು ತುಂಬಿ ತುಳುಕುತ್ತಿದ್ದು, ಮುಂದೊಂದು ದಿನ ಪಟ್ಟಣದಲ್ಲಿ ಸಾಂಕ್ರ್ರಾಮಿಕ ರೋಗ ಹರಡುವ ಎಲ್ಲಾ ಲಕ್ಷಣಗಳು ಗೊಚರಿಸುತ್ತಿದೆ. ಕೂಡಲೇ ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಕೇಶವ್ ಕಾಮತ್ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ ರಾಜಕೀಯ ಬಣ್ಣ ಹಚ್ಚಲಾಗುತ್ತಿದೆ. ಎರಡು ಪಕ್ಷಗಳ ಬೆಂಬಲಿತ ಸದಸ್ಯರಲ್ಲಿ ಒಮ್ಮತ ಮೂಡಿಸುವ ಕೆಲಸವನ್ನು ಮಾಡಬೇಕಾಗಿದೆ ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ವಾಣಿಜ್ಯೋದ್ಯಮ ಸಂಸ್ಥೆಯ ಉಪಾಧ್ಯಕ್ಷÀ ಪೊನ್ನಿಮಾಡ ಸುರೇಶ್, ಚುನಾವಣೆ ನಡೆದು ಇನ್ನೂ 3 ತಿಂಗಳು ಮುಗಿದಿಲ್ಲ. ಅದಾಗಲೇ ಗ್ರಾಮ ಪಂಚಾಯಿತಿಯಲ್ಲಿ ಕಸದ ರಾಜಕೀಯ ಬಹು ಜೋರಾಗಿ ಕೇಳಿ ಬರುತ್ತಿದ್ದು, ಪಟ್ಟಣದಲ್ಲಿ ತುಂಬಿದ ಕಸದ ರಾಶಿಯನ್ನು ರಾತೋ ರಾತ್ರಿ ಅಜ್ಞಾತ ಸ್ಥಳಕ್ಕೆ ವರ್ಗವಣೆ ಮಾಡಲಾಗಿದೆ ಎಂದು ತಿಳಿಸಿದರು.

ಬೋಜಮ್ಮ ಮಾತನಾಡಿ, ಕಸ ಸಮಸ್ಯೆಗೆ ಕೇವಲ ಪಂಚಾಯಿತಿಯನ್ನು ಹೊಣೆಗಾರಿಕೆ ಮಾಡುವದು ಬೇಡ, ವರ್ತಕರು ಸಹ ಸಹಕರಿಸಬೇಕಾಗಿದ್ದು, ತಮ್ಮ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ನೀಡುವದನ್ನು ನಿಷೇಧಿಸಬೇಕು. ಪ್ರತಿಯೊಬ್ಬ ಪಟ್ಟಣದ ನಿವಾಸಿ ತಮ್ಮ ಮನೆಯಲ್ಲಿ ಸಂಗ್ರಹವಾಗುವ ಕಸವನ್ನು ಅಂದಂದೇ ಸುಡುವದರ ಮೂಲಕ ಕಸ ಸಮಸ್ಯೆಯನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದರು.

ಕೊಳ್ಳಿಮಾಡ ಅಜಿತ್ ಅಯ್ಯಪ್ಪ ಮಾತನಾಡಿ, ಕಸ ನಿರ್ಮೂಲನೆ ಮಾಡುವದು ಪ್ರತಿಯೊಬ್ಬನ ಕರ್ತವ್ಯ, ಇದರಲ್ಲಿ ರಾಜಕೀಯ ಬೇಡ, ಪಟ್ಟಣದಲ್ಲಿ ಸರಕಾರದ ನಿಯಮವನ್ನು ಪಾಲಿಸದೆ ಎಷ್ಟೊಂದು ಲೇಔಟ್‍ಗಳು ತಲೆ ಎತ್ತಿದ್ದು, ಇದರಲ್ಲಿ ಸರಕಾರಕ್ಕೆ ಸೇರಬೇಕಾದ ಸ್ಥಳವನ್ನು ಗುರುತಿಸಿ ಗ್ರಾ.ಪಂ. ವಶಪಡಿಸಿಕೊಳ್ಳಬೇಕಾಗಿದ್ದು, ಇದರಲ್ಲಿ ಆಯಾಯ ವಾರ್ಡ್‍ನ ಕಸ ವಿಲೇವಾರಿ ಮಾಡುವಂತೆ ತಿಳಿಸಿದರು.

ಜಿಲ್ಲಾ ಚೇಂಬರ್ ಅಧ್ಯಕ್ಷ ಬಿ.ಎನ್ ಪ್ರಕಾಶ್ ಮಾತನಾಡಿ, ಗೋಣಿಕೊಪ್ಪ ಸಂಸ್ಥೆ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದು, ಸಂಸ್ಥೆಯಿಂದ ಈಗಾಗಲೇ ಮಳಿಗೆಯನ್ನು ನಿರ್ಮಿಸಲಾಗಿದ್ದು, ಉತ್ತಮ ಅಭಿವೃದ್ಧಿಯನ್ನು ಕಾಣುತ್ತಿದೆ. ಪಟ್ಟಣದ ಕಸ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪಂಚಾಯಿತಿ ಮತ್ತು ಸಂಸ್ಥೆಯ ಜಂಟಿ ಸಭೆಯನ್ನು ಆದಷ್ಟು ಬೇಗ ನಿಗದಿಮಾಡಿ ಕಸ ಸಮಸ್ಯೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಚಿಂತಿಸಲಾಗುವದು ಎಂದು ತಿಳಿಸಿದರು. ಸಭೆಯಲ್ಲಿ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಟಿ.ಸಿ ಕಾಶಿ ಮಾಡಿದರು. ವಾರ್ಷಿಕ ಖರ್ಚು ವೆಚ್ಚವನ್ನು ಖಜಾಂಚಿ ವಿ. ಮನೋಹರ್ ನೆರವೇರಿಸಿದರು.