ಚೆಟ್ಟಳ್ಳಿ, ಜು. 14: ಚೆಟ್ಟಳ್ಳಿ-ಮಡಿಕೇರಿ ರಸ್ತೆಯ ಪರಿಸ್ಥಿತಿ ಮುಗಿಯದ ಕಥೆಯಾಗಿದೆ. ಚೆಟ್ಟಳ್ಳಿಯಿಂದ ಸುಮಾರು 9 ಕಿ.ಮೀ. ದೂರದ ಕತ್ತಲೆಕಾಡುವಿನವರೆಗೆ ಒಂದೆಡೆ ಬರೆ ಮತ್ತೊಂದೆಡೆ ಮೃತ್ಯುಕೂಪದಂತೆ ಕೂಡಿದಂತ ಇಳಿಜಾರಿನ ಜೊತೆ ಅಪಾಯಕಾರಿ ತಿರುವು ಹೊಂದಿರುವ ಕಡಿದಾದ ರಸ್ತೆ ಹೊಂದಿದ್ದು, ಇಲ್ಲಿನ ವ್ಯವಸ್ಥೆ ಸರಿ ಇಲ್ಲದಾಗಿದೆ.

ಹಲವು ವರ್ಷಗಳ ಹಿಂದೆ ಹಲವು ವಾಹನಗಳು ಪ್ರಪಾತಕ್ಕೆ ಬಿದ್ದು ಪ್ರಾಣಹಾನಿಯಾದ ಘಟನೆ ನಡೆದಿರುವದನ್ನು ಇಲ್ಲಿನ ರಸ್ತೆಗಳು ನಿತ್ಯವೂ ನೆನಪಿಸುತ್ತಿವೆ.

ಮಳೆಗಾಲದಲ್ಲಿ ಎಚ್ಚರ: ಮಡಿಕೇರಿಯಿಂದ ಕತ್ತಲೆಕಾಡು ಮಾರ್ಗವಾಗಿ ಸಿದ್ದಾಪುರಕ್ಕೆ ಸಂಪರ್ಕ ಕಲ್ಪಿಸುವ ಚೆಟ್ಟಳ್ಳಿ ಮಾರ್ಗದ ಅಪಾಯಕಾರಿ ರಸ್ತೆಯಲ್ಲಿ ಮಳೆಗಾಲದಲ್ಲಿ ಸಂಚರಿಸುವಾಗ ಎಚ್ಚರವಿರಲೇಬೇಕು. ಮಳೆಯ ರಭಸಕ್ಕೆ ಮೇಲಿನ ಬರೆ ಜರಿಯು ವದು, ಮರಗಳು ಜಾರಿ ರಸ್ತೆಯ ಮೇಲೆ ಬಿದ್ದು ರಸ್ತೆ ಸಂಪರ್ಕವೇ ಕಡಿದಾಗಿ ಹೋಗುವದು ಪ್ರತಿ ಮಳೆಗಾಲದ ಪರಿಸ್ಥಿತಿಯಾಗಿದೆ.

ಪ್ರಪಾತವೇ ಜಾರಿಕೊಳ್ಳುತ್ತಿದೆ: ಚೆಟ್ಟಳ್ಳಿಯಿಂದ ಮಡಿಕೇರಿ ಕಡೆ ತೆರಳುವಾಗ ಈರಳೆವಳಮುಡಿ ಗ್ರಾಮಕ್ಕೆ ಒಳಪಡುವ ಸ್ಥಳದಿಂದ ಕಡಗದಾಳು ಗ್ರಾಮಕ್ಕೆ ಒಳಪಡುವ ಮತ್ತೊಂದು ಬದಿ ಇಳಿಜಾರಿನ ಪ್ರಪಾತದಂತ್ತಿದ್ದು, ಮಳೆಗಾಲದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ನೀರೆಲ್ಲ ಹರಿದು ಇಳಿಜಾರಿನ ಮಣ್ಣೆಲ್ಲ ಜಾರುತ್ತಿವೆ. ಮುಂದೊಂದು ದಿನ ರಸ್ತೆಗಳೆಲ್ಲ ಕಡಿದಾಗುವ ಪರಿಸ್ಥಿತಿಗೆ ತಲಪುವದಂತೂ ಖಂಡಿತಾ.

ಇಂತಹ ಇಕ್ಕಟ್ಟಾದ ಅಪಾಯ ಕಾರಿ ರಸ್ತೆಗಳಲ್ಲಿ ನಿತ್ಯವೂ ನೂರಾರು ವಾಹನಗಳು ಸಂಚರಿಸುತ್ತಿರುತ್ತವೆ. ಚರಂಡಿ ವ್ಯವಸ್ಥೆ ಇಲ್ಲದೆ ಮಳೆಗಾಲ ದಲ್ಲಿ ನೀರೆಲ್ಲ ರಸ್ತೆಯುದ್ದಕ್ಕೂ ಹರಿದು ರಸ್ತೆಗಳೆಲ್ಲ ಹಾಳಾಗುವದಲ್ಲದೆ, ವಾಹನ ಸಂಚಾರಕ್ಕೆ ತೊಂದರೆಯಾಗು ತ್ತಿದೆ. ರಸ್ತೆಯ ಮಧ್ಯಭಾಗದಲ್ಲಿ ಅಲ್ಲಲ್ಲಿ ಕಾಂಕ್ರೀಟ್ ರಸ್ತೆ ಮಾಡಿ ಬದಿಯಲ್ಲಿ ಕಾಂಕ್ರೀಟ್ ಚರಂಡಿ ಮಾಡಿದರೂ ಅತ್ತಕಡೆ ನೀರು ಹರಿಯುತ್ತಿಲ್ಲ.

ಮಳೆ ನೀರು ಸರಾಗವಾಗಿ ಹೋಗಲು ಮೋರಿ ವ್ಯವಸ್ಥೆ ಮಾಡಲಾಗಿದೆಯಾದರೂ ಯಾತಕ್ಕಾಗಿ ಮಾಡಿದರೊ ಎಂದು ತಿಳಿಯದೇ ನೀರೆಲ್ಲ ಮೋರಿಯ ಮೇಲೆಯೇ ಹರಿಯುತ್ತಿರುವದು ಕಾಣಬರುತ್ತಿದೆ.

ಎಚ್ಚೆತ್ತುಕೊಳ್ಳದ ಇಲಾಖೆ: ವರ್ಷಂಪ್ರತಿ ಮಳೆಗಾಲದಲ್ಲಿ ಈ ರಸ್ತೆಗಳ ಫಜೀತಿಯ ಬಗ್ಗೆ ತಿಳಿದಿದ್ದರೂ ಸಂಬಂಧಪಟ್ಟ ಲೋಕೋಪಯೋಗಿ ಇಲಾಖೆ ಎಚ್ಚೆತ್ತುಕೊಳ್ಳದ ಪರಿಣಾಮ ರಸ್ತೆ ಹದಗೆಟ್ಟು ಹೋಗಿದೆ.

ಹಿಂದೆಲ್ಲ ಗ್ಯಾಂಗ್‍ಮೆನ್‍ಗಳು ನಿತ್ಯವು ರಸ್ತೆಯ ಕಾಡು ಕಡಿಯುವದು ಹಾಗೂ ಚರಂಡಿ, ಮೋರಿಯನ್ನೆಲ್ಲ ಶುಚಿಗೊಳಿಸುತ್ತಿದ್ದರು. ಇದೀಗ ಗ್ಯಾಂಗ್‍ಮೆನ್‍ಗಳು ಹಲವು ವರ್ಷದಿಂದ ನಾಪತ್ತೆಯಾಗಿದ್ದಾರೆ.

ಕಾಯುತ್ತಿವೆ ಮರಗಳು: ಚೆಟ್ಟಳ್ಳಿಯಿಂದ ಮಡಿಕೇರಿಗೆ ಹೋಗುವ ರಸ್ತೆಗಳ ಬದಿಗಳಲ್ಲಿ ಹಲವು ಒಣಗಿದ ಮರಗಳು ಹಾಗೂ ಬರೆಯಲ್ಲಿನ ಬಾಗಿದ ಮರಗಳು ಬೀಳಲು ಕಾಯುತ್ತಿರುವ ಪರಿಸ್ಥಿತಿಯಿದ್ದು, ಇತ್ತಕಡೆ ಯಾರೂ ಗಮನ ಹರಿಸುತ್ತಿಲ್ಲ. ಅಪಾಯ ಸಂಭವಿಸುವ ಮೊದಲೇ ಒಣಗಿದ ಮರಗಳನ್ನು ತೆರವುಗೊಳಿಸದಿದ್ದರೆ ಅಪಾಯಕ್ಕೆ ಆಹ್ವಾನ ನೀಡಿದಂತಾದೀತು.

ಸಂಬಂಧಪಟ್ಟ ಜನಪ್ರತಿನಿಧಿ ಗಳು, ಇಲಾಖಾ ಅಧಿಕಾರಿಗಳು ಇತ್ತ ಕಡೆ ಗಮನಿಸಿ ಕತ್ತಲೆಕಾಡಿನಿಂದ ಚೆಟ್ಟಳ್ಳಿಗೆ ತೆರಳುವ ರಸ್ತೆಯ ಅಧೋಗತಿಯನ್ನು ಪರಿಶೀಲಿಸಿ ಶಾಶ್ವತ ಕಾಯಕಲ್ಪ ನೀಡಬೇಕಾಗಿದೆ.

-ಪುತ್ತರಿರ ಕರುಣ್ ಕಾಳಯ್ಯ