ಗೋಣಿಕೊಪ್ಪಲು, ಜೂ. 11: ಇಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷವನ್ನು ಕತ್ತಲಲ್ಲಿಟ್ಟು ಚುನಾವಣಾ ಪ್ರಕ್ರಿಯೆ ನಡೆಸಿದ ಚುನಾವಣಾಧಿಕಾರಿ ಅವರ ವಿರುದ್ಧ ಖಾಸಗಿ ದೂರು ದಾಖಲಿಸಲಾಗುವದು ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತಿತೀರ ಧರ್ಮಜ ಉತ್ತಪ್ಪ ತಿಳಿಸಿದ್ದಾರೆ.

ಮೇ 31 ರಂದು ನಡೆದ ಚುನಾವಣೆ ಸಂದರ್ಭ ಒಟ್ಟು ಶೇ. 50 ರಷ್ಟು ಸದಸ್ಯರ ಹಾಜರಾತಿ ಇದ್ದಲ್ಲಿ ಮಾತ್ರ ಚುನಾವಣೆ ನಡೆಸುವದಾಗಿ ಲಿಖಿತ ಹೇಳಿಕೆ ನೀಡಿದ್ದ ಅಧಿಕಾರಿ ಮುರಳಿದುಗ್ಗಪ್ಪ, ತಾ. 8 ರಂದು ನಡೆದ ಚುನಾವಣೆಯಲ್ಲಿ ಹಿಂದಿನ ಪ್ರಕ್ರಿಯೆಯನ್ನು ಮುಂದುವರಿಸುವ ಮೂಲಕ ಹಸ್ತಕ್ಷೇಪ ನಡೆಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು. ಆಮಿಷಕ್ಕೆ ಒಳಗಾಗಿ ಇಂತಹ ಅನ್ಯಾಯ ಮಾಡಿದ್ದಾರೆ. ಈ ಬಗ್ಗೆ ಖಾಸಗಿ ದೂರು ದಾಖಲಿಸಿ ಅಧಿಕಾರಿ ವಿರುದ್ಧ ಕ್ರಮಕ್ಕೆ ಮುಂದಾಗುವದಾಗಿ ಎಚ್ಚರಿಸಿದರು.

ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ, ಪಂಚಾಯಿತಿಯಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಕೂಡ ನಾವು ಚುನಾವಣಾಧಿಕಾರಿಯಿಂದಾಗಿ ಕಳೆದುಕೊಂಡಿದ್ದೇವೆ. ನಮ್ಮದೇ ಪಕ್ಷದ ಸರ್ಕಾರವಿರುವದರಿಂದ ಉಸ್ತುವಾರಿ ಸಚಿವರ ಹಾಗೂ ಕಾಂಗ್ರೆಸ್ ನಾಯಕರುಗಳ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ಗ್ರಾಮಾಭಿವೃದ್ಧಿಗೆ ಒತ್ತು ನೀಡುತ್ತೇವೆ. ಆಶ್ವಾಸನೆಗಳನ್ನು ಈಡೇರಿಸಲು ಒಂದಾಗಿ ಕೆಲಸ ಮಾಡುತ್ತೇವೆ ಎಂದರು.

ಗೋಷ್ಠಿಯಲ್ಲಿ ಗ್ರಾ.ಪಂ. ಸದಸ್ಯರುಗಳಾದ ಪ್ರಮೋದ್ ಗಣಪತಿ, ಮುರುಗ ಹಾಗೂ ಜಮ್ಮಡ ಸೋಮಣ್ಣ ಇದ್ದರು.