ಕುಶಾಲನಗರ, ಆ. 10: ಆಟೋ ರಿಕ್ಷಾದಲ್ಲಿ ತೆರಳುತ್ತಿದ್ದ ವಿವಾಹಿತ ಮಹಿಳೆಯೊಬ್ಬಳಿಂದ ಚಿನ್ನಾಭರಣ ದೋಚಿ ಅತ್ಯಾಚಾರ ಮಾಡಲು ಯತ್ನಿಸಿದ ಘಟನೆ ಬುಧವಾರ ಮಧ್ಯಾಹ್ನ ಕುಶಾಲನಗರ ಸಮೀಪ ನಡೆದಿದೆ.

ಕೂಡ್ಲೂರಿನ ನವಗ್ರಾಮದ ಮಹಿಳೆಯೊಬ್ಬರು ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ಈ ಘಟನೆ ನಡೆದಿದ್ದು, ತೀವ್ರ ಅಸ್ವಸ್ಥಗೊಂಡ ಮಹಿಳೆ ಕುಶಾಲನಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಬುಧವಾರ ಮಧ್ಯಾಹ್ನ 1.30ರ ಸಮಯದಲ್ಲಿ ಈ ಘಟನೆ ನಡೆದಿದ್ದು, ಆಟೋದಲ್ಲಿ ಚಾಲಕ ಸೇರಿದಂತೆ ಒಟ್ಟು 3 ಮಂದಿ ಈ ದುಷ್ಕøತ್ಯ ಎಸಗಿದ್ದಾರೆ ಎಂದು ಮಹಿಳೆ ಮಾಹಿತಿ ನೀಡಿದ್ದಾರೆ.

ಅಂದಾಜು 23 ವಯೋಮಾನದ ಮಹಿಳೆ ಕುಶಾಲನಗರ ಪಟ್ಟಣದಿಂದ ಕೂಡ್ಲೂರು ಕಡೆಗೆ ಆಟೋದಲ್ಲಿ ತೆರಳುತ್ತಿದ್ದ ಸಂದರ್ಭ ಚಾಲಕ ಮತ್ತು ಇಬ್ಬರು ಸೇರಿ ಈ ಕೃತ್ಯ ಎಸಗಿರುವದಾಗಿ ಮಹಿಳೆ ತಿಳಿಸಿದ್ದಾರೆ.

ಕುಶಾಲನಗರದಿಂದ ಕೂಡ್ಲೂರು ನವಗ್ರಾಮಕ್ಕೆ ತೆರಳುವ ಸಂದರ್ಭ ಆಟೋದಲ್ಲಿದ್ದ ಇಬ್ಬರು ವ್ಯಕ್ತಿಗಳು ಮಹಿಳೆಯ ಮೇಲೆ ಹಲ್ಲೆ ನಡೆಸಿ ಮೊಬೈಲ್, ಚಿನ್ನದ ಚೈನ್, ಉಂಗುರ ದೋಚಿದ್ದು, ನಂತರ ಮಹಿಳೆಯನ್ನು ಬಾಯಿ ಮುಚ್ಚಿ ಆಟೋದಲ್ಲಿ ಅಪಹರಿಸಿ ಯಡವನಾಡು ಅರಣ್ಯದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಮಹಿಳೆ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ತನ್ನ ಅಳಲನ್ನು ತೋಡಿಕೊಂಡಿದ್ದಾರೆ. ಘಟನೆ ಸಂದರ್ಭ ದಾರಿಯಲ್ಲಿ ಹೋಗುತ್ತಿದ್ದ ಬೈಕ್ ಸವಾರರು ಮಹಿಳೆಯನ್ನು ರಕ್ಷಿಸಿ ಕುಶಾಲನಗರ ಸರಕಾರಿ ಆಸ್ಪತ್ರೆಗೆ ಸೇರಿಸಿರುವದಾಗಿ ತಿಳಿದುಬಂದಿದೆ. ಈ ನಡುವೆ ಆಟೋ ಸಹಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ.

ಘಟನೆಯ ಮಾಹಿತಿ ತಿಳಿದ ಮಹಿಳೆಯ ಪೋಷಕರು ಆಸ್ಪತ್ರೆಗೆ ಧಾವಿಸಿ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ಪತಿ ಆಟೋ ಚಾಲಕನಾಗಿದ್ದು, ಇತ್ತೀಚೆಗಷ್ಟೆ ಮೃತಪಟ್ಟಿದ್ದು ಓರ್ವ ಹೆಣ್ಣು ಮತ್ತು ಗಂಡು ಮಗುವಿನೊಂದಿಗೆ ಕೂಡ್ಲೂರು ನವಗ್ರಾಮದಲ್ಲಿ ವಾಸವಾಗಿದ್ದಾರೆ.