ಮಳೆಯಿಂದಾಗಿ ಪಂದ್ಯ ರದ್ದಾಗುವದಾಗಲೀ, ಇಲ್ಲ ತಡವಾಗುವ ದಾಗಲೀ, ಮಳೆಯಿಂದಾಗಿ ನಮ್ಮ ರಸಸ್ವಾದನೆಗೆ ಅಡ್ಡಿಯಾಯಿತೆಂದು ಕ್ರಿಕೆಟ್ ಪ್ರೇಮಿಗಳು ಕೊರಗುವದಾಗಲಿ, ಇಂತಹದಕ್ಕೆಲ್ಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇನ್ನು ಮುಂದೆ ಅವಕಾಶವಿಲ್ಲ. ಜಗತ್ತಿನಲ್ಲೇ ಪ್ರಪ್ರಥಮವಾಗಿ ಸಬ್ ಸರ್ಫೇಸ್ ಏರೇಷನ್ ಮತ್ತು ವ್ಯಾಕ್ಯೂಂ ಪವರ್ಡ್ ಡ್ರೈನೇಜ್ ತಂತ್ರಜ್ಞಾನವನ್ನು ಅಳವಡಿಸಿ ಕೊಂಡ ಹೆಗ್ಗಳಿಕೆ ಪಡೆದ ರಾಜ್ಯದ ಹೆಮ್ಮೆಯ ಕ್ರಿಕೆಟ್ ಕ್ರೀಡಾಂಗಣಕ್ಕೆ ಇನ್ನು ಮುಂದೆ ವರುಣನ ಕಾಟ ಇರಲಾರದು. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ಹೊಸ ತಲೆಮಾರಿನ ಕ್ರಿಕೆಟ್ ಪ್ರೇಮಿಗಳಿಗಷ್ಟೇ ಅಲ್ಲ, ಆಟಗಾರರೂ ಮಳೆಯ ಕಿರಿಕಿರಿ ಅನುಭವಿಸದಂತೆ ಮಾಡಿದೆ. ಈ ಹಿಂದೆಲ್ಲಾ ಮಳೆ ಬಂದಾಗ ಪಂದ್ಯ ಅರ್ಧಕ್ಕೆ ಮೊಟಕುಗೊಂಡು ಸಾಕಷ್ಟು ನಷ್ಟ ಅನುಭವಿಸ ಬೇಕಾಗಿತ್ತು. ಆದರೆ, ಮುಂದಿನ ದಿನಗಳಲ್ಲಿ ಅಂತಹ ಯಾವದೇ ಸಮಸ್ಯೆಗಳು ಉದ್ಭವಿಸುವದಿಲ್ಲ. ಸಬ್ ಏರ್ ಯಂತ್ರ ಇಂತಹದಕ್ಕೆಲ್ಲಾ ಬ್ರೇಕ್ ಹಾಕಲಿದೆ. ಮೈದಾನದಲ್ಲಿ ಮಳೆ ಬಂದು ನೀರು ಸಂಗ್ರಹ ವಾಗುತ್ತಿದ್ದಂತೆ ಸಬ್ ಏರ್ ವ್ಯವಸ್ಥೆ ಸ್ವಯಂ ಚಾಲಿತವಾಗಿ ಪ್ರಾರಂಭ ವಾಗಲಿದೆ. ಅಂಗಣದಲ್ಲಿ ನಿಂತ ನೀರು ಕ್ರಮೇಣ ಇಂಗಿ ಒಂದೆಡೆ ಶೇಖರಣೆಗೊಳ್ಳುತ್ತದೆ. ನಂತರ ಮೈದಾನ ಆಡುವದಕ್ಕೆ ಅಣಿಯಾಗುತ್ತದೆ. ಮಳೆಗಿಂತ ವೇಗವಾಗಿ ಮೈದಾನದಲ್ಲಿ ನಿಂತ ನೀರು ಇಂಗುವ ಗುಂಡಿಗಳ ಮೂಲಕ ಅಳವಡಿಸಲಾಗಿರುವ ಪೈಪ್ನಲ್ಲಿ ಹರಿದು ಹೋಗಲಿದೆ. ನಿಮಿಷ ಒಂದಕ್ಕೆ 10,000 ಲೀಟರ್ಗಳಷ್ಟು ನೀರು ಇಂಗುವದರಿಂದ ಪಂದ್ಯ ಮೊದಲಿನಂತೆ ವಿಳಂಭವಾಗುವದಿಲ್ಲ. ಈ ತಂತ್ರಜ್ಞಾನದಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಆರ್ಥಿಕವಾಗಿ ಲಾಭವಾಗಿದೆ. ಹಾಗೆ ಮುಂದಿನ ದಿನಗಳಲ್ಲಿ ಆರೋಗ್ಯಕರ ಕ್ರೀಡೆಗೆ ಇದು ವೇದಿಕೆಯಾಗಿದೆ. ಮೈದಾನಕ್ಕೆ ಈ ತಂತ್ರಜ್ಞಾನವನ್ನು ಅಳವಡಿಸುವ ಹಿಂದೆ ಸಾಕಷ್ಟು ಜನರ ಪರಿಶ್ರಮವಿದ್ದು, ಪಿಚ್ ಕ್ಯೂರೇಟರ್ ಶ್ರೀರಾಮ್ ಮತ್ತು ಅವರ ತಂಡ ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸಿದೆ.
ಸಬ್ ಏರ್ ಅಳವಡಿಕೆ : ಸಬ್ ಏರ್ ಎನ್ನುವದು ಅತ್ಯಾಧುನಿಕ ತಂತ್ರಜ್ಞಾನವಾಗಿದ್ದು, ಇದನ್ನು ಅಳವಡಿಸುವದಕ್ಕಾಗಿ ಕ್ರೀಡಾಂಗಣದಲ್ಲಿ 1000 ಟ್ರಕ್ಲೋಡ್’ಗಳಷ್ಟು ಮಣ್ಣನ್ನು ಹೊರ ತೆಗೆಯಲಾಗಿದೆ. ನಂತರ ಗ್ರೇಡಿಂಗ್, ಕಂಪ್ಯಾಕ್ಷನ್, ಜಿಯೋ-ಟೆಕ್ಸ್ಟೈಲ್ನ್ನು ಅಳವಡಿಸಲಾಗಿದೆ. ಟ್ರೆಜಿಂಗ್ 15ಎಂಎಂ ನಿಂದ 800 ಎಂಎಂ ಅಳತೆಯ ಪರ್ಫಾರೇಟಡ್ ಪೈಪುಗಳನ್ನು 4.5 ಕಿ.ಮೀ.ಗಳಷ್ಟು ಉದ್ದದಲ್ಲಿ ಅಂಗಣದ ಸುತ್ತ ಜಲ್ಲಿ ಪದರ ಮತ್ತು ಉತ್ತಮ ಗುಣಮಟ್ಟದ ಮಣ್ಣಿನ ಪದರವನ್ನು ಸಾವಯವ ಗೊಬ್ಬರದೊಂದಿಗೆ ಮಿಶ್ರಣ ಮಾಡಿ ಬರ್ಮುಡಾ ಹುಲ್ಲನ್ನು ಬೆಳೆಸಲಾಗಿದೆ.