ಶನಿವಾರಸಂತೆ, ಆ. 15: ಬ್ಯಾಡಗೊಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣ್ಣಾರಳ್ಳಿ ಗ್ರಾಮದ ನಿವಾಸಿಯೊಬ್ಬರ ಮನೆಗೆ ಭಾನುವಾರ ಚಿನ್ನದ ಆಭರಣಗಳನ್ನು ಪಾಲಿಷ್ ಮಾಡಿಕೊಡುವದಾಗಿ ಹೇಳಿ, ಚಿನ್ನ ಕಳ್ಳತನ ಮಾಡಲು ಯತ್ನಿಸಿದ ಬಿಹಾರ ರಾಜ್ಯದ ಈರ್ವರು ಯುವಕರನ್ನು ಬೆಂಬಳೂರು ಸುತ್ತಮುತ್ತಲ ಗ್ರಾಮಸ್ಥರು ಹಿಡಿದು ತೆಂಗಿನ ಮರಕ್ಕೆ ಕಟ್ಟಿ ಹಾಕಿ ಧರ್ಮದೇಟು ನೀಡಿ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.
ನಿನ್ನೆ ಸಂಜೆ ಕಣಾರಳ್ಳಿ ಗ್ರಾಮದಲ್ಲಿ ವಾಸವಿರುವ ಸುರೇಶ್ ಅವರ ಪತ್ನಿ ಹೇಮ ಮನೆಯಲ್ಲಿದ್ದ ಸಮಯದಲ್ಲಿ ಅಪರಿಚಿತ ಬಿಹಾರ್ ರಾಜ್ಯದ ಇಬ್ಬರು ಯುವಕರಾದ ವಿಪಿನ್ ಸಾದ್ ಹಾಗೂ ರನೌವೀರ್ ಸಾದ್ ಎಂಬವರುಗಳು ಬಂದು ಚಿನ್ನದ ಚೈನನ್ನು ಪಾಲಿಷ್ ಮಾಡಿಕೊಡುವದಾಗಿ ಹೇಳಿ ಚಿನ್ನದ ಸರವನ್ನು ತೆಗೆದುಕೊಂಡು ಕೆಮಿಕಲ್ ಹಾಕಿದ ಪಾತ್ರೆಗೆ ಹಾಕಿ 5 ನಿಮಿಷದ ನಂತರ ಕೊಟ್ಟರು. ಚಿನ್ನದ ಸರ ನೋಡಿ ಸಂಶಯಪಟ್ಟು ತನ್ನ ಮಗ ಸುಶಾಂತನೊಂದಿಗೆ ಈ ಚಿನ್ನದ ಮಾಂಗಲ್ಯ ಸರವನ್ನು ಕೊಡ್ಲಿಪೇಟೆಯ ಚಿನ್ನದ ಅಂಗಡಿಗೆ ಕಳುಹಿಸಿ ತೂಕ ಮಾಡಿಸಿದಾಗ 39 ಗ್ರಾಂ. ಸರ 31 ಗ್ರಾಂ. ಆಗಿತ್ತು.
ಸರವನ್ನು ಪಾಲಿಷ್ ಮಾಡುವ ನೆಪದಲ್ಲಿ 8 ಗ್ರಾಂ. ಚಿನ್ನವನ್ನು ಕರಗಿಸಿ ಮೋಸ ಮಾಡಿರುವ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ನೂರಾರು ಗ್ರಾಮಸ್ಥರು ಸ್ಥಳಕ್ಕೆ ಬಂದು ಇಬ್ಬರು ಯುವಕರಿಗೆ ಧರ್ಮದೇಟು ನೀಡಿ ಪಕ್ಕದ ತೆಂಗಿನ ಮರಕ್ಕೆ ಕಟ್ಟಿ ಹಾಕಿದರು. ಈ ಬಗ್ಗೆ ಮನೆಯೊಡತಿ ನೀಡಿದ ದೂರಿನ ಮೇರೆ ಶನಿವಾರಸಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದÀು ಪ್ರಕರಣ ದಾಖಲಿಸಿದ್ದಾರೆ.