ಮಡಿಕೇರಿ, ಅ. 3: ಭಾರತೀಯ ವಿದ್ಯಾಭವನ ಕೇಂದ್ರದಲ್ಲಿ ಕಲಾ ಭಾರತಿ ಆಯೋಜಿಸಿರುವ ಆರು ದಿನದ ಸುಂದರ ಚಿತ್ರಕಲಾ ಪ್ರದರ್ಶನ ಇಂದು ಉದ್ಘಾಟನೆಗೊಂಡಿದೆ.

ಸುಮಾರು ಒಂಭತ್ತು ಕಲಾವಿದರ ಕುಂಚದಿಂದ ಹೊರ ಬಂದಿರುವ ಜಲವರ್ಣಣ ತೈಲವರ್ಣ, ಎಕ್ರಿಲಿಕ್ ಚಿತ್ರ ಕಲೆಗಳ ಪ್ರದರ್ಶನವನ್ನು ಸಂಗೀತ ವಿಧುಷಿ ಜಯಲಕ್ಷ್ಮೀ ರಮೇಶ್ ಅವರು ದೀಪ ಹಾಗೂ ಸಂಗೀತದ ಮೂಲಕ ಉದ್ಘಾಟಿಸಿದರು.

ಈ ಸಂದರ್ಭ ಜಯಲಕ್ಷ್ಮಿ ಅವರನ್ನು ‘ಶಕ್ತಿ’ ಸಂಪಾದಕ ಬಿ.ಜಿ. ಅನಂತಶಯನ ಸನ್ಮಾನಿಸಿದರು. ಕಲೆಯ ಯಾವದೇ ಪ್ರಾಕಾರದ ಹವ್ಯಾಸವೂ ಕಲಾವಿದನ ಸ್ವಂತ ಮನೆಯಿದ್ದಂತೆ. ಅದರೊಳಗೆ ಪ್ರವೇಶಿಸುವ ಕಲಾವಿದ ವಿಶ್ವವನ್ನು ಮರೆಯುತ್ತಾನೆ. ಸ್ವಾನಂದ ಅನುಭವಿಸುತ್ತಾನೆ ಎಂದು ಅನಂತಶಯನ ನುಡಿದರು.

ಕಲಾವಿದ ಆಯೋಜಕ ಪ್ರಸನ್ನ ಮಾತನಾಡಿ, ಶಿವರಾಮ ಕಾರಂತರು ಹೇಳಿದ್ದ ‘ದೇಶವೊಂದು ವಿಶಿಷ್ಟ ಅನಿಸಿಕೊಳ್ಳಬೇಕಾದರೆ ಅಲ್ಲಿನ ಕಲೆ ಮತ್ತು ಸಂಸ್ಕøತಿ ಮುಖ್ಯ’ ಎಂಬ ಮಾತನ್ನು ಸ್ಮರಿಸಿದರು. ಕಲಾವಿದ ಬಾವ ಮಾತನಾಡಿ, ಕಲಾಹೀನ ವ್ಯಕ್ತಿ ಪಶುವಿಗೆ ಸಮಾನ ಎಂಬ ಉಲ್ಲೇಖ ಮಾಡಿದರು. ಕಲಾವಿದ ಸತೀಶ್ ನಿರೂಪಣೆ ಮಾಡಿದರು.

ಹಿರಿಯ ಕಲಾವಿದರಾದ ಪ್ರಸನ್ನ ಕುಮಾರ್, ಬಿ.ಆರ್. ಸತೀಶ್, ರೂಪೇಶ್ ನಾಣಯ್ಯ, ರಾಮ್ ಗೌತಮ್, ಜಯರಾಮ್, ಉ.ರಾ. ನಾಗೇಶ್, ಬಾವ ಮಾಲ್ದಾರೆ, ಸಜಿತ್ ಮತ್ತು ಪ್ರವೀಣ್ ಕುಮಾರ್ ರಚಿಸಿದ ಕಲಾಕೃತಿಗಳು ಪ್ರದರ್ಶನಕ್ಕಿವೆ. ಚಿತ್ರಕಲಾ ಪ್ರದರ್ಶನ ಬೆಳಿಗ್ಗೆ 10.30 ರಿಂದ ಸಂಜೆ 8 ಗಂಟೆಯವರೆಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ.