ಗೋಣಿಕೊಪ್ಪಲು, ನ. 20: ಚಾಮರಾಜನಗರ ಜಿಲ್ಲೆಯ ಕೆ. ಗುಡಿ, ಬಿಳಿಗಿರಿ ರಂಗನಬೆಟ್ಟ ಮೊದಲಾದ ಕಡೆ ಇಷ್ಟ ಬಂದ ಆಹಾರ ತಿನ್ನುತ್ತಾ ಎಲ್ಲೆಂದರಲ್ಲಿ ನಿರ್ಭೀತಿಯಿಂದ ಸುತ್ತಾಡಿಕೊಂಡಿದ್ದ ಅಜಾನುಭಾಹು ಗಜರಾಜ ಈಗ ಕೊಡಗಿನ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕೇವಲ 8 ಮತ್ತು 10 ಅಡಿ ಸುತ್ತಳತೆಯ ಮರದ ದೊಡ್ಡಿಯಲ್ಲಿ ಬಂಧಿತನಾಗಿ ದ್ದಾನೆ. ಮನುಷ್ಯರು ಕಂಡರೆ ಸಾಕು ಕಿವಿ ನಿಮಿರಿಸಿಕೊಂಡು ಅವರ ಮೇಲೆ ಬಿದ್ದು ಮನಸ್ಸಿಗೆ ಬಂದಂತೆ ಹೊಸಕಿ ಹಾಕುತ್ತಿದ್ದ ಸಲಗ ಹೊರಬರಲಾಗದ ಸ್ಥಿತಿಯಲ್ಲಿ ಕಣ್ಣೀರು ಹಾಕುತ್ತಿದೆ. ದೊಡ್ಡಿಯ ಮರದ ಸಂದಿನಲ್ಲಿ ಸೊಂಡಿ ಲಾಡಿಸುತ್ತಾ ಬಿಸಿಲಿನ ಜಳದಲ್ಲಿ ಅಸಹಾಯಕ ನಾಗಿ ನಿಂತಿದೆ. ನಿಂತಲ್ಲಿಯೇ ಹಿಂದೆ ಮುಂದೆ ಕಾಲಾಡಿಸುತ್ತಿದೆ. ಬೇರೆ ಕಡೆ ತಿರುಗಲು ಕೂಡ ಅದಕ್ಕೆ ಆಗುತ್ತಿಲ್ಲ.
ದೊಡ್ಡಿ ಅಗಲ ಮಾಡಿದರೆ ಅದಕ್ಕೆ ಸ್ವಂತಂತ್ರ ಸಿಕ್ಕಿ ಓಡಾಡುತ್ತದೆ. ಆಗ ನಮ್ಮ ಮಾತು ಕೇಳುವದಿಲ್ಲ.ಮತ್ತು ಅದಕ್ಕೆ ಶಿಕ್ಷೆ ಅಂದರೆ ಏನು ಎಂಬುದು ತಿಳಿಯುವದಿಲ್ಲ. ಇದರಿಂದಾಗಿ ಅದರ ಸಿಟ್ಟು ಕಡಿಮೆಯಾಗುವದಿಲ್ಲ. ಜತೆಗೆ ಬೇಗ ಪಳಗುವದೂ ಇಲ್ಲ ಎನ್ನುತ್ತಾರೆ ಆನೆ ಮಾವುತರಾದ ವಸಂತ ಹಾಗೂ ರವಿ.
ಕೇವಲ 20 ವರ್ಷ ಈ ಮಾವುತರು ದೊಡ್ಡಿಯೊಳಗೆ ಭೋರ್ಗರೆಯುತ್ತಿರುವ ಭಾರೀ ಗಾತ್ರದ ಈ ಆನೆಯನ್ನು ಪಳಗಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ 10 ರಂದು ಚಾಮರಾಜ ನಗರದ ಅಂಡೆಕುರುಬರ ದೊಡ್ಡಿಯಲ್ಲಿ ಸೆರೆಹಿಡಿದ ಈ ಆನೆಯನ್ನು ಮತ್ತಿಗೋಡು ಶಿಬಿರಕ್ಕೆ ತಂದು ದೊಡ್ಡಿಯಲ್ಲಿ ಕೂಡಿಹಾಕಿದಾಗ ಹತ್ತಿರ ಯಾರನ್ನೂ ಬಿಟ್ಟುಕೊಡದೆ ಬುಸುಗುಡುತ್ತಿತ್ತು. ಭಾರೀ ಗಾತ್ರದ ಮರದ ದಿಮ್ಮಿಗಳನ್ನೆ ಮುರಿದು ಮೇಲೆ ನುಗ್ಗುವ ಭಯ ಮೂಡಿಸುತ್ತಿತ್ತು. ಆದರೆ ಶಿಬಿರದ ಇತರ ಸಾಕಾನೆಗಳನ್ನು ದೊಡ್ಡಿಯ ಸುತ್ತ ನಿಲ್ಲಿಸಿಕೊಂಡು ಅವುಗಳ ಸಹಾಯದಿಂದ ಸೊಪ್ಪು, ಬತ್ತದ ಹುಲ್ಲು, ಬೆಲ್ಲ ಹಾಗೂ ನೀರು ಕೊಡಲು ಮುಂದಾದೆವು. ಒಂದು ವಾರಗಳ ಕಾಲ ಭಾರೀ ಆತಂಕ ಮೂಡಿಸಿದ್ದ ಸಲಗ ಇದೀಗ ತುಸು ಹತೋಟಿಗೆ ಬಂದಿದೆ ಎಂದರು ಮಾವುತ ವಸಂತ.
ದೊಡ್ಡಿ ಒಳಗೆ ಕೂಡಿ ಹಾಕಿದಾಗ ಮರದ ದಿಮ್ಮಿಗಳಿಗೆ ಗುದ್ದಿ ಹಣೆ ಹಾಗೂ ಮುಖದ ಭಾಗಕ್ಕೆ ಗಾಯ ಮಾಡಿಕೊಂಡಿದೆ. ಇದಕ್ಕೆ ಬೇವಿನ ಎಣ್ಣೆ ಹಾಕಿ ವಾಸಿಮಾಡಲಾಗುತ್ತಿದೆ. ಈಗ ಭತ್ತದ ಹುಲ್ಲಿಗೆ ಬೆಲ್ಲ ಹಾಗೂ ಭತ್ತ ಎಸೆದರೆ ಸೊಂಡಿಲಿನಿಂದ ತೆಗೆದುಕೊಂಡು ತಿನ್ನುತ್ತದೆ. ನೀರನ್ನೂ ಕುಡಿಯುತ್ತಿದೆ. ನಿಧಾನವಾಗಿ ಮಾತುಗಳನ್ನು ಅರ್ಥಮಾಡಿಕೊಳ್ಳುತ್ತಿದೆ ಎಂದು ಅವರು ಹೇಳಿದರು.
ಮಾವುತ ವಸಂತ ಹಾಗೂ ರವಿ ದೊಡ್ಡಿ ಪಕ್ಕದಲ್ಲಿಯೇ ಬೆಂಕಿ ಹಾಕಿಕೊಂಡು ಮಲಗುತ್ತಿದ್ದಾರೆ. ಊಟ ಉಪಹಾರ ಎಲ್ಲವೂ ಅಲ್ಲಿಯೇ ಸಾಗುತ್ತಿದೆ. ಹಗಲಿನ ವೇಳೆಯಲ್ಲಿಯೂ ದೊಡ್ಡಿ ಬಿಟ್ಟು ಅತ್ತಿತ್ತ ಕದಲುತ್ತಿಲ್ಲ.
ಭಾರಿ ಗಾತ್ರದ ಆನೆ: ಇದುವರೆಗೆ ಸೆರೆ ಸಿಕ್ಕ ಆನೆಗಳಲ್ಲಿ ಈ ಆನೆಯೇ ಭಾರಿ ದೊಡ್ಡದು. ಈ ಆನೆ 9.45 ಅಡಿ ಎತ್ತರವಿದೆ ಎಂದು ಹುಣಸೂರು ವನ್ಯಜೀವಿ ವಿಭಾಗದ ವೈದ್ಯಾಧಿಕಾರಿ ಉಮಾಂಶಕರ್ ಹೇಳಿದರು.ಆನೆಯ ಎಡಭಾಗದ ದಂತ ಭಾರಿ ಗಾತ್ರದ್ದಾಗಿದೆ. ಆದರೆ ಬಲಭಾಗದ ದಂತ ಅರ್ಧ ಮುರಿದಿದೆ. ಇತರ ಕಾಡಾನೆಗಳೊಂದಿಗಿನ ಕಾದಾಟದಲ್ಲಿ ದಂತ ಮುರಿದಿರ ಬಹುದು ಎಂದು ಮಾವುತರು ಶಂಖೆ ವ್ಯಕ್ತಪಡಿಸಿದರು.