ಮಡಿಕೇರಿ, ನ.8 : ಚರಿತ್ರೆಯನ್ನು ತಿದ್ದಿ ರಾಜಕೀಯ ಲಾಭ ಪಡೆಯುತ್ತಿರುವವರು ಕೊಡಗು ಜಿಲ್ಲೆಯಲ್ಲಿ ಅಶಾಂತಿಯನ್ನು ಮೂಡಿಸುತ್ತಿದ್ದಾರೆ ಎಂದು ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್.ಪ್ರೇಮ್ ಕುಮಾರ್ ರಾಜಕೀಯ ಲಾಭಕ್ಕಾಗಿ ಕೆಲವರು ಚರಿತ್ರೆಯನ್ನು ತಿದ್ದುವ ಕಾರ್ಯವನ್ನು ಮಾಡುತ್ತಿದ್ದಾರೆ. ರಾಜ ಪ್ರಭುತ್ವ ಮತ್ತು ಪ್ರಜಾಪ್ರಭುತ್ವಕ್ಕೆ ಸಾಕಷ್ಟು ವ್ಯತ್ಯಾಸಗಳಿದ್ದು, ಅಶಾಂತಿಯನ್ನು ಸೃಷ್ಟಿಸುತ್ತಿರುವವರು ಇದನ್ನು ಮೊದಲು ತಿಳಿದುಕೊಳ್ಳಬೇಕೆಂದು ಸಲಹೆ ನೀಡಿದರು. ಟಿಪ್ಪು ಒಬ್ಬ ದೂರದೃಷ್ಟಿತ್ವದ ರಾಜನಾಗಿದ್ದು, ಹಿಂದೂ ದೇವಾಲಯಗಳಿಗೆ ಸಾಕಷ್ಟು ಸಹಕಾರ ನೀಡಿದ ಸಾಕ್ಷ್ಯಗಳು ಇತಿಹಾಸದಲ್ಲಿ ದೊರೆಯುತ್ತದೆ. ಆದರೆ ಟಿಪ್ಪು ಜಯಂತಿಯನ್ನು ಘೋಷಣೆ ಮಾಡಿದ ರಾಜ್ಯ ಕಾಂಗ್ರೆಸ್ ಸರಕಾರ ಟಿಪ್ಪುವಿನ ವ್ಯಕ್ತಿತ್ವವನ್ನು ಸಮಾಜಕ್ಕೆ ತಿಳಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.

ಟಿಪ್ಪು ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಮಾತ್ರವಲ್ಲ ಶ್ರೇಷ್ಠ ಆಡಳಿತಗಾರನೂ ಆಗಿದ್ದ. ಅಂತರರಾಷ್ಟ್ರೀಯ ಮಟ್ಟದಲ್ಲಿ ವಾಣಿಜ್ಯ ವ್ಯವಹಾರಗಳನ್ನು ವಿಸ್ತರಿಸಲು ಯೋಜನೆಗಳನ್ನು ರೂಪಿಸಿದ ಹೆಗ್ಗಳಿಕೆಯೂ ಆತನಿಗಿದೆ. ಬ್ರಿಟಿಷರ ಪರವಾಗಿದ್ದುಕೊಂಡು ಟಿಪ್ಪುವಿನ ವಿರುದ್ಧ ಸಂಚು ನಡೆಸಿದವರನ್ನು ಶಿಕ್ಷಿಸಲಾಗಿದೆ. ಆದರೆ ಅದು ಆ ಕಾಲದ ಸಹಜ ಪ್ರಕ್ರಿಯೆಯಾಗಿದ್ದು, ಅದನ್ನು ಒಂದು ಸಮುದಾಯದ ವಿರುದ್ಧದ ಹೋರಾಟವೆಂದು ಪ್ರತಿಬಿಂಬಿಸುವದು ದುರದೃಷ್ಟಕರವೆಂದು ಪ್ರೇಮ್ ಕುಮಾರ್ ತಿಳಿಸಿದರು.

ಸರಕಾರ ಟಿಪ್ಪು ಜಯಂತಿಯನ್ನು ಮುಸಲ್ಮಾನರ ಕಾರ್ಯಕ್ರಮದಂತೆ ಪ್ರತಿಬಿಂಬಿಸುತ್ತಿದ್ದರೆ, ಇದನ್ನು ವಿರೋಧಿಸುವ ಗುಂಪು ಟಿಪ್ಪು ಸ್ವಾತಂತ್ರ್ಯ ಹೋರಾಟಗಾರನೇ ಅಲ್ಲವೆಂದು ಟೀಕಿಸುವ ಮೂಲಕ ಬ್ರಿಟಿಷರ ವಿರುದ್ಧ ಹೋರಾಡಿ ಬಲಿದಾನಗೈದ ಇಡೀ ಸಮೂಹವನ್ನೇ ಅವಮಾನಿಸುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ರಾಜಕೀಯ ಸಂಘರ್ಷಕ್ಕಾಗಿ ಜಯಂತಿಯನ್ನು ಬಳಸಿಕೊಳ್ಳ ಲಾಗುತ್ತಿದ್ದು, ಕೊಡಗಿನಲ್ಲಿ ಶಾಂತಿ ಭಂಗ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ಪ್ರೇಮ್ ಕುಮಾರ್ ಆರೋಪಿಸಿದರು.

ಬಿಎಸ್‍ಪಿ ಉಪಾಧ್ಯಕ್ಷ ಜಯಪ್ಪ ಹಾನಗಲ್ ಮಾತನಾಡಿ ರಾಜಕಾರಣ ಕ್ಕಾಗಿ ಟಿಪ್ಪು ಜಯಂತಿ ದಿನ ಕೊಡಗು ಬಂದ್‍ಗೆ ಕರೆ ನೀಡಿದವರು ಮನುವಾದಿಗಳು ಎಂದು ಆರೋಪಿಸಿ ದರು. ಯಾರಿಗೂ ಪ್ರಯೋಜನವಿಲ್ಲದ ಇಂತಹ ವಿಚಾರಗಳಿಗೆ ಹೋರಾಟ ನಡೆಸುತ್ತಿರು ವವರು ಜಿಲ್ಲೆಯಲ್ಲಿರುವ ಆದಿವಾಸಿ ಗಳು, ದಲಿತರು ಹಾಗೂ ಕಡುಬಡವರಿಗಾಗಿ ಎಷ್ಟು ಹೋರಾಟಗಳನ್ನು ನಡೆಸಿದ್ದಾರೆ ಎಂದು ಅವರು ಪ್ರಶ್ನಿಸಿದರು. ದುರ್ಬಲರ ಮೇಲೆ ನಿತ್ಯ ದೌರ್ಜನ್ಯಗಳು ನಡೆಯುತ್ತಿವೆ. ಆದರೆ ಇದರ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.

ಟಿಪ್ಪು ಜಯಂತಿ ಮಾಡಿದಾಕ್ಷಣ ಕೊಡಗು ಜಿಲ್ಲೆ ಮುಳುಗಿ ಬಿಡುವದಿಲ್ಲ ಅಥವಾ ಸಮೃದ್ಧಿಯಾಗಿ ಬಿಡುವದಿಲ್ಲ. ಆದರೂ ಒಂದೇ ನಾಣ್ಯದ ಎರಡು ಮುಖಗಳಂತ್ತಿರುವ ಕಾಂಗ್ರೆಸ್ ಹಾಗೂ ಬಿಜೆಪಿ ಅಶಾಂತಿಯನ್ನು ಮೂಡಿಸುವ ಕಾರ್ಯಕ್ರಮಗಳನ್ನೇ ಆಯೋಜಿಸುತ್ತಿದೆ ಎಂದು ಟೀಕಿಸಿದ ಜಯಪ್ಪ ಹಾನಗಲ್ ಎಲ್ಲಾ ಜಯಂತಿಗಳನ್ನು ನಿಷೇಧಿಸಿ ಜನಪರ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.

ಪ್ರಧಾನ ಕಾರ್ಯದರ್ಶಿ ಎಸ್.ಇ.ಮೊಹಮ್ಮದ್ ಕುಂಞ ಮಾತನಾಡಿ ಟಿಪ್ಪುವನ್ನು ಅವಹೇಳನ ಮಾಡುವದನ್ನು ಖಂಡಿಸುವದಾಗಿ ಹೇಳಿದರು. ಟಿಪ್ಪುವಿನ ದೇಶಭಕ್ತಿಯನ್ನು ಬ್ರಿಟಿಷರೇ ಒಪ್ಪಿಕೊಂಡಿದ್ದು, ಸಂಪೂರ್ಣ ಇಂಗ್ಲೀಷ್‍ಮಯ ವಾಗಿರುವ ಮಂದಿಗೆ ಟಿಪ್ಪುವನ್ನು ಕನ್ನಡ ವಿರೋಧಿ ಎಂದು ಟೀಕಿಸುವ ನೈತಿಕತೆ ಇಲ್ಲವೆಂದರು.