ಕುಶಾಲನಗರ, ನ. 27: ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿ ಜೊತೆ ಮನರಂಜನೆ ನೀಡುವ ಗ್ರಾಮೀಣ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯ ಇದೆ ಎಂದು ಶ್ರೀ ಗಣಪತಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷ ವಿ.ಎನ್. ವಸಂತಕುಮಾರ್ ಅಭಿಪ್ರಾಯಪಟ್ಟರು. 97ನೇ ವರ್ಷದ ರಥೋತ್ಸವ ಮತ್ತು ಜಾತ್ರೆ ಪ್ರಯುಕ್ತ ಸ್ಥಳೀಯ ಗುಂಡೂರಾವ್ ಬಡಾವಣೆಯಲ್ಲಿ ಏರ್ಪಡಿಸಿರುವ ಮಕ್ಕಳ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಂದು ಗ್ರಾಮೀಣ ಕ್ರೀಡೆಯ ಹಿಂದೆಯೂ ಜನಪರ ದೂರದೃಷ್ಟಿಯ ಚಿಂತನೆಗಳು ಅಡಗಿವೆ. ಕಬಡ್ಡಿಯಂತಹ ಆಟ ನಮ್ಮ ಸಂಪೂರ್ಣ ದೇಹಕ್ಕೆ ವ್ಯಾಯಾಮವನ್ನು ನೀಡುತ್ತದೆ. ಲಗೋರಿ ಬುದ್ಧಿಪರೀಕ್ಷೆಯ ಜೊತೆಗೆ ಚಾಣಾಕ್ಷತನ ಹೆಚ್ಚಿಸುವಲ್ಲಿ ಸಹಕಾರಿ ಆಗಿದೆ. ಇಂತಹ ಗ್ರಾಮೀಣ ಕ್ರೀಡಾಕೂಟಗಳು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುವ ಮೂಲಕ ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವಂತಾಗಬೇಕು. ನಗರೀಕರಣದ ಇಂದಿನ ದಿನಗಳಲ್ಲಿ ಬದಲಾವಣೆ ಬಯಸುವವರಿಗೆ ಇಂತಹ ಕ್ರೀಡೆಗಳು ಸ್ಫೂರ್ತಿ ನೀಡುತ್ತದೆ ಎಂದರು.

ಮಕ್ಕಳಿಗಾಗಿ ಲಗೋರಿ, ಗೋಣಿಚೀಲ ಓಟ, ಮೂರು ಕಾಳಿನ ಓಟ, ಬಾಲ್ ಇನ್ ದಿ ಬಕೆಟ್ ಬ್ಲಾಸ್ಟ್ ದಿ ಬಲೂನ್, ಬಾಲಕರಿಗಾಗಿ ಕಬ್ಬಡ್ಡಿ, ಬಾಲಕಿಯರಿಗಾಗಿ ಥ್ರೋಬಾಲ್ ಆಟಗಳು ನಡೆದವು. ಅಪರಾಹ್ನ ಮಕ್ಕಳ ಸಂತೆಯನ್ನೂ ಏರ್ಪಡಿಸಲಾಗಿತ್ತು.

ಭಾನುವಾರ ಯುವ ಜಾತ್ರೋತ್ಸವ ಅಂಗವಾಗಿ ಆಹ್ವಾನಿತ ತಂಡಗಳ ನಡುವೆ ಫುಟ್‍ಬಾಲ್ ಪಂದ್ಯಾವಳಿ ನಡೆಯಿತು. ಹಗ್ಗಜಗ್ಗಾಟ, ಸ್ಲೋಬೈಕ್ ರೇಸ್, ಕಣ್ಣಿಗೆ ಬಟ್ಟೆ ಕಟ್ಟಿ ಮಡಿಕೆ ಒಡೆಯುವದು, ಸ್ಲೋಸೈಕಲ್ ರೇಸ್, ಮೂಟೆ ಹೊತ್ತು ಓಡುವದು ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕ್ರೀಡಾ ಸಮಿತಿ ಅಧ್ಯಕ್ಷ ವಿ.ಪಿ. ಶಶಿಧರ್, ದೇವಾಲಯ ಸಮಿತಿಯ ಜಿ.ಎಲ್. ನಾಗರಾಜ್. ಹೆಚ್.ಎನ್. ರಾಮಚಂದ್ರ ಮತ್ತಿತರರು ಇದ್ದರು.