ಮಡಿಕೇರಿ, ಜ. 21: ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ನಡೆಸಿ ಜಿ.ಪಂ. ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ನೀಡಬೇಕೆಂದು ದಿನಾಂಕ 04.08.2016ರಂದು ಸರ್ಕಾರ ಆದೇಶ ಹೊರಡಿಸಿದೆ. ಇದರ ಭಾಗವಾಗಿ ಇಲಾಖೆಯಿಂದಲೂ ಆದೇಶ ಬಂದು ಕಡ್ಡಾಯವಾಗಿ ಪಂಚಾಯಿತಿ ನೌಕರರಿಗೆ ಕನಿಷ್ಟ ವೇತನ ಜಾರಿಯಾದ ಬಗ್ಗೆ ಪ್ರತಿ ತಿಂಗಳು ನಡೆಯುವ ಪ್ರಗತಿ ಪರಿಶೀಲನೆ ಸಭೆಯಲ್ಲಿ ಚರ್ಚಿಸಿ ವರದಿ ನೀಡಲು ಹೇಳಿದ್ದರೂ ಜಿಲ್ಲಾ ಪಂಚಾಯಿತಿಯಿಂದ ಈ ಕುರಿತು ಕ್ರಮ ವಹಿಸದೆ ಇರುವದು ವಿಷಾದನೀಯ ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ ಆರೋಪಿಸಿದೆ.

ದಿನಾಂಕ 10.09.2016 ರಂದು ಆದೇಶದಲ್ಲಿದ್ದ “ಭವಿಷ್ಯವರ್ತಿ” ಪದವನ್ನು ತೆಗೆದು ಹಾಕಿ ಎಲ್ಲಾ ಅರ್ಹರಿರುವ ಸಿಬ್ಬಂದಿಗಳ ಅನುಮೋದನೆ ನೀಡಲು ಸರ್ಕಾರ ಆದೇಶ ಮಾಡಿದ್ದರೂ ಇಲ್ಲಿಯವರೆಗೆ ಬಾಕಿಯಿರುವ ಅನುಮೋದನೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿಲ್ಲ. 15-20 ವರ್ಷಗಳಿಂದ ಕೆಲಸ ನಿರ್ವಹಿಸಿದ ನೌಕರರು ಅನುಮೋದನೆಗಾಗಿ ಕಾಯುತ್ತಿದ್ದಾರೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು.

10-12 ತಿಂಗಳುಗಳಿಂದ ವೇತನವಿಲ್ಲದೇ ಪಂಚಾಯಿತಿ ನೌಕರರು ಕಂಗಾಲಾಗಿದ್ದಾರೆ. ಅಧಿಕಾರಿ ವರ್ಗ ಎಚ್ಚೆತ್ತುಕೊಳ್ಳ ಬೇಕಾಗಿದೆ. ಜಿಲ್ಲೆಯಲ್ಲಿ ಯಾವ ಪಂಚಾಯಿತಿಯಲ್ಲಿ ವೇತನ ನೀಡಿಲ್ಲ. ಆ ಪಂಚಾಯತ್ ಪಿಡಿಓ ಅಥವಾ ಕಾರ್ಯದರ್ಶಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ತಕ್ಷಣ ಪಂಚಾಯಿತಿ ನೌಕರರಿಗೆ ವೇತನ ಕೊಡಿಸಲು ಕ್ರಮ ವಹಿಸಬೇಕು.

ಸರಕಾರದ ಆದೇಶದಂತೆ ತೆರಿಗೆಗಳನ್ನು ಪರಿಷ್ಕರಿಸಬೇಕು., ತೆರಿಗೆ ಸಂಗ್ರಹದ ಹಣದಲ್ಲಿ ಸಿಬ್ಬಂದಿಗಳ ವೇತನ ಸಂದಾಯ ಮಾಡಬೇಕು., ಸರಕಾರ ನಿಗಧಿಪಡಿಸಿದ ಕನಿಷ್ಠ ವೇತನ ಜಾರಿಯಾಗಬೇಕು., ಬಾಕಿ ಇರುವ ಅನುಮೋದನೆ ಪ್ರಕರಣಗಳನ್ನು ಇತ್ಯರ್ಥ ಪಡಿಸಬೇಕು., ಸೇವಾ ಪುಸ್ತಕ ಇಡಲು ಆದೇಶ ನೀಡಬೇಕು., ಸರಕಾರದ ಆದೇಶದಂತೆ ಜನಶ್ರೀ ವಿಮಾ ಯೋಜನೆ ಜಾರಿ ಮಾಡಬೇಕು., ಕರ ವಸೂಲಿಗಾರರ ಜೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಿ ಗ್ರೇಡ್-2 ಹಾಗೂ ಲೆಕ್ಕ ಸಹಾಯಕ ಹುದ್ದೆಗಳಿಗೆ ಬಡ್ತಿ ನೀಡಬೇಕು., ಕನಿಷ್ಟ ವೇತನ ರೂ. 18 ಸಾವಿರ ನಿಗಧಿ ಮಾಡಬೇಕು ಮತ್ತು ಎಸ್ಕ್ರೋ ಖಾತೆ ತೆರೆಯಬೇಕು., ನೌಕರರ ವೇತನಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು., ಪ್ರತಿಯೊಂದು ಗ್ರಾಮ ಪಂಚಾಯಿತಿ ಗಳಿಗೆ ಲೆಕ್ಕ ಸಹಾಯಕ ಹುದ್ದೆಗೆ ಹಣಕಾಸು ಇಲಾಖೆ ಮಂಜೂರಾತಿ ನೀಡಬೇಕು., ಭವಿಷ್ಯನಿಧಿ ಯೋಜನೆ ವ್ಯಾಪ್ತಿಯಲ್ಲಿ ನಮ್ಮ ನೌಕರರನ್ನು ಒಳಗೊಳ್ಳುವಂತೆ ಶೆಡ್ಯೂಲ್‍ನಲ್ಲಿ ಸೇರಿಸಬೇಕು ಎಂದು ಆಗ್ರಹಿಸಿ ಮನವಿ ಮಾಡಲಾಯಿತು.