ಸೋಮವಾರಪೇಟೆ,ನ. 14: ಗ್ರಾಮ ಪಂಚಾಯಿತಿ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ವತಿಯಿಂದ ತಾಲೂಕು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾ ಸಮಿತಿ ಅಧ್ಯಕ್ಷ ಪಿ.ಆರ್.ಭರತ್ ನೇತೃತ್ವದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು, ನೌಕರರಿಗೆ ಸರ್ಕಾರ ನಿಗದಿ ಪಡಿಸಿದ ಕನಿಷ್ಟ ವೇತನವನ್ನು ಜಾರಿ ಮಾಡಬೇಕೆಂದು ಆಗ್ರಹಿಸಿದರು. ಪಂಚಾಯಿತಿ ತೆರಿಗೆ ಹಣದ ಶೇ.40ರಷ್ಟನ್ನು ನೌಕರರ ವೇತನಕ್ಕಾಗಿ ಬಳಸಬೇಕೆಂದು ಗ್ರಾಮೀಣಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಎಲ್ಲಾ ಪಂಚಾಯಿತಿಗಳಿಗೆ ಆದೇಶ ನೀಡಿದ್ದರೂ, ಹಲವಾರು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆದೇಶದ ಪ್ರತಿಯನ್ನು ಕಡತದಲ್ಲೇ ಇಟ್ಟುಕೊಂಡಿದ್ದಾರೆ ಎಂದು ದೂರಿದರು.
ಪ್ರತಿ ತಿಂಗಳು 5ನೇ ತಾರೀಕಿನ ಒಳಗೆ ವೇತನ ನೀಡಬೇಕು. ವೇತನಕ್ಕೆ ಬೇಕಾಗುವ ಅನುದಾನವನ್ನು ಸರ್ಕಾರವೇ ನೀಡಬೇಕು. ನೌಕರರ ಭವಿಷ್ಯ ನಿಧಿ ಜಾರಿ ಮಾಡಬೇಕು. ನಿವೃತ್ತಿಯಾಗುವ ನೌಕರರಿಗೆ ಉಪದಾನ 15 ತಿಂಗಳ ವೇತನವನ್ನು ಜಾರಿ ಮಾಡಬೇಕು. ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಕ್ಲರ್ಕ್ ಇವರುಗಳ ಬಡ್ತಿ ಕೋಟವನ್ನು ಶೇ.30ರಿಂದ ಶೇ.100ಕ್ಕೆ ಹೆಚ್ಚಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಭರತ್ ಸರ್ಕಾರವನ್ನು ಆಗ್ರಹಿಸಿದರು. ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಪುನೀತ್‍ಕುಮಾರ್, ಪೌಸಿಯಾ, ಚನ್ನಪ್ಪ, ಮೂರ್ತಿ, ಅಣ್ಣಪ್ಪ, ಉಮೇಶ್, ವಸಂತ್, ಭರತ್ ಸೇರಿದಂತೆ ಇತರರು ಭಾಗವಹಿಸಿದ್ದರು.