ಮೂರ್ನಾಡು, ಅ. 3 : ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಯ ಜಮಾಬಂದಿ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾದ ಸಭೆಯಲ್ಲಿ 2015-16ನೇ ಸಾಲಿನಲ್ಲಿ ವಿವಿಧ ಯೋಜನೆಗಳಲ್ಲಿ ನಡೆದ ಕಾಮಗಾರಿಗಳ ಖರ್ಚು ವೆಚ್ಚಗಳ ವಿವರಗಳನ್ನು ಪ್ರಸ್ತಾಪಿಸಿ ಅನುಮೋದನೆ ಪಡೆಯಲಾಯಿತು.
2015-16ನೇ ಸಾಲಿನಲ್ಲಿ ಕುಟುಂಬದ ಹೆಸರುಗಳಲ್ಲಿ ಅನೇಕ ಕಾಮಗಾರಿಗಳು ನಡೆದಿವೆ. ಕುಟುಂಬದ ಹೆಸರಿನಲ್ಲಿ ಕ್ರಿಯಾ ಯೋಜನೆ ಮಾಡದೆ ಕಾಮಗಾರಿಯ ಪ್ರಯೋಜನ ಪಡೆದುಕೊಳ್ಳುವ ಕುಟುಂಬಸ್ಥರ ಹೆಸರನ್ನು ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳ ಬೇಕು ಎಂದು ಕಾಂತೂರು ಗ್ರಾಮದ ನಿವಾಸಿ ಧನಂಜಯ್ ಅಭಿಪ್ರಾಯ ವ್ಯಕ್ತ ಪಡಿಸಿದರು. ಇದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನಾ ಪ್ರತಿಕ್ರಿಯಿಸಿ ಮುಂದೆ ನಡೆಸಲಾಗುವ ಕಾಮಗಾರಿಗಳ ಕ್ರಿಯಾ ಯೋಜನೆಯಲ್ಲಿ ಆಯಾ ಕುಟುಂಬಸ್ಥರ ಹೆಸರುಗಳನ್ನು ಹಾಕಲಾಗುತ್ತದೆ ಎಂದರು.
ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸಿ.ಎಂ. ಪ್ರಮೋದ್ ನೋಡೆಲ್ ಅಧಿಕಾರಿಯಾಗಿ ಆಗಮಿಸಿದರು. ಸಭೆಯಲ್ಲಿ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕುಂಞಪ್ಪ ಪವಿತ್ರ, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ವಿಭಾಗದ ಸಹಾಯಕ ಅಭಿಯಂತರ ಮಹದೇವ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಲೊಕೇಶ್ ಹಾಗೂ ಸದಸ್ಯರು ಹಾಜರಿದ್ದರು.