ಸೋಮವಾರಪೇಟೆ, ಆ. 24: ಯಾವದೇ ಸಂಘ ಸಂಸ್ಥೆಗಳು ಸಾಮೂಹಿಕವಾಗಿ ಗೌರಿ ಗಣೇಶ ಉತ್ಸವ ಮೂರ್ತಿಗಳನ್ನು ಪ್ರತಿಷ್ಠಾಪಿಸ ಬೇಕಿದ್ದರೆ ಪೊಲೀಸ್ ಇಲಾಖೆ ಹಾಗೂ ಸಂಬಂಧಿಸಿದ ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆಯುವದು ಕಡ್ಡಾಯವಾಗಿದೆ ಎಂದು ಡಿವೈಎಸ್‍ಪಿ ಟಿ.ಕುಮಾರ್ ತಿಳಿಸಿದರು. ನಗರದ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಗೌರಿ ಗಣೇಶ ಉತ್ಸವ ಸಮಿತಿ ಪದಾಧಿಕಾರಿಗಳು, ಗ್ರಾಮ ಪಂಚಾಯಿತಿ ಸೇರಿದಂತೆ ಇತರ ಇಲಾಖಾಧಿಕಾರಿಗಳ ಸಭೆಯಲ್ಲಿ ಅವರು ಭಾಗವಹಿಸಿ, ವಿಗ್ರಹಗಳ ಪ್ರತಿಷ್ಠಾಪನೆ ಸಂಬಂಧಿತ ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಪಿಓಪಿ-ಕೆಮಿಕಲ್ ಮಿಶ್ರಿತ ಗಣಪತಿಗಳನ್ನು ಜಲಮೂಲಗಳಾದ ಬಾವಿ,ಕೆರೆಗಳಲ್ಲಿ ವಿಸರ್ಜನೆ ಮಾಡಬಾರದು. ಪರವಾನಗಿ ಇಲ್ಲದೆ ಗಣಪತಿ ವಿಗ್ರಹಗಳನ್ನು ಮಾರಾಟ ಮಾಡುವದೂ ಅಪರಾಧವಾಗಿದ್ದು, ಸಂಬಂಧಿತ ಇಲಾಖೆಯಿಂದ ಅನುಮತಿ ಪಡೆಯುವದು ಕಡ್ಡಾಯ ವಾಗಿದೆ. ಉತ್ಸವ, ಮೆರವಣಿಗೆ ಹಾಗೂ ವಿಗ್ರಹಗಳ ವಿಸರ್ಜನೆ ಸಂದರ್ಭ ಅತ್ಯಂತ ಜಾಗರೂಕತೆ ವಹಿಸಬೇಕು. ಸಮಿತಿ ಸದಸ್ಯರು ಹೆಚ್ಚಿನ ಜವಾಬ್ದಾರಿ ಯಿಂದ ಉತ್ಸವ ಆಚರಿಸಬೇಕು ಎಂದು ಡಿವೈಎಸ್‍ಪಿ ಸೂಚನೆ ನೀಡಿದರು. ಪೆಂಡಾಲ್‍ಗೆ ವಿದ್ಯುತ್ ಸಂಪರ್ಕ ಬಯಸುವವರು ಸೆಸ್ಕ್‍ನಿಂದ ಅನುಮತಿ ಪಡೆದಿರಬೇಕು. ವಿದ್ಯುತ್ ಕಳ್ಳತನ ಕ್ರಿಮಿನಲ್ ಅಪರಾಧವಾಗಿದ್ದು, ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ. ಅಗ್ನಿ ಅನಾಹುತಗಳಿಂದ ಪಾರಾಗಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳ ಬೇಕು. ಧ್ವನಿವರ್ಧಕಕ್ಕೆ ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯ ಬೇಕು ಎಂದು ತಿಳಿಸಿದರು.

ಪೆಂಡಾಲ್‍ನಲ್ಲಿ ಚಲನಚಿತ್ರ ಗೀತೆಗಳ ಬದಲು ಭಕ್ತಿ ಗೀತೆಗಳಿಗೆ ಪ್ರಾಧಾನ್ಯತೆ ನೀಡಬೇಕು. ಉತ್ಸವಗಳು ಬೇರೆಯವರಿಗೆ ಕಿರಿಕಿರಿ ಉಂಟು ಮಾಡಬಾರದು. ಸುತ್ತಲೂ ಬೆಳಕಿನ ವ್ಯವಸ್ಥೆ ಅಳವಡಿಸಬೇಕು. ವಿಗ್ರಹಗಳ ಪ್ರತಿಷ್ಠಾಪನೆಯಿಂದ ಸಾರ್ವಜನಿಕರ ಓಡಾಟಕ್ಕೆ ತಡೆಯೊಡ್ಡಬಾರದು. ಇದರೊಂದಿಗೆ ಬಲವಂತದ ವಂತಿಗೆ ಸಂಗ್ರಹ ಮಾಡಬಾರದು ಎಂದು ಎಚ್ಚರಿಕೆ ನೀಡಿದರು.

ಉತ್ಸವಮೂರ್ತಿಗಳನ್ನು ಸಾಧ್ಯವಾದಷ್ಟೂ ಹಗಲಿನ ವೇಳೆಯಲ್ಲೇ ವಿಸರ್ಜನೆ ಮಾಡಬೇಕು. ತಪ್ಪಿದರೆ ರಾತ್ರಿ 10ಗಂಟೆಯ ಒಳಗೆ ವಿಸರ್ಜಿಸ ಬೇಕು. ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯ ಒಳಗೆ ಬಳಸಬೇಕು. ವಿವಿಧ ಸಮಿತಿಗಳ ಪದಾಧಿಕಾರಿಗಳು ಚರ್ಚಿಸಿ ಸಾಮೂಹಿಕವಾಗಿ ವಿಸರ್ಜಿಸಲು ಮುಂದಾಗಬೇಕು. ಎಲ್ಲೆಡೆಯೂ ಪೊಲೀಸ್ ಗಸ್ತು ಹಾಕಲಾಗುವದು. ಯಾವದೇ ಅಹಿತಕರ ಘಟನೆಗಳು ನಡೆಯದಂತೆ ಸಮಿತಿ ಸದಸ್ಯರೇ ಹೆಚ್ಚಿನ ಜವಾಬ್ದಾರಿಯಿಂದ ಉತ್ಸವ ನಡೆಸಬೇಕು ಎಂದು ಡಿವೈಎಸ್‍ಪಿ ಕುಮಾರ್ ಸೂಚಿಸಿದರು. ವೇದಿಕೆಯಲ್ಲಿ ತಾಲೂಕು ತಹಶೀಲ್ದಾರ್ ಬಿ.ಸಿ. ಶಿವಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್, ಪೊಲೀಸ್ ವೃತ್ತ ನಿರೀಕ್ಷಕ ಪರಶಿವ ಮೂರ್ತಿ ಅವರುಗಳು ಉಪಸ್ಥಿತರಿದ್ದು, ಸಲಹೆ-ಸೂಚನೆ ನೀಡಿದರು.