ಮಡಿಕೇರಿ, ಸೆ. 25: ಕೊಡಗು ಗೌಡ ಯುವ ವೇದಿಕೆ ವತಿಯಿಂದ ನಗರದ ಮೇಲಿನ ಗೌಡ ಸಮಾಜದಲ್ಲಿಂದು ನಡೆದ ಕೈಲು ಮುಹೂರ್ತ ಸಂತೋಷ ಕೂಟ ಗಮನ ಸೆಳೆಯಿತು. ಬೆಳಗ್ಗಿನಿಂದ ಸಂಜೆಯವರೆಗೂ ವಿವಿಧ ಕ್ರೀಡಾ ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ಸಂತೋಷ ಕೂಟಕ್ಕೆ ಮೆರಗು ನೀಡಿದವು. ಮಕ್ಕಳಿಗಾಗಿ ನಡೆದ ಕಾಳು ಹೆಕ್ಕುವ ಸ್ಪರ್ಧೆ, ಕೆರೆದಡ, ಕಪ್ಪೆ ಜಿಗಿತ, ಓಟ, ಬಲೂನು ಹೊಡೆಯುವ ಸ್ಪರ್ಧೆ ನಡೆಯಿತು.ಪುರುಷ-ಮಹಿಳೆಯರಿಗಾಗಿ ಓಟ ಸೇರಿದಂತೆ ಮುಕ್ತ ಹಗ್ಗಜಗ್ಗಾಟ, ಗಂಡಸರಿಗಾಗಿ ಬಾಂಬ್ ಇನ್ ದ ಸಿಟಿ, ಭಾರದ ಗುಂಡು ಎಸೆತ, ವಯಸ್ಕರಿಗೆ 100 ಮೀ ಓಟ, ಹೆಂಗಸರಿಗಾಗಿ ನಿಂಬೆಹಣ್ಣು ಚಮಚ ಓಟ, ದಂಪತಿಗಳಿಗಾಗಿ ನಡೆದ ಮ್ಯೂಸಿಕಲ್ ಚೇರ್ ಸ್ಪರ್ಧೆಗಳು ಮನರಂಜನೆ ಒದಗಿಸಿದವು. ಅವಿವಾಹಿತ ಮಹಿಳೆಯರ ಪಾಸಿಂಗ್ ದ ಬಾಲ್, ಪುರುಷರ ಏರ್ಗನ್ ಶೂಟಿಂಗ್ ಸ್ಪರ್ಧೆಗಳು ಕುತೂಹಲ ಕೆರಳಿಸಿದವು. ಕುಟುಂಬವಾರು ನಡೆದ ಕೇರಂ ಪಂದ್ಯಾಟ ಕೂಡ ಜಿದ್ದಾಜಿದ್ದಿನಿಂದ ನಡೆಯಿತು.