ಕುಶಾಲನಗರ, ನ, 21: ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕೆಲವು ಶಕ್ತಿಗಳು ಗೌಡಜನಾಂಗದ ವಿರುದ್ಧ ಹೇಳಿಕೆ ನೀಡುತ್ತಿರುವದು ಖಂಡನೀಯ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೇಚಪ್ಪನ ಮೋಹನ್ ಕುಮಾರ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ಮೂಲಕ ಈ ಬಗ್ಗೆ ತಿಳಿಸಿದ ಅವರು, ಕೊಡಗು ಜಿಲ್ಲಾ ಕಾಂಗ್ರೆಸ್ಸಿನ ಅಧ್ಯಕ್ಷಗಿರಿಯ ವಿಷಯದಲ್ಲೂ ಜಾತಿಯ ಹೆಸರಿನಲ್ಲಿ ವಿನಾಕಾರಣ ಗೊಂದಲ ಸೃಷ್ಠಿ ಮಾಡುತ್ತಿರುವದು ಕಂಡುಬಂದಿದೆ ಎಂದಿದ್ದಾರೆ.

ಜಿಲ್ಲೆಯ ಜನಸಂಖ್ಯೆಯ ಶೇ. 15 ರಷ್ಟಿರುವ ಕೊಡವರಿಗೆ ಜಿಲ್ಲಾ ಕಾಂಗ್ರೆಸ್ಸಿನ ಇತಿಹಾಸದಲ್ಲಿ ಕಂಡಿರುವ 22 ಅಧ್ಯಕ್ಷರ ಪೈಕಿ 20 ಮಂದಿಗೆ ಅಧ್ಯಕ್ಷ ಅಧಿಕಾರವನ್ನು ನೀಡಲಾಗಿದೆ. ಎಂದಿರುವ ಮೋಹನ್ ಕುಮಾರ್, ಶೇ.85ರಷ್ಟಿರುವ ಕೊಡವೇತರರಿಗೆ ಈ ಅವಧಿಯಲ್ಲಿ ಕೇವಲ ಇಬ್ಬರಿಗೆ ಮಾತ್ರ ಅಧ್ಯಕ್ಷಗಿರಿಯನ್ನು ನೀಡಲಾಗಿದೆ. ಅದರಲ್ಲೂ ಕೊಡಗಿನ ಜನಸಂಖ್ಯೆಯ ಶೇ. 30 ರಷ್ಟಿದ್ದು ಪ್ರಬಲವಾಗಿರುವ ಗೌಡ ಜನಾಂಗಕ್ಕೆ ಇದುವರೆಗೆ ಯಾವದೇ ಸಂದರ್ಭ ಕಾಂಗ್ರೆಸ್ ಪಕ್ಷ ಅಧ್ಯಕ್ಷಗಿರಿಯನ್ನು ನೀಡದಿರುವದು ವಿಪರ್ಯಾಸ ಹಾಗೂ ಕಾಂಗ್ರೆಸ್ಸಿನ ಮೊಂಡುತನಕ್ಕೆ ಹಿಡಿದಿರುವ ಕನ್ನಡಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ಪ್ರಬಲವಾಗಿರುವ ಗೌಡಜನಾಂಗವು ಈ ಬಗ್ಗೆ ಒಂದು ಬಾರಿಯೂ ಚಕಾರವೆತ್ತದೆ, ಕೊಡವ-ಗೌಡರೆಂಬ ಭೇದಭಾವವಿಲ್ಲದೆ ಎರಡು ಬಾರಿ ಎ.ಎಂ. ಬೆಳ್ಳಿಯಪ್ಪ ಅವರನ್ನು ಕಾಂಗ್ರೆಸ್ಸಿನಿಂದ ಹಾಗೂ ಸತತವಾಗಿ ನಾಲ್ಕು ಬಾರಿ ಅಪ್ಪಚ್ಚುರಂಜನ್ ಅವರನ್ನು ಬಿ.ಜೆ.ಪಿ.ಯಿಂದ ಶಾಸಕರಾಗಿ ಚುನಾಯಿತರಾಗಲು ಕಾರಣಕರ್ತರಾಗಿರುತ್ತಾರೆ. ಸತತವಾಗಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಗೌಡ ಜನಾಂಗ ಮತ್ತು ಇತರ ಕೊಡವೇತರ ಸಮಾನ ಮನಸ್ಕರು ಮಡಿಕೇರಿಯಲ್ಲಿ ಸಭೆ ಸೇರಿ ಚರ್ಚಿಸಿರುವ ವಿಷಯವನ್ನು ಕೆಲವು ಮಂದಿ ಜಾತಿಯ ಮೇಲೆ ವಿರುದ್ಧ ಮಾಡುತ್ತಿರುವದು ಖಂಡನೀಯ. ಜನಾಂಗದ ಪ್ರಮುಖ ರಾದ ಕೆ.ಪಿ. ಚಂದ್ರಕಲಾ ಹಾಗೂ ಎಸ್.ಎಂ. ಚಂಗಪ್ಪ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರು ವದು ಸರಿಯಲ್ಲ ಎಂದು ತಿಳಿಸಿದ್ದಾರೆ.

ಶೇ. 15 ರಷ್ಟಿರುವ ಕೊಡವರು ಮತಗಳ ಹೆಸರಿನಲ್ಲಿ ತಂತ್ರವನ್ನು ಬಳಸುವದಾದರೆ ಶೇ. 85 ರಷ್ಟಿರುವ ಕೊಡವೇತರ ಮತವು ಅವಶ್ಯಕವಲ್ಲವೇ ಎಂದು ಸಮಾಜವು ಕಾಂಗ್ರೆಸ್ಸಿನ ಪ್ರಮುಖರನ್ನು ಕೇಳಬಯಸುತ್ತದೆ. ಈ ನಿರ್ಲಕ್ಷ್ಯ ಮುಂದುವರೆದಲ್ಲಿ ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲು ಜನಾಂಗವು ಸನ್ನದ್ಧವಾಗಿರುತ್ತದೆಂದು ಮೋಹನ್ ಕುಮಾರ್ ಎಚ್ಚರಿಸಿದ್ದಾರೆ.