*ಗೋಣಿಕೊಪ್ಪಲು, ಅ. 9: ಶ್ರೀ ಕಾವೇರಿ ದಸರಾ ಸಮಿತಿಯ 38 ನೇ ವರ್ಷದ ಜನೋತ್ಸವದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಗೆಲ್ಯಾಕ್ಷಿ ನೃತ್ಯ ತಂಡ ಮತ್ತು ಪುತ್ತೂರಿನ ನೃತ್ಯ ತಂಡದವರು ಸುಗಮ ಸಂಗೀತದ ಮೂಲಕ ಸಭಿಕರನ್ನು ರಂಜಿಸಿದರು.
ಕಾವೇರಿ ಕಲಾವೇದಿಕೆಯಲ್ಲಿ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಸಿನಿಮಾ ಕಲಾವಿದ ಗೋಲಕಾ ಅದ್ಭುತವಾಗಿ ನರ್ತಿಸಿ ಪೇಕ್ಷಕರ ಮನಸೂರೆಗೊಂಡರು. ಇದರ ಜತೆಗೆ ಚಲನ ಚಿತ್ರಗೀತೆ, ಭಾವಗೀತೆ ಹಾಗೂ ಜನಪದ ಗೀತೆಗಳು ಉತ್ತಮ ವಾಗಿದ್ದವು. ಸುಮಾರು 2.30 ಗಂಟೆಗಳ ಕಾಲ ನಡೆದ ಸುಗಮ ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ಸಭಾಂಗಣದ ತುಂಬ ನೆರೆದಿದ್ದ ಪ್ರೇಕ್ಷರನ್ನು ಹಿಡಿದಿಟ್ಟುಕೊಂಡಿತ್ತು.
ಇದಕ್ಕೂ ಮೊದಲು ಸ್ಥಳೀಯ ಕಲಾವಿದರಾದ ರೇಖಾ ಶ್ರೀಧರ್ ಮತ್ತು ತಂಡದವರು ಭಾವಗೀತೆ ಹಾಗೂ ಜಾನಪದ ಗೀತೆಗಳನ್ನು ಹಾಡಿದರು. ಇವರ ಜತೆಗೆ ಮುಲ್ಲೇಂಗಡ ರೇವತಿ ಪೂವಯ್ಯ ಕೊಡವ ಹಾಗೂ ಕನ್ನಡ ಗೀತೆಗಳನ್ನು ಹಾಡಿದರು.
ದಸರಾ ಸಮಿತಿ ಅಧ್ಯಕ್ಷೆ ಸೆಲ್ವಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭಾ ಕಾರ್ಯಕ್ರಮದಲ್ಲಿ ಪತ್ರಕರ್ತ ಶ್ರೀಧರ್ ನೆಲ್ಲಿತ್ತಾಯ, ಸಾಹಸಮಯ ಚಲನ ಚಿತ್ರ ನಿರ್ದೇಶಕ ಫಯಾಜ್ಖಾನ್, ತಾಲೂಕು ಚಿನ್ನ ಬೆಳ್ಳಿ ವರ್ತಕರ ಸಂಘದ ಅಧ್ಯಕ್ಷ ಗಜಾನನಶೇಟ್, ಬಿಜೆಪಿ ನಗರಾಧ್ಯಕ್ಷ ಗಾಂಧಿ ದೇವಯ್ಯ, ಗ್ರಾಮ ಪಂಚಾಯಿತಿ ಸದಸ್ಯ ಸುರೇಶ್ ರೈ, ದಸರಾ ಪೂಜಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ, ಸಲಹಾಸಮಿತಿ ಅಧ್ಯಕ್ಷ ಕಿಲನ್ ಗಣಪತಿ ಹಾಜರಿದ್ದರು.