ಗೋಣಿಕೊಪ್ಪಲು, ಡಿ.29: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ.12 ರಂದು ಒಟ್ಟು 12 ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಕಳೆದ ಹಲವು ವರ್ಷಗಳಿಂದ ಬಹುಮತದೊಂದಿಗೆ ಅಧಿಕಾರ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಈ ಬಾರಿ ಪ್ರಬಲ ಪೈಪೆÇೀಟಿ ನೀಡುವದಾಗಿ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಬಿ.ಟಿ.ಪ್ರದೀಪ್ ಆಶಾವಾದ ವ್ಯಕ್ತಪಡಿಸಿದ್ದಾರೆ.

ವೀರಾಜಪೇಟೆ ತಹಶೀಲ್ದಾರ್ ಕಚೇರಿಯಲ್ಲಿ ಇಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಒಟ್ಟು ಐವರು ಅಭ್ಯರ್ಥಿಗಳು ಚುನಾವಣಾಧಿ ಕಾರಿ ಎಂ.ಸಿ. ಮಹದೇವಸ್ವಾಮಿ ಅವರಿಗೆ ನಾಮಪತ್ರ ಸಲ್ಲಿಸುವ ಸಂದರ್ಭ ಉಪಸ್ಥಿತರಿದ್ದ ಪ್ರದೀಪ್ ಅವರು ಎಲ್ಲಾ 12 ಕ್ಷೇತ್ರಗಳಲ್ಲಿಯೂ ನೇರ ಸ್ಪರ್ಧೆ ಇದೆ ಎಂದು ಹೇಳಿದರು. ಕಳೆದ ಕೆಲವು ವರ್ಷಗಳಿಂದ ವೀರಾಜಪೇಟೆ ತಾಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಜನ ಒಲವು ವ್ಯಕ್ತಪಡಿಸುತ್ತಿದ್ದು, ಈ ಬಾರಿಯ ಎಪಿಎಂಸಿ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಗೆಲ್ಲುವ ಮೂಲಕ ಭಾರೀ ಜಿಗಿತ ಕಾಣಲಿದೆ ಎಂದು ನುಡಿದರು. ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ಗೋಣಿಕೊಪ್ಪಲು ಎಪಿಎಂಸಿ ಮತದಾರರ ಪಟ್ಟಿಯಲ್ಲಿ 30 ಸಾವಿರಕ್ಕೂ ಅಧಿಕ ಕೃಷಿಕ, ರೈತಾಪಿ ವರ್ಗದ ಮತದಾರರು ಇದ್ದು, ಉತ್ತಮ ಫಲಿತಾಂಶದ ನಿರೀಕ್ಷೆ ಇದೆ ಎಂದು ಅಭಿಪ್ರಾಯಪಟ್ಟರು.

ನಾಮಪತ್ರ ಸಲ್ಲಿಸಲು ಇಂದು ಅಂತಿಮ ದಿನವಾಗಿದ್ದು, ಒಟ್ಟು 6 ಮಂದಿ ಇಂದು ನಾಮಪತ್ರ ಸಲ್ಲಿಸುವ ಮೂಲಕ ಎಲ್ಲಾ 12 ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್-ಬಿಜೆಪಿ ಬೆಂಬಲಿತರ ನಡುವೆ ನೇರ ಪೈಪೆÇೀಟಿ ನಡೆಯುವ ಸಾಧ್ಯತೆ ಇದೆ. ಕಾನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ತಾಣಚ್ಚಿರ ಉಮೇಶ್ ಸ್ಪರ್ಧಿಸುತ್ತಿದ್ದು, ನಿರೀಕ್ಷೆಯಂತೆಯೇ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದಿಂದ ಯಾವದೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಪಕ್ಷೇತರ ಅಭ್ಯರ್ಥಿಗೆ ಬೆಂಬಲ ನೀಡುತ್ತಿರುವ ಹಿನ್ನೆಲೆ ಕುತೂಹಲ ಕೆರಳಿಸಿದೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕೊಟ್ಟಗೇರಿಯ ಮಾಚಂಗಡ ಸುಜ ಪೂಣಚ್ಚ ಸ್ಪರ್ಧೆಯಲ್ಲಿದ್ದಾರೆ.