ಗೋಣಿಕೊಪ್ಪಲು,ಡಿ.28: ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ.12 ರಂದು ಚುನಾವಣೆ ನಡೆಯಲಿದ್ದು ವೀರಾಜಪೇಟೆ ತಾಲೂಕಿನ 46 ಮತಗಟ್ಟೆಗಳಲ್ಲಿ ಅಗತ್ಯಬಿದ್ದಲ್ಲಿ ಮತದಾನ ನಡೆಯುವ ಸಾಧ್ಯತೆ ಇದೆ. ಈವರೆಗೆ 24,663 (ಗಂಡು) ಹಾಗೂ 5,688 (ಹೆಣ್ಣು) ಮತದಾರರು ಒಳಗೊಂಡಂತೆ ಒಟ್ಟು 30351 ಮತದಾರರಿದ್ದು ಆರ್‍ಟಿಸಿಯಲ್ಲಿ ಒಟ್ಟಾರೆ ಇಂದಿನವರೆಗೆ ಒಟ್ಟು 25 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಅರಮೇರಿ ಅನುಸೂಚಿತ ಜಾತಿ ಕ್ಷೇತ್ರಕ್ಕೆ ಕೆ.ಯು.ಭೀಮಣಿ ಏಕೈಕ ಅಭ್ಯರ್ಥಿಯಾಗಿ ಈವರೆಗೆ ನಾಮಪತ್ರ ಸಲ್ಲಿಸಿದ್ದರೆ, ಚೆಂಬೆಬೆಳ್ಳೂರು ಹಿಂದುಳಿದ ವರ್ಗ (ಅ) ಕ್ಷೇತ್ರಕ್ಕೆ ಏಕೈಕ ಅಭ್ಯರ್ಥಿಯಾಗಿ ಜೆ.ಕೆ.ಅಯ್ಯಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಬಿಟ್ಟಂಗಾಲ ಮಹಿಳಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮೇರ ಧರಣಿ ಮಾತ್ರಾ ಈವರೆಗೂ ನಾಮಪತ್ರ ಸಲ್ಲಿಸಿದ್ದಾರೆ. ಕಮಿಷನ್ ಏಜೆಂಟರುಗಳು ಮತ್ತು ವ್ಯಾಪಾರಿಗಳ ಕ್ಷೇತ್ರಕ್ಕೆ ಈವರೆಗೆ ಏಕೈಕ ಅಭ್ಯರ್ಥಿಯಾಗಿ ಹಾಲಿ ವರ್ತಕರ ಕ್ಷೇತ್ರದ ಸದಸ್ಯ ಜಿ.ಎಸ್.ಗಣಪತಿ (ಕಿಲನ್) ನಾಮಪತ್ರ ಸಲ್ಲಿಸಿದ್ದು,
(ಮೊದಲ ಪುಟದಿಂದ) ನಾಮಪತ್ರ ಸಲ್ಲಿಸಲು ಅಂತಿಮ ದಿನವಾದ ತಾ.29 ರಂದು ಯಾರೂ ನಾಮಪತ್ರ ಸಲ್ಲಿಕೆ ಮಾಡದಿದ್ದಲ್ಲಿ ಈ ನಾಲ್ಕು ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆಯುವ ಸಾಧ್ಯತೆ ಇದೆ.
ವೀರಾಜಪೇಟೆ ತಾಲೂಕು ಕಚೇರಿಯಲ್ಲಿ ಚುನಾವಣಾಧಿಕಾರಿ ಯಾಗಿ ತಹಶೀಲ್ಧಾರ್ ಎಂ.ಸಿ.ಮಹದೇವಸ್ವಾಮಿ, ಸಹಾಯಕ ಚುನಾವಣಾಧಿಕಾರಿಯಾಗಿ ಜಿ.ಶಶಿಧರ್, ಚುನಾವಣಾ ಸಿಬ್ಬಂದಿ ಯಾಗಿ ಎಂ.ಮೋಹನ್ ಕುಮಾರ್ ಹಾಗೂ ಮಂಜುನಾಥಸ್ವಾಮಿ ಅವರುಗಳು ಕಾರ್ಯನಿರ್ವಹಿಸುತ್ತಿದ್ದು ಇಂದು ಒಟ್ಟು 7 ನಾಮಪತ್ರಗಳು ಸಲ್ಲಿಕೆಯಾಗಿದೆ.ಅಮ್ಮತ್ತಿ, ಬಾಳೆಲೆ ಹಾಗೂ ಶ್ರೀಮಂಗಲದಲ್ಲಿ ಇಬ್ಬರಿಗಿಂತ ಅಧಿಕ ಅಭ್ಯರ್ಥಿಗಳು ಕಣದಲ್ಲಿದ್ದು ಕಾಂಗ್ರೆಸ್, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಗಳೊಂದಿಗೆ ಸೆಣಸಬೇಕಿದ್ದು ತುರುಸಿನ ಸ್ಪರ್ಧೆ ಕಂಡು ಬರಲಿದೆ. ಕಾನೂರು ಸಾಮಾನ್ಯ ಕ್ಷೇತ್ರದಿಂದ ಬೆಕ್ಕೆಸೊಡ್ಲೂರು ಗ್ರಾಮದ ತಾಣಚ್ಚಿರ ಉಮೇಶ್ ಇಂದು ಪಕ್ಷೇತರ ಅಭ್ಯರ್ಥಿಯಾಗಿ ತಮ್ಮ ನೂರಾರು ಬೆಂಬಲಿಗರೊಂದಿಗೆ ನಾಮಪತ್ರ ಸಲ್ಲಿಸಿದ್ದು, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ತನ್ನ ಬೆಂಬಲ ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇಲ್ಲಿ ಪಕ್ಷೇತರ ಅಭ್ಯರ್ಥಿಯ ವಿರುದ್ಧ ಬಿಜೆಪಿಯ ಬೆಂಬಲಿತ ಮಾಚಂಗಡ ಸುಜ ಪೂಣಚ ್ಚ(ಕೊಟ್ಟಗೇರಿ) ನಾಮಪತ್ರ ಸಲ್ಲಿಸಿದ್ದಾರೆ. ಅಮ್ಮತ್ತಿ ಹಿಂದುಳಿದ ವರ್ಗ
(ಬ) ದಿಂದ ಮೂಕೋಂಡ ಮಂದಪ್ಪ ಕಾರ್ಯಪ್ಪ, ಎಂ.ಡಿ.ಗಣಪತಿ, ಕೆ.ಎಂ.ಸುಬ್ರಮಣಿ, ಎನ್.ಕೆ.ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಪಾಲಿಬೆಟ್ಟ ಅನುಸೂಚಿತ ಪಂಗಡ ಕ್ಷೇತ್ರದಿಂದ ಹೆಚ್.ಎನ್.ಮೋಹನ್ ರಾಜ್, ಹೆಚ್.ಯು. ಮಣಿಕಂಠ ನಾಮಪತ್ರ ಸಲ್ಲಿಸಿದ್ದಾರೆ. ಪೆÇನ್ನಂಪೇಟೆ ಸಾಮಾನ್ಯ ಕ್ಷೇತ್ರದಿಂದ ಚಿಯಕ್‍ಪೂವಂಡ ಜಿ.ಸುಬ್ರಮಣಿ, ಎಂ.ಎ.ಬಿದ್ದಪ್ಪ ನಾಮಪತ್ರ ಸಲ್ಲಿಕೆಯಾಗಿದೆ.
ಬಾಳೆಲೆ ಸಾಮಾನ್ಯ ಕ್ಷೇತ್ರದಿಂದ ಅದೇಂಗಡ ವಿನು ಚಂಗಪ್ಪ ಮೇದಪ್ಪ (ಬಿಜೆಪಿ ಬೆಂಬಲಿತ) ಅದೇಂಗಡ ವಿನು ಉತ್ತಪ್ಪ( ಕಾಂಗ್ರೆಸ್ ಬೆಂಬಲಿತ) ಹಾಗೂ ಜೆಡಿಎಸ್‍ನ ಎಂ.ಜಿ.ವಿನೀಶ್ ನಾಮಪತ್ರ ಸಲ್ಲಿಸಿದ್ದಾರೆ. ಹುದಿಕೇರಿ ಸಾಮಾನ್ಯ ಕ್ಷೇತ್ರದಿಂದ ಅಜ್ಜಿಕುಟ್ಟಿರ ಎಂ. ಮುತ್ತಪ್ಪ, ಎಂ.ಎಂ.ನವೀನ್ ನಾಮಪತ್ರ ಸಲ್ಲಿಕೆಯಾಗಿದೆ. ಶ್ರೀಮಂಗಲ ಸಾಮಾನ್ಯದಿಂದ ಕೆ.ಪಿ.ಬಾಲಕೃಷ್ಣ, ಹೆಚ್.ಎಂ. ಉತ್ತಪ್ಪ, ಸಿ.ಡಿ.ಬೋಪಣ್ಣಲೋಕೇಶ್, ಎಂ.ಕೆ.ಮಾಚಯ್ಯ ನಾಮಪತ್ರ ಸಲ್ಲಿಕೆಯಾಗಿದ್ದು ತೀವ್ರ ಕುತೂಹಲ ಮೂಡಿಸಿದೆ. ಟಿ.ಶೆಟ್ಟಿಗೇರಿ ಮಹಿಳಾ ಕ್ಷೇತ್ರದಿಂದ ಬೊಳ್ಳಾಜಿರ ಸುಶೀಲ ಹಾಗೂ ಬಿ.ಜಿ.ಸುನೀತಾ ಸುಬ್ಬಮ್ಮ ನಾಮಪತ್ರ ಸಲ್ಲಿಕೆಯಾಗಿದೆ.
ಒಟ್ಟಿನಲ್ಲಿ ಈವರೆಗೆ ಒಟ್ಟು 25 ನಾಮಪತ್ರ ಸಲ್ಲಿಕೆಯಾಗಿದ್ದು ತಾ.29 ರಂದು (ಇಂದು) 3 ಗಂಟೆಗೆ ನಾಮಪತ್ರ ಪ್ರಕ್ರಿಯೆ ಅಂತಿಮಗೊಳ್ಳಲಿದೆ. ತಾ.30 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಜ.2 ಅಂತಿಮ ದಿನವಾಗಿದ್ದು, ಅಂದು ಅಪರಾಹ್ನ 3 ಗಂಟೆಯ ನಂತರ ಕಣದಲ್ಲಿ ಉಳಿದ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನೀಡಲಾಗುವದು ಎಂದು ತಹಶೀಲ್ಧಾರ್ ಮಹದೇವಸ್ವಾಮಿ ತಿಳಿಸಿದ್ದಾರೆ. ಚುನಾವಣೆ ಅಗತ್ಯವಿದ್ದಲ್ಲಿ ತಾ. 12 ರಂದು ನಡೆಯಲಿದೆ.ಮತ ಎಣಿಕೆ ವೀರಾಜಪೇಟೆ ತಾಲೂಕು ಕೇಂದ್ರದಲ್ಲಿ ತಾ.14 ರಂದು ನಡೆಯಲಿದ್ದು, ತಾ. 16 ರಂದು ಚುನಾವಣಾ ಪ್ರಕ್ರಿಯೆ ಅಂತ್ಯಗೊಳ್ಳಲಿದೆ.
ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಆಡಳಿತದಲ್ಲಿದ್ದು ನಾಲ್ಕು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಇನ್ನೂ ಇಳಿಸಿಲ್ಲ. ಅಲ್ಲದೆ ಸರ್ಕಾರದಿಂದ ಮೂರು ಮಂದಿ ನಾಮನಿರ್ದೇಶನ ಸದಸ್ಯರನ್ನು ನೇಮಕ ಮಾಡಲು ಅವಕಾಶವಿದೆ. ಗೋಣಿಕೊಪ್ಪಲು ಎಪಿಎಂಸಿ ಕಳೆದ ಹಲವು ವರ್ಷಗಳಿಂದಲೂ ಬಿಜೆಪಿ ಬೆಂಬಲಿತ ಸದಸ್ಯರ ಬಹುಮತದೊಂದಿಗೆ ಆಡಳಿತ ನಡೆಸುತ್ತಾ ಬಂದಿರುವದು ವಿಶೇಷ. ಇಂದು ಶ್ರೀಮಂಗಲ ಜಿಲ್ಲಾ ಪಂಚಾಯಿತಿ ಸದಸ್ಯ ಮುಕ್ಕಾಟಿರ ಶಿವು ಮಾದಪ್ಪ ಅವರು ಕಾಂಗ್ರೆಸ್ ಬೆಂಬಲಿತ ಶ್ರೀಮಂಗಲ ಅಭ್ಯರ್ಥಿ ಸಿ.ಡಿ.ಬೋಪಣ್ಣ ನಾಮಪತ್ರ ಸಲ್ಲಿಕೆ ಸಂದರ್ಭ ಇದ್ದರು.