ಗೋಣಿಕೊಪ್ಪಲು, ಆ. 12: ವರಮಹಾಲಕ್ಷ್ಮಿ ದಿನವಾದ ಇಂದು ಗೋಣಿಕೊಪ್ಪಲಿನ ವಿವಿಧೆಡೆ ವರಮಹಾಲಕ್ಷ್ಮಿ ಪೂಜೆಯನ್ನು ಅದ್ಧೂರಿಯಾಗಿ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ಲಕ್ಷ್ಮಿಯ ಅಲಂಕಾರ, ಹಾಲು-ನೈವೇದ್ಯ ದೊಂದಿಗೆ ಪೂಜೆ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಇಲ್ಲಿನ ಶ್ರೀ ಉಮಾ ಮಹೇಶ್ವರಿ ದೇವಾಲಯದಲ್ಲಿಯೂ ಲಕ್ಷ್ಮಿ ಪೂಜೆ ನಡೆಯಿತು.

ಮನೆ ಮನೆಗಳಲ್ಲಿ ಧನ-ಕನಕದೊಂದಿಗೆ ಲಕ್ಷ್ಮಿಗೆ ಅಲಂಕಾರ ಮಾಡುವದರೊಂದಿಗೆ ಹೆಣ್ಣುಮಕ್ಕಳಿಗೆ ಹಸಿರು ಹಾಗೂ ಕೆಂಪು ಬಳೆಗಳನ್ನು ತೊಡಿಸಲಾಯಿತು. ಮಧ್ಯಾಹ್ನ ಅಲ್ಲಲ್ಲಿ ಮನೆಗಳಲ್ಲಿ ಅತಿಥಿಗಳಿಗೆ ಪಾಯಸ, ತಿಂಡಿ, ಪುಳಿಯೊಗರೆ, ಒಬ್ಬಿಟ್ಟು ಇತ್ಯಾದಿ ತಿನಿಸುಗಳೊಂದಿಗೆ ಸಾಮೂಹಿಕ ಭೋಜನ ಕಾರ್ಯಕ್ರಮವೂ ನೆರವೇರಿತು.

ಪೆÇನ್ನಂಪೇಟೆ ಶ್ರೀ ರಾಮಕೃಷ್ಣ ಶಾರದಾಶ್ರಮದಲ್ಲಿಯೂ ಲಕ್ಷ್ಮಿಪೂಜೆ ಆಚರಣೆ ನೆರವೇರಿತು.

ಗೋಣಿಕೊಪ್ಪಲು ಅರುವತ್ತೊಕ್ಕಲು ಗ್ರಾಮದ ಶುಭಾ ವೆಂಕಟೇಶ್ ಅವರು ಕಳೆದ 13 ವರ್ಷಗಳಿಂದಲೂ ಅದ್ಧೂರಿಯಾಗಿ ಲಕ್ಷ್ಮಿಪೂಜೆ ಆಚರಿಸುತ್ತಾ ಬಂದಿದ್ದು, ಸುಮಾರು 50ಕ್ಕೂ ಅಧಿಕ ಮಹಿಳೆಯರು, ಯುವತಿಯರು ಸಂಭ್ರಮಾಚರಣೆಯಲ್ಲಿ ತೊಡಗಿಸಿ ಕೊಂಡಿದ್ದು ಕಂಡುಬಂತು. ಸಂಕಷ್ಟಗಳನ್ನು ಪರಿಹಾರ ಮಾಡಿ ಆರೋಗ್ಯ ಹಾಗೂ ಐಶ್ವರ್ಯವನ್ನು ಕರುಣಿಸುವಂತೆ ಈ ದಿನ ದೇವರಲ್ಲಿ ಪ್ರಾರ್ಥಿಸುವದು ವಾಡಿಕೆ. ಸಂಜೆಯೂ ಹಲವಷ್ಟು ಮನೆಗಳಲ್ಲಿ ಲಕ್ಷ್ಮಿಪೂಜೆಯನ್ನು ಸಂಭ್ರಮ ದೊಂದಿಗೆ ಆಚರಿಸಲಾಯಿತು.