ಗೋಣಿಕೊಪ್ಪಲು, ಡಿ.5: ಭಾರತೀಯ ತೋಟಗಾರಿಕಾ ಸಂಶೋಧನಾ ಕೇಂದ್ರ, ಕೃಷಿ ಇಲಾಖೆ ಮತ್ತು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಕೆವಿಕೆ ಆವರಣದಲ್ಲಿ ವಿಶ್ವ ಮಣ್ಣು ಆರೋಗ್ಯ ದಿನಾಚರಣೆ ಹಾಗೂ ಹಿಂಗಾರು ಕೃಷಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಯಿತು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ಜಿ.ಬೋಪಯ್ಯ ಅವರು ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಕೇಂದ್ರ ಸರ್ಕಾರದ ನಾನಾ ಯೋಜನೆ ಸದ್ಭಳಕೆ ಮೂಲಕ ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಉತ್ಪಾದನೆ ಹೆಚ್ಚಿಸುವಂತಾಗಬೇಕು. ಎಲ್ಲ ರೈತರು ಮಣ್ಣು ಪರೀಕ್ಷೆ ಕಾರ್ಡ್ ಹೊಂದಿರಬೇಕು. ಮಳೆಯಚಕ್ರ ವರ್ಷಂಪ್ರತಿ ಬದಲಾವu Éಯಾಗುತ್ತಿರುವ ಹಿನ್ನೆಲೆ ಪೂರಕ ಕೃಷಿ ಚಟುವಟಿಕೆ ಹಮ್ಮಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಮಧ್ಯವರ್ತಿಗಳಿಂದಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಳೆ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ರೈತರ ಸ್ವಾವಲಂಬನೆ, ಲಾಭಗಳಿಸಲು ಸೂಕ್ತ ಮಾರುಕಟ್ಟೆ ಮಾಹಿತಿಯನ್ನು ಕೃಷಿ ಇಲಾಖೆ ಹಾಗೂ ಕೃಷಿ ತಜ್ಞರು ರೈತರಿಗೆ ತಿಳಿಯಪಡಿಸಬೇಕು.
ಕಾಳಧನಿಕರನ್ನು ಮಟ್ಟ ಹಾಕಲು ಪ್ರಧಾನಿ ನರೇಂದ್ರಮೋದಿ ಕೈಗೊಂಡ ನಿರ್ಧಾರದಿಂದ ಬಡ ಮಧ್ಯಮ ವರ್ಗ, ರೈತರು ಹಾಗೂ ಚಿನ್ನ ಕೂಡಿಟ್ಟ ಮಹಿಳೆಯರಿಗೆ ತೊಂದರೆ ಇಲ್ಲ. ಈ ಬಗ್ಗೆ ಅಗತ್ಯ ಬಿದ್ದಾಗ ಆದಾಯ ತೆರಿಗೆ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ತಮ್ಮ ಕೂಡಿಟ್ಟ ಹಣದ ಬಗ್ಗೆ ಲೆಕ್ಕ ನೀಡಬಹುದು ಎಂದರಲ್ಲದೆ, ಮುಂದೆ ಆನ್ಲೈನ್ ವ್ಯವಹಾರ ಜಾರಿಯಾದಲ್ಲಿ ನೋಟಿನ ಬಿಕ್ಕಟ್ಟು ಪರಿಹಾರ ಕಾಣಲಿದೆ ಎಂದು ಹೇಳಿದರು.
ತಾಂತ್ರಿಕ ಅಧಿವೇಶನದಲ್ಲಿ ಮಾತನಾಡಿದ ನಬಾರ್ಡ್ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಎಂ.ಸಿ.ನಾಣಯ್ಯ ಅವರು, ನೋಟು ಅಪಮೌಲ್ಯದಿಂದ ಕೊಡಗು ಜಿಲ್ಲೆಯಲ್ಲಿ ಜನರಿಗೆ ಅಷ್ಟಾಗಿ ತೊಂದರೆಯಾಗಲಿಲ್ಲ. ಇಲ್ಲಿನ ಬ್ಯಾಂಕ್ ಸಿಬ್ಬಂದಿಗಳು, ಅಧಿಕಾರಿಗಳು ಪ್ರಾಮಾಣಿಕವಾಗಿ ಜನತೆಯ ನೆರವಿಗೆ ಬಂದಿದ್ದಾರೆ. ಡಿಸೆಂಬರ್ 31 ರವರೆಗೆ ರೂ.1000, ರೂ.500 ನೋಟು ಠೇವಣಿಗೆ ಅವಕಾಶವಿದ್ದು, ಜಿಲ್ಲಾ ಕೇಂದ್ರ ಬ್ಯಾಂಕ್ ಹಾಗೂ ಸಹಕಾರಿ ಸ್ವಾಮ್ಯದ ಬ್ಯಾಂಕ್ಗಳಿಗೂ ವಿನಿಮಯಕ್ಕಾಗಿ ದಿನನಿತ್ಯ ಸುಮಾರು ರೂ.3 ಕೋಟಿವರೆಗೂ ರೂ.2 ಸಾವಿರ, ರೂ. 100 ಹಾಗೂ ರೂ. 50 ರ ನೋಟುಗಳನ್ನು ಪೂರೈಸಲಾಗಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ ಸುಮಾರು 1.56 ಲಕ್ಷ ಮಂದಿ ಜನ್ಧನ್ ಯೋಜನೆಯಡಿ ಖಾತೆ ತೆಗೆದಿದ್ದು ದಿಢೀರನೆ ಕೋಟಿಗಟ್ಟಲೆ ಠೇವಣಿ ಜಮೆ ಆಗಿದೆ. ಆನ್ಲೈನ್ ಮೂಲಕ ಚೆಕ್ ವಹಿವಾಟು ಮಾಡಬಹುದು, ಅಸ್ಸಾಂ ಇನ್ನಿತರ ರಾಜ್ಯದ ಕಾರ್ಮಿಕರ ಪಡಿತರ, ಗುರುತಿನ ಚೀಟಿಯನ್ನು ಹೊಂದಿಕೊಂಡು ಇಲ್ಲಿಯೇ ಬ್ಯಾಂಕ್ ಖಾತೆ ತೆರೆದು ಕೂಲಿ ಹಣವನ್ನು ಜಮೆ ಮಾಡಬಹುದು. 2013 ರಿಂದ ಪ್ರತಿಯೋರ್ವ ಭಾರತೀಯನಿಗೂ ಬ್ಯಾಂಕ್ ಖಾತೆ ಕಡ್ದಾಯ ನಿಯಮ ಜಾರಿಯಾಗಿದ್ದು, ಕೊಡಗು ಶೇ.100 ಸಾಧನೆ ಮಾಡಿದೆ ಎಂದರು. ಜಿಲ್ಲೆಯ ಹಲವು ಸಹಕಾರಿ ಬ್ಯಾಂಕ್ಗಳಿಗೆ ನೋಟು ವಿನಿಮಯಕ್ಕೆ ದಿನಂಪ್ರತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ 2-3 ಕೋಟಿ ಮೊತ್ತದ ನೂತನ ನೋಟುಗಳು ಸಿಗುತ್ತಿದ್ದರೂ ಹಲವು ಕೃಷಿಕರಿಂದ ನೋಟು ಕೃತಕ ಅಭಾವ ಸೃಷ್ಟಿ ಬಗ್ಗೆ ತಮಗೆ ದೂರು ಬಂದಿದ್ದು ಪರಿಶೀಲನೆ ನಡೆಸುವದಾಗಿ ಹೇಳಿದರು. ಪಿಗ್ಮಿ ಸಂಗ್ರಹಕಾರರೂ ಅಪಮೌಲ್ಯಗೊಂಡ ನೋಟು ಸ್ವೀಕರಿಸದಿರುವ ಬಗ್ಗೆಯೂ ನಾಣಯ್ಯ ಅವರಲ್ಲಿ ಕೃಷಿಕರು ದೂರಿದರು.
ಚೀನಾದೇಶದಲ್ಲಿ ಬೃಹತ್ ಕಾಫಿ ಉತ್ಪಾದನೆ- ಡಾ.ಕುಶಾಲಪ್ಪ
ಪೆÇನ್ನಂಪೇಟೆ ಅರಣ್ಯ ಕಾಲೇಜಿನ ಡೀನ್ ಡಾ.ಸಿ.ಜಿ.ಕುಶಾಲಪ್ಪ ಅವರು ಸುಸ್ಥಿರ ಕೃಷಿ ಪದ್ಧತಿ ಹಾಗೂ ಕಾಫಿ ಉತ್ಪಾದನೆ ಬಗ್ಗೆ ವಿವರಣೆ ನೀಡಿದರು. ಕೊಡಗು ಜಿಲ್ಲೆಯಲ್ಲಿ ಮಣ್ಣನ್ನು ಭೂಮಿತಾಯಿ ಎಂದು ಕರೆಯುತ್ತಾರೆ. ಹಿರಿಯರು ಮಣ್ಣಿನ ಬಗ್ಗೆ ತೋರುತ್ತಿದ್ದ ಪಾವಿತ್ರ್ಯತೆಯನ್ನು ಇದೀಗ ವಿಜ್ಞಾನಿಗಳು ಮತ್ತೆ ರೈತರಿಗೆ ಮನನ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಚೀನಾ ದೇಶವು ಕಳೆದ 15 ವರ್ಷಗಳಿಂದ ಅರೇಬಿಕಾ, ರೋಬಸ್ಟಾ ಕಾಫಿಯನ್ನು ಬೆಳೆಯುತ್ತಿದ್ದು ಉತ್ಪಾದನೆ ವರ್ಷಂಪ್ರತಿ ಏರುಮುಖದಲ್ಲಿದೆ. ಸುಮಾರು 1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 1.41 ಲಕ್ಷ ಟನ್ ಕಾಫಿ ಉತ್ಪಾದನೆಯಾಗುತ್ತಿದ್ದು, ಕೇವಲ ಕಾಫಿಗಾಗಿ ಮಾತ್ರ ಬೀಜವನ್ನು ಬಳಸದೆ ಬೇರೆ ಬೇರೆ 58 ಬಗೆಯ ಚಾಕೋಲೇಟ್, ಚಿಕ್ಲೇಟ್ ಇತ್ಯಾದಿ ಉಪ ತಯಾರಿಕೆಯನ್ನು ಮಾಡುತ್ತಿದ್ದಾರೆ. ಆದರೆ, ಚೀನಾದಲ್ಲಿ ಮರದ ನೆರಳಿನಲ್ಲಿ ಕಾಫಿ ಬೆಳೆಯುತ್ತಿಲ್ಲ. ಅಲ್ಲಿ 8-9 ತಿಂಗಳು ಮಳೆ ಬೀಳುವ ಪ್ರದೇಶದಲ್ಲಿ, ಗೊಬ್ಬರವನ್ನು ಅಧಿಕವಾಗಿ ಬಳಸಿ ಇಳುವರಿ ತೆಗೆಯುತ್ತಿದ್ದಾರೆ. ಅಲ್ಲಿಯೂ ಬಿಳಿ ಕಾಂಡಕೊರಕ, ಬೆರ್ರಿಬೋರರ್ ಕೀಟ ಬಾಧೆ ಕಾಣಿಸಿಕೊಂಡಿದೆ. ಆದರೆ, ಭಾರತದಲ್ಲಿ ನೆರಳು ಮರಗಳ ಪಾರಂಪರಿಕ ಪದ್ಧತಿಯಿಂದ ಸುಸ್ಥಿರ ಕಾಫಿ ಉತ್ಪಾದನೆ ಮಾಡಲಾಗುತ್ತಿದ್ದು ಗುಣಮಟ್ಟದ ಕಾಫಿ ಬೆಳೆಯಲಾಗುತ್ತಿದೆ. ಕೊಡಗಿನ ಕಾಫಿ ತೋಟದಲ್ಲಿ ವಿವಿಧ ಪ್ರಭೇದದ ಮರ ಗಿಡಗಳಿರುವ ಹಿನ್ನಲೆ ಅತ್ಯಧಿಕ ಗೊಬ್ಬರ ಅಗತ್ಯವಿಲ್ಲ. ಅರಣ್ಯ ಇಲಾಖೆ ಮೂಲಕ ಕಾಫಿ ಕೃಷಿಗೆ ಅನುಕೂಲವಾದ ವಿವಿಧ ಪ್ರಭೇದದ ಸಸಿಗಳನ್ನು ಸಬ್ಸಿಡಿ ರೂಪದಲ್ಲಿ ಹೊಂಡಿಕೊಳ್ಳಬಹುದು. ಮಹಾಗನಿ, ಬಳಂಜಿ ಮುಂತಾದ ಮರಗಳಿಂದ ಕಾಫಿ ತೋಟಕ್ಕೆ ಹೆಚ್ಚು ಸಾವಯವ ಗೊಬ್ಬರ ಹಾಗೂ ತೇವಾಂಶ ಸಿಗುತ್ತದೆ ಎಂದು ಹೇಳಿದರು.
ಪಂಜಾಬ್ ಮತ್ತು ಹರಿಯಾಣ ರಾಜ್ಯಗಳಲ್ಲಿ ಅಸಂಪ್ರದಾಯಿಕವಾಗಿ ಅತಿಯಾದ ಗೊಬ್ಬರ ಬಳಕೆ ಮೂಲಕ ಮಣ್ಣು ವಿಷಕಾರಿಯಾಗಿದೆ. ಇದರಿಂದಾಗಿ ಫಸಲು ನಷ್ಟ ಉಂಟಾಗಿ ರೈತರ ಆತ್ಮಹತ್ಯೆ ಹೆಚ್ಚಳವಾಗಿದೆ. ಜಿಲ್ಲೆಯ ಪ್ರತಿಯೋರ್ವ ರೈತ ಕನಿಷ್ಟ 10 ಎಕರೆಗೆ 2 ಜಾನುವಾರು ಸಾಕುವಂತಾಗಬೇಕು. ಜಾನುವಾರು ಗಂಜಳ( ಗೋ ಮೂತ್ರ) ಹಾಗೂ ಸಗಣಿ ಉತ್ತಮ ಸಾವಯವ ಗೊಬ್ಬರವಾಗಿದೆ ಎಂದು ಅಭಿಪ್ರಾಯಪಟ್ಟರು. ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಎಕರೆಗೆ 118 ರಿಂದ 200 ಮರಗಳನ್ನು ಬೆಳೆಯಲಾಗಿದೆ. ಸುಮಾರು 185 ವಿವಿಧ ಜಾತಿಯ ಮರಗಳು ಕಂಡು ಬಂದಿದೆ ಎಂದು ನುಡಿದರು. ಸುಸ್ಥಿರ ಕೃಷಿಯಿಂದಾಗಿ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಕಾಫಿ ಉತ್ಪಾದನೆ ಯಾಗುತ್ತಿದೆ ಎಂದು ಡಾ.ಕುಶಾಲಪ್ಪ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಗತಿ ಪರ ಕೃಷಿಕ ಸೋಮೆಯಂಡ ತಿಮ್ಮಯ್ಯ ಅವರನ್ನು ಸನ್ಮಾನಿಸಲಾಯಿತು. ದಿನದ ಮಹತ್ವದ ಬಗ್ಗೆ ಸಸ್ಯ ತಜ್ಞ ವೀರೇಂದ್ರಕುಮಾರ್ ಮಾಹಿತಿ ನೀಡಿದರು. ಕಾಫಿ ತೋಟದಲ್ಲಿ ಮಣ್ಣು ನಿರ್ವಹಣೆ ಬಗ್ಗೆ ಚೆಟ್ಟಳ್ಳಿಯ ವಿಜ್ಞಾನಿ ಡಾ.ಚಂದ್ರಪ್ಪ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಉಪಸ್ಥಿತರಿದ್ದರು.
ಕೆವಿಕೆ ಮುಖ್ಯಸ್ಥ ಡಾ. ಸಾಜು ಜಾರ್ಜ್ ಸ್ವಾಗತ, ಡಾ.ಪ್ರಭಾಕರ್ ನಿರೂಪಣೆ, ತೋಟಗಾರಿಕಾ ಬೆಳೆಗಳ ವಿಷಯ ತಜ್ಞ ಕೆ.ಎ.ದೇವಯ್ಯ ವಂದನಾರ್ಪಣೆ ಮಾಡಿದರು. ಇದೇ ಸಂದರ್ಭ ಜಾನುವಾರಿಗೆ ಲಸಿಕೆ ಹಾಕುವ ಮಹತ್ವ ಹಾಗೂ ಕಾಳು ಮೆಣಸು ಬಳ್ಳಿ ನಿರ್ವಹಣೆ ಕುರಿತಾದ ಮಾಹಿತಿ ಪತ್ರವನ್ನು ಬಿಡುಗಡೆ ಮಾಡಲಾಯಿತು.
ವರದಿ: ಟಿ.ಎಲ್.ಶ್ರೀನಿವಾಸ್