ವರದಿ : ಟಿ.ಎಲ್.ಶ್ರೀನಿವಾಸ್
ಗೋಣಿಕೊಪ್ಪಲು, ಜ.5: ಒಂದಕ್ಕಿಂತ ಒಂದು ಚೆನ್ನ. ಪುಟ್ಟ ಬೆಕ್ಕಿನ ಮರಿಗಳಂತಹ ಶ್ವಾನಗಳು, ಹೆದರಿಕೆ ಹುಟ್ಟಿಸುವಂತಹ ದೊಡ್ಡ ಬಾಯಿಯ ನೆಪೆÇೀಲಿಯನ್ ಮ್ಯಾಸ್ಟಿಫ್ ತಳಿಯ ಶ್ವಾನ, ಗ್ರೇಟ್‍ಡೇನ್, ರಾಟ್ ವೀಲರ್, ಮುಧೋಳ ಡಾಬರ್‍ಮನ್‍ನಂತಹ ಎತ್ತರ ತಳಿಯ ಶ್ವಾನಗಳು, ಮಿನಿಯೇಚರ್ ಪಿಂಚರ್ ತಳಿಯ ಜಿಂಕೆ ಮರಿಯಂತಹ ಪುಟಾಣಿ ಶ್ವಾನ, ಹಚ್ ಖ್ಯಾತಿಯ ಮುದ್ದಾದ ಪಗ್ ತಳಿ, ಪಮೋರೇನಿಯನ್, ಜರ್ಮನ್ ಶೆಫರ್ಡ್, ಗೋಲ್ಡನ್ ರಿಟ್ರೀವರ್, ಡಾಶ್‍ಹೌಂಡ್, ಕಾಕರ್ ಸ್ಪೇನಿಯಲ್ ಒಂದೇ ಎರಡೇ! ಸುಮಾರು 26 ತಳಿಯ 127 ಶ್ವಾನಗಳ ಪ್ರದರ್ಶನ ಇಂದು ನೋಡುಗರ ಮನಸೂರೆಗೊಂಡಿತು.
ಗೋಣಿಕೊಪ್ಪಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಇಂದು ಪಾಲಿಬೆಟ್ಟದ ಕೊಡಗು ಕೆನ್ನಲ್ ಕ್ಲಬ್, ಕರ್ನಾಟಕ ಪಶುವೈದ್ಯರ ಸಂಘದ ಜಿಲ್ಲಾ ಘಟಕ ಹಾಗೂ ಗೋಣಿಕೊಪ್ಪಲು ಕೆವಿಕೆ ಸಂಯುಕ್ತ ಆಶ್ರಯದಲ್ಲಿ 13ನೇ ವರ್ಷದ ರಾಜ್ಯಮಟ್ಟದ ಶ್ವಾನ ಪ್ರದರ್ಶನದಲ್ಲಿ ವಿಭಿನ್ನ ತಳಿಯ, ಚಿತ್ರ ವಿಚಿತ್ರವಾಗಿ ಬೊಗಳುವ, ಅರಚುವ, ಮೈಯೆಲ್ಲಾ ಬಂಗಾರದಂತೆ ಹೊಳೆಯುವ ಶ್ವಾನಗಳ ಪ್ರದರ್ಶನ ನಿರೀಕ್ಷೆಗೂ ಮೀರಿ ಸಾರ್ವಜನಿಕರ ಕಣ್ಮನ ಸೆಳೆಯಿತು.
ಒಟ್ಟು 26 ತಳಿಯ ಶ್ವಾನಗಳ ಗುಂಪುಗಳ ನಡುವೆ ಪ್ರತ್ಯೇಕ ಸ್ಪರ್ಧೆಯನ್ನು ‘ಜಡ್ಜಿಂಗ್ ರಿಂಗ್’ಆವರಣದಲ್ಲಿ ಏರ್ಪಡಿಸ ಲಾಗಿತ್ತು. ಇಂಗ್ಲೀಷ್ ಮ್ಯಾಸ್ಟಿಫ್, ಲ್ಯಾಬ್ರಡಾರ್ (ಲ್ಯಾಬ್), ಶಿಟ್ಜು, ಪಿಟ್‍ಬುಲ್, ಶಿಝು, ಪೀಗಲ್, ಬಾಸೆಟ್ ಹೌಂಡ್, ಬಾಕ್ಸರ್, ಸೈಬೀರಿಯನ್ ಹಸ್ಕಿ, ಅಮೇರಿಕನ್ ಬುಲ್ಲಿ, ಸೈಂಟ್ ಬರ್ನಾಡ್ ಹೀಗೇ... ಚಿತ್ರ ವಿಚಿತ್ರ ಹೆಸರಿನ ತಳಿಯ ಶ್ವಾನಗಳು ತಮ್ಮ ಮಾಲೀಕರ ಆದೇಶವನ್ನು ಪಾಲಿಸುತ್ತಾ ಶಿಸ್ತಿನ ಶಿಪಾಯಿಯಂತೆ ಪ್ರದರ್ಶನ ನೀಡಿದವು. ಜಡ್ಜಿಂಗ್‍ರಿಂಗ್ ಸುತ್ತಲೂ ನೆರೆದಿದ್ದ ಶ್ವಾನ ಪ್ರಿಯರು ತಾವೆಂದೂ ಕಾಣದಿರುವ ವಿನೂತನ ತಳಿಯ ಶ್ವಾನವನ್ನೂ ಆಶ್ಚರ್ಯಚಕಿತ ಕಣ್ಣುಗಳಿಂದ ತುಂಬಿಕೊಂಡರು.
ಮೈಸೂರು ಡಾಬರ್‍ಮನ್ ಪ್ರಥಮ
ಮೈಸೂರಿನ ಮನೋಹರ್ ಅವರ ಡಾಬರ್‍ಮನ್ ಶ್ವಾನ ಅಂತಿಮ ಸುತ್ತಿನಲ್ಲಿ ಈ ಬಾರಿಯ ಶ್ವಾನ ಪ್ರದರ್ಶನದ ಚಾಂಪಿಯನ್ ಆಗಿ ಹೊರಹೊಮ್ಮಿತು. ಮಡಿಕೇರಿ ಎಂ.ವಿ.ಪ್ರವೀಣ್ ಅವರ ರಾಟ್‍ವೀಲರ್ ದ್ವಿತೀಯ ಸ್ಥಾನ ಗೆದ್ದುಕೊಂಡಿತು. ಮೈಸೂರಿನ ರಾಖೇಶ್‍ರಾಜ್ ಅವರ ಸೈಬೀರಿಯನ್ ಹಸ್ಕಿ ತೃತೀಯ, ವೀರಾಜಪೇಟೆಯ ಕಾವ್ಯರಚನ್ ಅವರ ನೆಪೆÇೀಲಿಯನ್ ಮ್ಯಾಸ್ಟಿಫ್ ಚತುರ್ಥ ಹಾಗೂ ಗೋಣಿಕೊಪ್ಪಲಿನ ಮಮತಾ ಪೂವಣ್ಣ 5ನೇ ಸ್ಥಾನ ಗೆದ್ದು ಕೊಂಡರು. ಕೋತೂರುವಿನ ಮಧು ಪೂವಣ್ಣ ಅವರ ಮುಧೋಳ ತಳಿ ಹಾಗೂ ಸ್ಮರಣ್ ಸುಬ್ಬಯ್ಯ ಅವರ ಇಂಗ್ಲೀಷ್ ಮ್ಯಾಸ್ಟಿಫ್ ಶ್ವಾನಗಳಿಗೆ ಪೆÇ್ರೀತ್ಸಾಹಕರ ಬಹುಮಾನ ವಿತರಿಸಲಾಯಿತು.
ಶ್ವಾನ ಉಪಯೋಗಿ ಸ್ನೇಹಿತ
ಬೆಳಿಗ್ಗೆ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥ ಸಾಜು ಜಾರ್ಜ್ ರಾಜ್ಯ ಮಟ್ಟದ ಶ್ವಾನ ಪ್ರದರ್ಶನವನ್ನು ಉದ್ಘಾಟಿಸಿದರು. ಕೊಡಗು ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಇಲ್ಲಿನ ರೈತರು ಶ್ವಾನವನ್ನು ತಮ್ಮ ಉಪಯೋಗಿ ಸ್ನೇಹಿತನೆಂದೇ ಭಾವಿಸಿದ್ದಾರೆ. ರೈತರ ಮಡಿಗಳಿಗೆ, ತೋಟಗಳಿಗೆ ಯಾವದೇ ಪ್ರಾಣಿ ಅಥವಾ ಕಳ್ಳರು ಪ್ರವೇಶಿಸಿದರೆ ನಮ್ಮ ಸಾಕು ನಾಯಿಗಳು ಯಜಮಾನನ್ನು ಮೊದಲು ಎಚ್ಚರಿಸುತ್ತವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಕೃಷಿಕರ ಆರ್ಥಿಕ ಮಟ್ಟವನ್ನು ಇನ್ನೆರೆಡು ವರ್ಷದಲ್ಲಿ ದ್ವಿಗುಣಗೊಳಿಸಬೇಕು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದ್ದು, ಡಾಗ್ ಶೋ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಶ್ವಾನ ಮಾರಾಟಕ್ಕೆ ಉತ್ತಮ ಮಾರುಕಟ್ಟೆಯನ್ನೂ ಅಭಿವೃದ್ಧಿ ಪಡಿಸಿಕೊಳ್ಳಬಹುದು ಎಂದು ಹೇಳಿದರು.
ಕೊಡಗು ಕೆನ್ನಲ್ ಕ್ಲಬ್‍ನ ಅಧ್ಯಕ್ಷ ಕೆ.ಎಂ.ಅಪ್ಪಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಮಾರಂಭದಲ್ಲಿ ಕೊಡಗು ಪಶು ಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಉಪನಿರ್ದೇಶಕ ಡಾ.ಸಿ.ನಾಗರಾಜು, ಮೈಸೂರಿನ ತೀರ್ಪುಗಾರ ಡಾ.ಷಡಕ್ಷರ ಮೂರ್ತಿ ಶ್ವಾನ ಪರದರ್ಶನ ಯಶಸ್ಸಿಗೆ ಶುಭ ಕೋರಿದರು.
ವೇದಿಕೆಯಲ್ಲಿ ಜಡ್ಜಿಂಗ್ ರಿಂಗ್ ಉದ್ಘಾಟನೆ ನೆರವೇರಿಸಿದ ಕುಪ್ಪಂಡ ಅಶೋಕ್ ಅಪ್ಪಣ್ಣ, ತೀರ್ಪುಗಾರರಾದ ಡಾ.ಜಯರಾಮಯ್ಯ, ಕೆನಲ್ ಕ್ಲಬ್ ಉಪಾಧ್ಯಕ್ಷ ರಮೇಶ್ ಉಪಸ್ಥಿತರಿದ್ದರು. ಸ್ವಾಗತ ಡಾ.ಗಿರೀಶ್ ಹಾಗೂ ವಂದನಾರ್ಪಣೆಯನ್ನು ಕೆನಲ್ ಕ್ಲಬ್ ಕಾರ್ಯದರ್ಶಿ ಡಾ.ಶಾಂತೇಶ್ ನಿರ್ವಹಿಸಿದರು.
ಈ ಸಂದರ್ಭ ಮಾಜಿ ಕೆನಲ್ ಕ್ಲಬ್ ಅಧ್ಯಕ್ಷರಾದ ಡಾ.ಎ.ಸಿ.ಗಣಪತಿ, ಡಾ.ಸುಬ್ರಮಣಿ ಮತ್ತು ಡಾ. ಚಿಣ್ಣಪ್ಪ, ಭಾರತದ ಹಾಕಿ ಪಟು ಎಸ್.ಕೆ. ಉತ್ತಪ್ಪ ಪೆÇೀಷಕರು, ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್‍ಪೂವಯ್ಯ, ರಾಷ್ಟ್ರೀಯ ರ್ಯಾಲಿ ಪಟು, ಅಂತರ್ರಾಷ್ಟ್ರೀಯ ರ್ಯಾಲಿ ಚಾಂಪಿಯನ್‍ಶಿಪ್‍ನ ಉದಯೋನ್ಮುಖ ಚಾಲಕ ಕೊಂಗೇಟಿರ ಬೋಪಣ್ಣ ಮುಂತಾದವರು ಡಾಗ್ ಶೋ ವೀಕ್ಷಣೆ ಮಾಡಿದರು.
ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆ, ಕಾಲ್ಸ್, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳು ಸರತಿ ಸಾಲಿನಲ್ಲಿ ನಿಂತು ವಿವಿಧ ತಳಿಯ ಶ್ವಾನವನ್ನು ವೀಕ್ಷಣೆ ಮಾಡಿ ಖುಷಿ ಪಟ್ಟರು. ಬೆಂಗಳೂರಿನ ಕರುಣಾ ಪ್ರಾಣಿ ದಯಾ ಸಂಘದ ವತಿಯಿಂದ ಶ್ವಾನಗಳಿಗೆ ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಯನ್ನು ನೀಡಿದರು.
ರಾಯಲ್ ಕ್ಯಾನಿನ್ ಇಂಡಿಯಾ ಪ್ರೈವೇಟ್ ಲಿ. ವಿಜೇತ ತಂಡಗಳಿಗೆ ಪಾರಿತೋಷಕವನ್ನು ಪ್ರಾಯೋಜಿಸಿದ್ದರೆ, ಜಡ್ಜಿಂಗ್ ರಿಂಗ್ ಅನ್ನು ಥೈಲಾಂಡ್‍ನ ಪರ್‍ಫೆಕ್ಟ್ ಕಂಪಾನಿಯನ್ ಕಂಪನಿ ಪ್ರಾಯೋಜನೆ, ವಿಜೇತರಿಗೆ ನಗದು ಬಹುಮಾನವನ್ನು ಮಡಿಕೇರಿಯ ಪೆಟ್ ಚಾಯ್ಸ್ ಅವರು ನೀಡಿದರು. ನಾಪೆÇೀಕ್ಲುವಿನ ಪವನ ಅವರು ಡಾಗ್ ಶೋ ಯಶಸ್ಸಿನಲ್ಲಿ ಕೈಜೋಡಿಸಿದ್ದರು. ಶ್ವಾನಗಳ ಆಹಾರ, ಔಷಧಿ ಹಾಗೂ ವಿವಿಧ ಮಳಿಗೆಗಳೂ ಭರ್ಜರಿ ವ್ಯಾಪಾರ ನಡೆಸಿದವು. 13ನೇ ವರ್ಷದ ಡಾಗ್ ಶೋ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ಈವರೆಗೆ 2 ವರ್ಷಕ್ಕೊಮ್ಮೆ ಆಯೋಜನೆಗೊಳ್ಳುತ್ತಿದ್ದ ಪ್ರದರ್ಶನವನ್ನು ಇನ್ನು ಮುಂದೆ ವರ್ಷಂಪ್ರತಿ ನಡೆಸುವ ಉದ್ದೇಶ ಇರುವದಾಗಿ ಅಧ್ಯಕ್ಷ ಕೆ.ಎಂ.ಅಪ್ಪಯ್ಯ ತಿಳಿಸಿದ್ದಾರೆ.