*ಗೋಣಿಕೊಪ್ಪಲು, ಮೇ 25: ಕಳೆದ 15ದಿನಗಳಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೊಳೆಯುತ್ತಿದ್ದ ಕಸದ ರಾಶಿಯನ್ನು ಶನಿವಾರ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ.ಬೋಪಣ್ಣ ಅವರ ನೇತೃತ್ವದಲ್ಲಿ ತೆಗೆದು ಸ್ವಚ್ಛಗೊಳಿಸಲಾಯಿತು.

ಕಸ ಹಾಕಲು ಜಾಗವಿಲ್ಲದೆ ಗ್ರಾಮ ಪಂಚಾಯಿತಿ ಕಸದ ರಾಶಿಯನ್ನು ಪಟ್ಟಣದ ಮುಖ್ಯ ರಸ್ತೆಯಲ್ಲಿ ತುಂಬಿಸಿ ಕೊಳೆಯಲು ಬಿಟ್ಟಿತ್ತು.ಇದರಿಂದ ಇಡೀ ಪಟ್ಟಣ ದುರ್ವಾಸನೆ ಬೀರುತ್ತಾ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಿಸುತ್ತಿತ್ತು. ಇದರ ಬಗ್ಗೆ ಕಳೆದ ಮೇ.17ರಂದು ಪತ್ರಿಕೆ ಸುದೀರ್ಘ ವರದಿ ಮಾಡಿತ್ತು. ಇದಕ್ಕೆ ಸ್ಪಂದಿಸಿದ ಬೋಪಣ್ಣ ತಾಲೂಕು ಪಂಚಾಯಿತಿ ಸದಸ್ಯ ಜಯ, ಇಒ ಕಿರಣ್ ಪಡ್ನೇಕರ್ ಹಾಗೂ ಗ್ರಾಮ ಪಂಚಾಯಿತಿ ಬಿಜೆಪಿ ಬೆಂಬಲಿತ ಸದಸ್ಯರ ಜೊತೆ ಸೇರಿ ಕಸದ ರಾಶಿಯನ್ನು ತೆರವುಗೊಳಿಸಿ ದರು. ತೆರವು ಗೊಳಿಸಿದ ಕಸವನ್ನು ತಮ್ಮ ಕಾಫಿ ತೋಟದ ಜಾಗದಲ್ಲಿಯೇ ತುಂಬಿಸಿದರು. ಹಿಂದೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದಾಗಲು ಜಾಗದ ಸಮಸ್ಯೆಯಿಂದ ಕಸವನ್ನು ತಮ್ಮ ಜಾಗದಲ್ಲಿ ತುಂಬಿಸು ತ್ತಿದ್ದರು.ಆದರೆ ಜಾಗ ಭರ್ತಿಯಾದು ದರಿಂದ ಕಸ ಹಾಕಲು ಸಮಸ್ಯೆ ಎದುರಾಗಿತ್ತು. ಈಗ ಮತ್ತೆ ಬೋಪಣ್ಣ ಜಾಗ ನೀಡಿ ತಾತ್ಕಾಲಿಕವಾಗಿ ಸಮಸ್ಯೆಯನ್ನು ಪರಿಹರಿಸಿದ್ದಾರೆ. ಪಟ್ಟಣದ ಸ್ವಚ್ಛತೆಗೆ ಕಾರಣರಾಗಿದ್ದಾರೆ.

ಈ ಬಗ್ಗೆ ಶಕ್ತಿಯೊಂದಿಗೆ ಮಾತನಾಡಿ ಬೋಪಣ್ಣ ಪಟ್ಟಣದ ಮದ್ಯದಂಗಡಿ, ಹೊಟೇಲ್ ಹಾಗೂ ಬೇಕರಿಯವರು ಕಸವನ್ನು ತಂದು ಮುಖ್ಯ ರಸ್ತೆಯಲ್ಲಿ ತುಂಬಿಸುತ್ತಿದ್ದಾರೆ. ಇದರಿಂದ ಕಸದ ಸಮಸ್ಯೆ ಹೆಚ್ಚುತ್ತಿದೆ. ಮುಂದೆ ಇದಕ್ಕೊಂದು ಶಾಶ್ವತ ಪರಿಹಾರ ಸಿಗುವವರೆಗೆ ಕಸವನ್ನು ಮುಖ್ಯ ರಸ್ತೆಯಲ್ಲಿ ಹಾಕಬಾರದು. ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಇದನ್ನು ಮೀರಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವದು ಎಂದು ಎಚ್ಚರಿಸಿದರು.ತಾಲೂಕು ಪಂಚಾಯಿತಿ ಇಒ ಕಿರಣ್ ಪಡ್ನೇಕರ್ ಮಾತನಾಡಿ ಪೊನ್ನಂಪೇಟೆ, ಅರುವತ್ತೊಕ್ಕಲು ಹಾಗೂ ಗೋಣಿಕೊಪ್ಪಲಿನ ಕಸ ಹಾಕಲು ಹಳ್ಳಿಗಟ್ಟು ಬಳಿ ಜಾಗ ಗುರುತಿಸಲಾಗಿದೆ. ಈ ಜಾಗದಲ್ಲಿ ಹೊಂಡ, ಕಾಪೌಂಡ್ ನಿರ್ಮಿಸಲು ಪೊನ್ನಂಪೇಟೆ ಮತ್ತು ಅರುವತ್ತೊಕ್ಕಲು ಗ್ರಾಮ ಪಂಚಾಯಿತಿಗಳು ಹಣ ನೀಡಿವೆ. ಆದರೆ ಗೋಣಿಕೊಪ್ಪಲು ಗ್ರಾಮ ಪಂಚಾಯಿತಿ ಈಗಾಲೆ ರೂ.20 ಲಕ್ಷ ಹಣ ನೀಡಲಾಗಿದೆ. ಉಳಿದ ರೂ 20ಲಕ್ಷ ಹಣ ನೀಡಬೇಕಾಗಿದೆ. ಆದರೆ ಪ್ರಸ್ತಾವನೆ ಸಲ್ಲಿಸುವುದು ತಡವಾದ ಕಾರಣ ಹಣ ಸರ್ಕಾರಕ್ಕೆ ಹಿಂದಿರುಗಿ ಹೋಗಿದೆ. ಇದರಿಂದ ಕಸ ವಿಲೇವಾರಿ ಸಮಸ್ಯೆ ಎದುರಾಗಿದೆ. ಈಗ ಮತ್ತೆ ಹೊಸ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಉಳಿದ ಹಣ ಬಂದ ಬಳಿಕ ಸಮಸ್ಯೆ ನೀಗಲಿದೆ ಎಂದು ಹೇಳಿದರು. ಕೊನೆಗೂ 15 ದಿನಗಳಿಂದ ಕೊಳೆಯುತ್ತಿದ್ದ ಕಸದ ರಾಶಿ ತೆರವುಗೊಳಿಸಿದ್ದರಿಂದ ಪಟ್ಟಣದ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

-ವರದಿ :ಎನ್.ಎನ್.ದಿನೇಶ್