ಗೋಣಿಕೊಪ್ಪಲು,ಜ.19 : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ, ಬೆಂಗಳೂರು, ಶ್ರೀ ಶ್ರೀ ಆಯುರ್ವೇದ ವೈದ್ಯಕೀಯ ಕಾಲೇಜು, ಬೆಂಗಳೂರು, ಗೋಣಿಕೊಪ್ಪಲು ಪ್ರೌಢಶಾಲೆ, ಜನನಿ ಪೆÇಮ್ಮಕ್ಕಡ ಕೂಟ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಗೋಣಿಕೊಪ್ಪಲಿನಲ್ಲಿ ಉಚಿತ ಆಯುರ್ವೇದ ದಂತ ತಪಾಸಣಾ ಶಿಬಿರ ಹಾಗೂ ಆರೋಗ್ಯವರ್ಧಿನಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಅರವಳಿಕೆ ಔಷಧಿ (ಅನಸ್ತೇಶಿಯಾ) ನೀಡದೆ ಹಲ್ಲು ಕೀಳುವ ವಿಧಾನ, ದಂತ ಪಂಕ್ತಿಗಳ ಆರೋಗ್ಯ, ವಸಡುಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವದು, ‘ಜಾಲಂಧರ ಬಂಧ’ದ ಮೂಲಕ ಅರವಳಿಕೆ, ನೋವು, ರಕ್ತಸ್ರಾವ ಇಲ್ಲದೆ ಕ್ಷಣಾರ್ಧದಲ್ಲಿ ನೋವಿರುವ ಉಳುಕು ಹಲ್ಲು ಕೀಳಲು ಅವಕಾಶ, ಡಯಾಬಿಟೀಸ್ ಮತ್ತು ರಕ್ತದ ಏರೊತ್ತಡ ರೋಗಿಗಳಿಗೂ ಯಾವದೇ ಅಡ್ಡ ಪರಿಣಾಮ ಇಲ್ಲದೆ ಹಲ್ಲು ಕೀಳಿಸಲು ಸದವಕಾಶ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಾಯಿ ಮತ್ತು ಹಲ್ಲಿನ ಆರೋಗ್ಯದ ಕುರಿತು ಉಪನ್ಯಾಸ, ಉಚಿತ ತಪಾಸಣೆ, ಸಲಹೆ, ಮನೆಮದ್ದು ನಿರೂಪಣೆ ಇತ್ಯಾದಿ ಆರೋಗ್ಯವರ್ಧಿನಿ ಕಾರ್ಯಕ್ರಮವು ಗಣರಾಜ್ಯೋತ್ಸವ ಅಂಗವಾಗಿ ತಾ.26 ರಂದು ಬೆಳಿಗ್ಗೆ 11.30 ರಿಂದ ಅಪರಾಹ್ನ 4 ಗಂಟೆಯವರೆಗೂ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ದೃವ್ಯಗುಣ ತಜ್ಞ, ನಿವೃತ್ತ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್, ದಂತತಜ್ಞ ಡಾ. ಜೆ.ವಿವೇಕ್, ಶಲ್ಯತಂತ್ರ (ಸರ್ಜರಿ), ದೃವ್ಯಗುಣ ತಜ್ಞೆಯರಾದ ಡಾ. ಟಿ.ಚೈತ್ರ, ಡಾ. ಕೆ.ಎಂ.ವಿಜಯಲಕ್ಷ್ಮಿ ಹಾಗೂ ಸ್ನಾತಕೋತ್ತರ ವಿಭಾಗದ 21 ಮಂದಿ ತಜ್ಞ ವೈದ್ಯರ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ.

ತಾ.26 ರಂದು ಬೆಳಿಗ್ಗೆ 11.00 ಗಂಟೆಗೆ ಗೋಣಿಕೊಪ್ಪಲು ಪ್ರೌಢಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಪಟ್ರಪಂಡ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ‘ಶಕ್ತಿ’ ದೈನಿಕದ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಉದ್ಘಾಟನೆ ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಜಿ.ಪಂ. ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಮೂಕೋಂಡ ವಿಜು ಸುಬ್ರಮಣಿ, ಜನನಿ ಪೆÇಮ್ಮಕ್ಕಡ ಕೂಟದ ಅಧ್ಯಕ್ಷೆ ಕುಲ್ಲೇಟಿರ ಪ್ರವಿಮೊಣ್ಣಪ್ಪ, ವೀರಾಜಪೇಟೆ ತಾ.ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಗ್ರಾ.ಪಂ. ಸದಸ್ಯೆ ಹಾಗೂ ಸಮಾಜ ಸೇವಕಿ ಚೇಂದಿರ ಪ್ರಭಾ ಮಹೇಶ್, ಪ್ರೌಢಶಾಲಾ ಕಾರ್ಯದರ್ಶಿ ಕುಪ್ಪಂಡ ಗಣೇಶ್ ತಿಮ್ಮಯ್ಯ, ಪ್ರೌಢಶಾಲಾ ಮುಖ್ಯೋಪಾಧ್ಯಾಯ ಬಿ.ಟಿ.ರತೀಶ್ ರೈ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎ.ಜಿ. ಪಾರ್ವತಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ತಾ.27 ರಂದು ಆಯುರ್ವೇದ ತಜ್ಞ ವೈದ್ಯರ ತಂಡ ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಅವರ ನೇತೃತ್ವದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಕೃತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಅಪೂರ್ವ ಗಿಡಮೂಲಿಕೆ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್‍ಪೂವಯ್ಯ, ಗೋಣಿಕೊಪ್ಪಲು ಜಿ.ಪಂ.ಕ್ಷೇತ್ರ ಸದಸ್ಯ ಸಿ.ಕೆ. ಬೋಪಣ್ಣ ಪಾಲ್ಗೊಳ್ಳಲಿದ್ದಾರೆ.

ತಾ.28 ರಂದು ಮಾಕುಟ್ಟ ವನ್ಯಜೀವಿ ವಲಯದಲ್ಲಿ (ಉರ್ಟಿ ಅರಣ್ಯ) ಚಾರಣ ಕಾರ್ಯಕ್ರಮದಲ್ಲಿ ವೈದ್ಯರ ತಂಡ ಪಾಲ್ಗೊಳ್ಳಲಿದ್ದು ವಿನಾಶದ ಅಂಚಿನಲ್ಲಿರುವ ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಚಾರಣ ಕಾರ್ಯಕ್ರಮವನ್ನು ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೋಂಡ ಶಶಿ ಸುಬ್ರಮಣಿ ಅಂದು ಬೆಳಿಗ್ಗೆ 8 ಗಂಟೆಗೆ ಉದ್ಘಾಟನೆ ನೆರವೇರಿಸಲಿದ್ದಾರೆ. ಅಧ್ಯಕ್ಷತೆ ಬೇಟೋಳಿ ಗ್ರಾ.ಪಂ.ಅಧ್ಯಕ್ಷೆ ಬೊಳ್ಳೆಪಂಡ ಚೋಂದಮ್ಮ ಬೋಪಣ್ಣ, ಮುಖ್ಯ ಅತಿಥಿಗಳಾಗಿ ಕೊಡಗು ವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಮುಕ್ಕಾಟಿರ ಜಯ, ಜಿ.ಪಂ.ಸದಸ್ಯ ಅಚ್ಚಪಂಡ ಮಹೇಶ್, ಮಾಕುಟ್ಟ ವಲಯಾರಣ್ಯಾಧಿಕಾರಿ (ವನ್ಯಜೀವಿ) ಪಾಲ್ ಅಂತೋಣಿ, ಚಾರಣ ಸಂಯೋಜಕ, ಬೇಟೋಳಿ ಗ್ರಾ.ಪಂ.ಉಪಾಧ್ಯಕ್ಷ ಅಮ್ಮಣಿಕುಟ್ಟಂಡ ವಸಂತ್‍ಕಟ್ಟಿ, ವನ್ಯಪ್ರೇಮಿಗಳಾದ ಬೋಸ್‍ಮಾದಪ್ಪ, ಸ್ನೇಕ್ ಸತೀಶ್ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ತಾ.29ರಂದು ಮಾಕುಟ್ಟ ಮೀಸಲು ಅರಣ್ಯ (ಕೆರ್ಟಿ ಅರಣ್ಯ ಶ್ರೇಣಿ) ಯಲ್ಲಿ ಆಯುರ್ವೇದ ವೈದ್ಯರ ತಂಡ ಅಮೂಲ್ಯ ಗಿಡಮೂಲಿಕೆ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಮಾಕುಟ್ಟ ಗಿರಿಜನರ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲೆ ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ವೀರಾಜಪೇಟೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸೂರ್ಯಸೇನ್, ಮಾಕುಟ್ಟ ವಲಯಾರಣ್ಯಾಧಿಕಾರಿ (ರಕ್ಷಿತಾರಣ್ಯ) ಸುಹಾನ ಹರೀಶ್ ಅಟ್ಟಾವರ, ಚಾರಣ ಸಂಯೋಜಕ ಅಮ್ಮಣಿಕುಟ್ಟಂಡ ವಸಂತ್ ಕಟ್ಟಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ಗೋಣಿಕೊಪ್ಪಲು ಸುದ್ದಿಸಂಸ್ಥೆ, ಗೋಣಿಕೊಪ್ಪಲು ಪ್ರೆಸ್‍ಕ್ಲಬ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಯೋಜಕ ಟಿ.ಎಲ್. ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.