ಗೋಣಿಕೊಪ್ಪಲು, ಜು. 23: ಯೋಜನೆ ಮತ್ತು ಸಾಂಖ್ಯಿಕ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ, ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಮ್ ಅವರು ಇದೇ ಪ್ರಥಮ ಬಾರಿಗೆ ದಕ್ಷಿಣ ಕೊಡಗಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇಂದು ಅಪರಾಹ್ನ 2 ಗಂಟೆ ಸುಮಾರಿಗೆ ವೀರಾಜಪೇಟೆ ತಹಶೀಲ್ದಾರ್ ಕಚೇರಿಗೆ ಹಾಗೂ ಬಾಳುಗೋಡು ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಗೋಣಿಕೊಪ್ಪಲಿಗೆ ಅಪರಾಹ್ನ 4.15ರ ಸುಮಾರಿಗೆ ಆಗಮಿಸಿದ ಅವರು ಸಮುದಾಯ ಆರೋಗ್ಯ ಕೇಂದ್ರದ ಪರಿಶೀಲನೆ ನಡೆಸಿದರು.
ಇದೇ ಸಂದರ್ಭ ತಾಲೂಕು ಆರೋಗ್ಯಾಧಿಕಾರಿ ಡಾ.ಯತಿರಾಜ್ ಅವರು ಮಾಸಿಕ ಸುಮಾರು 100 ಕ್ಕೂ ಅಧಿಕ ಹೆರಿಗೆ ಹಾಗೂ ಶಸ್ತ್ರ ಚಿಕಿತ್ಸೆಗೆ ಸ್ಥಳೀಯರಲ್ಲದೆ ನೆರೆಯ ಹೆಚ್.ಡಿ.ಕೋಟೆ. ಹುಣಸೂರು, ಪಿರಿಯಾಪಟ್ಟಣ ಹಾಗೂ ಪಂಚವಳ್ಳಿ ಇತ್ಯಾದಿ ಕಡೆಗಳಿಂದಲೂ ಗರ್ಭಿಣಿಯರು ಆಗಮಿಸುತ್ತಿದ್ದು ವೈದ್ಯರು ಹಾಗೂ ಅಗತ್ಯ ಸಿಬ್ಬಂದಿಗಳ ಕೊರತೆ ಉಂಟಾಗಿದೆ ಎಂದರು. ಡಾ. ಗ್ರೀಷ್ಮಾ ಬೋಜಮ್ಮ ಅವರು ಮಾತನಾಡಿ, ಮಾಸಿಕ ಸುಮಾರು 40 ಮಂದಿಗೂ ಅಧಿಕ ನಾಯಿ ಕಡಿತಕ್ಕೆ ಚಿಕಿತ್ಸೆ ಹೊಂದಲು ಬರುತ್ತಿದ್ದಾರೆ. ಆದರೆ, ಲಸಿಕೆಯ ಕೊರತೆ ಉಂಟಾಗಿದೆ. ಆಸ್ಪತ್ರೆಯಲ್ಲಿ ಒಟ್ಟು 6 ವೈದ್ಯಾಧಿಕಾರಿಗಳ ಕೊರತೆ ಇದ್ದು ಇನ್ನೂ ಮೂವರು ವೈದ್ಯರ ಅಗತ್ಯವಿದೆ ಎಂದರು.
ಇದೇ ಸಂದರ್ಭ ಮಾತನಾಡಿದ ಉಸ್ತುವಾರಿ ಸಚಿವ ಸೀತಾರಾಮ್ ಅವರು, ಯಾವದೇ ವೈದ್ಯರು ಕೊಡಗಿನಲ್ಲಿ ಕಾರ್ಯನಿರ್ವಹಿಸಲು ಮುಂದೆ ಬರುತ್ತಿಲ್ಲ. ಕೊಡಗಿನ ಒಟ್ಟು 29 ಆರೋಗ್ಯ ಕೇಂದ್ರಗಳಲ್ಲಿ ಸುಮಾರು 10 ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲ. ಇದೊಂದು ಗಂಭೀರ ಸಮಸ್ಯೆಯಾಗಿದ್ದು, ತಾ.30 ರಂದು ಆರೋಗ್ಯ ಸಚಿವರನ್ನು ಭೇಟಿ ಮಾಡಿ ಅಗತ್ಯ ವೈದ್ಯರ ನೇಮಕಾತಿ ಬಗ್ಗೆ ಚರ್ಚಿಸುವೆ. ವೈದ್ಯಕೀಯ ಶಿಕ್ಷಣ ಮುಗಿಸಿದ ವೈದ್ಯರನ್ನು ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದರು.
ತುರ್ತು ಚಿಕಿತ್ಸಾ ವಿಭಾಗ, ಹೆಂಗಸರ ವಾರ್ಡ್, ವಿಶೇಷ ವಾರ್ಡ್ಗಳನ್ನು ವೀಕ್ಷಣೆ ನಡೆಸಿದ ಸಚಿವರು ಗೋಣಿಕೊಪ್ಪಲು ಆಸ್ಪತ್ರೆಯ ಮೇಲೆ ದಿನನಿತ್ಯ ಅಧಿಕ ರೋಗಿಗಳ ಒತ್ತಡದ ಹಿನ್ನೆಲೆ ಮೇಲ್ದರ್ಜೆಗೇರಿಸಲು ತಾನು ಶಿಫಾರಸ್ಸು ಮಾಡುವದಾಗಿ ನುಡಿದರು.
ಇದೀಗ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಅನಸ್ತೇಶಿಯಾ ವೈದ್ಯ ಡಾ.ಸುರೇಶ್, ಸ್ತ್ರೀ ಮತ್ತು ಪ್ರಸೂತಿ ತಜ್ಞೆ ಡಾ.ಗ್ರೀಷ್ಮಾ ಬೋಜಮ್ಮ, ದಂತವೈದ್ಯರಾದ ಡಾ. ಅಭಿಷೇಕ್ ಕಾರ್ಯನಿರ್ವಹಿಸುತ್ತಿದ್ದು, ಮಕ್ಕಳ ತಜ್ಞರು, ವೈದ್ಯಕೀಯ ತಜ್ಞ (ಫಿಸಿಷಿಯನ್), ಮೂಳೆ ತಜ್ಞರು, ಸಾಮಾನ್ಯ ಶಸ್ತ್ರ ಚಿಕಿತ್ಸಕರ ಅವಶ್ಯಕತೆ ಇರುವದಾಗಿ ವೈದ್ಯರು ಮಾಹಿತಿ ನೀಡಿದರು. ಸುಮಾರು 50 ಹಾಸಿಗೆಯ ಗೋಣಿಕೊಪ್ಪಲು ಆಸ್ಪತ್ರೆಯ ಕಟ್ಟಡ ಮಳೆಗಾಲದಲ್ಲಿ ಅಲ್ಲಲ್ಲಿ ಸೋರುತ್ತಿದ್ದು, ಕೂಡಲೇ ದುರಸ್ತಿಗೊಳಿಸುವ ನಿಟ್ಟಿನಲ್ಲಿ ಜಿ.ಪಂ.ಸಿಇಓ ಚಾರುಲತಾ ಸೋಮಲ್ ಅವರ ಗಮನ ಸೆಳೆದರು. ಜಿಲ್ಲೆಯ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಗತ್ಯ ದುರಸ್ತಿ ಕಾರ್ಯಗಳನ್ನು ಜಿ.ಪಂ.ಮೂಲಕ ಕೈಗೊಳ್ಳಲು ಚಾರುಲತಾ ಅವರಿಗೆ ಸಚಿವರು ಸೂಚನೆ ನೀಡಿದರು.
ಗೋಣಿಕೊಪ್ಪಲು ಬಸ್ ನಿಲ್ದಾಣ- ಶೌಚಾಲಯ ಅವ್ಯವಸ್ಥೆ
ಗೋಣಿಕೊಪ್ಪಲು ಬಸ್ ನಿಲ್ದಾಣದ ಹಿಂಭಾಗ ಕೆಸರು ಗದ್ದೆಯಂತಾಗಿದ್ದು, ಸಚಿವರು ಖುದ್ದು ನಡೆದುಕೊಂಡೇ ವೀಕ್ಷಣೆ ಮಾಡಿದರು. ಜಿ.ಪಂ.ಸಿಇಓ ಚಾರುಲತಾ ಅವರು ಮಾತನಾಡಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಅನುದಾನ ಲಭ್ಯವಾಗಲಿದ್ದು, ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಅಭಿವೃದ್ಧಿ ಪಡಿಸಲು ಅಗತ್ಯವಿದೆ ಎಂದು ಸಚಿವರಿಗೆ ಮಾಹಿತಿ ನೀಡಿದರು. ಇದೇ ಸಂದರ್ಭ ಮಧ್ಯೆ ಪ್ರವೇಶ ಮಾಡಿದ ಗ್ರಾ.ಪಂ. ಸದಸ್ಯರು ಹಾಗೂ ಸಾರ್ವಜನಿಕರು ರಾಜ್ಯ ರಸ್ತೆ ಸಾರಿಗೆ ಸುಪರ್ದಿಗೆ ಒಪ್ಪಿಸಿದ್ದಲ್ಲಿ ಇತರೆ ಖಾಸಗಿ ಬಸ್ ಹಾಗೂ ವಾಹನ ನಿಲುಗಡೆಗೆ ನಿರ್ಬಂಧ ಉಂಟಾಗುತ್ತದೆ. ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಸುಮಾರು ರೂ.30-35 ಕೋಟಿ ವೆಚ್ಚದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಿಸಲು ಸಾಧ್ಯವಿದೆ. ಈ ಬಗ್ಗೆ ಸುಳ್ಯ ಹಾಗೂ ಪುತ್ತೂರುವಿನ ಬಸ್ ನಿಲ್ದಾಣವನ್ನು ವೀಕ್ಷಣೆ ಮಾಡಿ ಮಾಹಿತಿ ನೀಡಲು ಸಚಿವ ಸೀತಾರಾಮ್ ಅವರು ಚಾರುಲತಾ ಅವರಿಗೆ ಸೂಚನೆ ನೀಡಿದರು.
ಗೋಣಿಕೊಪ್ಪಲು ನಗರದ ಶೌಚಾಲಯ ವ್ಯವಸ್ಥೆಯ ಬಗ್ಗೆ ಇದೇ ಸಂದರ್ಭ ಸಾರ್ವಜನಿಕರು ಸಚಿವರ ಗಮನ ಸೆಳೆದರಲ್ಲದೆ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸುವಂತೆ ಗೋಣಿಕೊಪ್ಪಲು ಗ್ರಾ.ಪಂ.ಪಿಡಿಓ ಹಾಗೂ ಜನಪ್ರತಿನಿಧಿಗಳಿಗೆ ಸೂಚನೆ ನೀಡಲಾಯಿತು. ಇದೇ ಸಂದರ್ಭ ಖಾಸಗಿ -ಸಾರ್ವಜನಿಕ ಸಹಭಾಗಿತ್ವದೊಂದಿಗೆ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣಕ್ಕೆ ಅನುಮತಿ ಕೋರಿ ಸಚಿವ ಸೀತಾರಾಮ್ ಹಾಗೂ ಸಿಇಓ ಚಾರುಲತಾ ಸೋಮಲ್ ಅವರಿಗೆ ಗ್ರಾ.ಪಂ.ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ಪರವಾಗಿ ಮನವಿ ಪತ್ರ ನೀಡಲಾಯಿತು.
ಇಲ್ಲಿನ ಪೌರಕಾರ್ಮಿಕರ ವಸತಿ ಗೃಹ ಕೊಳಚೆ ಪ್ರದೇಶದಲ್ಲಿದ್ದು, ಯಾವದೇ ದುರಸ್ತಿ ಕಾಣದೆ ಶಿಥಿಲಾವಸ್ಥೆಯಲ್ಲಿದ್ದು ಸಚಿವರು ಖುದ್ದು ವೀಕ್ಷಣೆ ಮಾಡಿದರು. ಇದೇ ಸಂದರ್ಭ ಮಾತನಾಡಿದ ತಾ.ಪಂ.ಇಓ ಫಡ್ನೇಕರ್ ಅವರು ಎರಡು ಹಾಗೂ ಮೂರನೇ ವಿಭಾಗದಲ್ಲಿ ಸುಮಾರು 25 ವಸತಿ ಸಮುಚ್ಛಯ ನಿರ್ಮಿಸಲು ಅವಕಾಶವಿದ್ದು, ಇದೀಗ ಶಿಥಿಲಾವಸ್ಥೆಯ ವಸತಿ ಗೃಹದಲ್ಲಿರುವವರಿಗೆ ಮೊದಲ ಆದ್ಯತೆ ನೀಡಿ ಪುನರ್ವಸತಿ ಕಲ್ಪಿಸಲಾಗುವದು ಎಂದು ಹೇಳಿದರು. ಇದೇ ಸಂದರ್ಭ ಪೌರ ಕಾರ್ಮಿಕರು ತಮ್ಮ ಬವಣೆಯನ್ನು ಸಚಿವರಲ್ಲಿ ತೋಡಿಕೊಂಡರು. ಗೋಣಿಕೊಪ್ಪಲು ಸರ್ವಾಂಗೀಣ ಅಭಿವೃದ್ಧಿ ನಿಟ್ಟಿನಲ್ಲಿ ಚರ್ಚಿಸಲು ಮುಂದೆ ಮತ್ತೊಮ್ಮೆ ಭೇಟಿ ನೀಡುವದಾಗಿ ಇದೇ ಸಂದರ್ಭ ಭರವಸೆ ನೀಡಿದರು.
ಸಚಿವರ ಭೇಟಿ ಸಂದರ್ಭ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ, ವೀರಾಜಪೇಟೆ ಪ್ರಬಾರ ಡಿಸಿಎಫ್ ಹಾಗೂ ತಿತಿಮತಿ ಎಸಿಎಫ್ ಸೂರ್ಯಸೇನ್, ಜಿ.ಪಂ.ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಇ. ಇಬ್ರಾಹಿಂ, ವೀರಾಜಪೇಟೆ ತಹಶೀಲ್ದಾರ್ ಮಹದೇವಸ್ವಾಮಿ ಮುಂತಾದ ಅಧಿಕಾರಿಗಳು ಉಪಸ್ಥಿತರಿದ್ದರು.
ಮಾಜಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಿ.ಟಿ.ಪ್ರದೀಪ್, ಮಾಜಿ ಎಂಎಲ್ಸಿ ಅರುಣ್ಮಾಚಯ್ಯ,ಆಪ್ತರಾದ ಹರೀಶ್ ಬೋಪಣ್ಣ ಪೆÇನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತರ ವಿಭಾಗದ ಅಧ್ಯಕ್ಷ ಅಬ್ದುಲ್ ರೆಹಮಾನ್ ಬಾಪು, ಜಿಲ್ಲಾ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಯಾಕೂಬ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ನ ಅಧ್ಯಕ್ಷ ಲೋಕೇಶ್, ಕಾನೂರಿನ ಕಾಂಗ್ರೆಸ್ ಪ್ರಮುಖರಾದ ಕಾಡ್ಯಮಾಡ ಬೋಪಣ್ಣ, ಬಿ..ಶೆಟ್ಟಿಗೇರಿ ಗ್ರಾ.ಪಂ.ಅಧ್ಯಕ್ಷ ಕಡೇಮಾಡ ಅಶೋಕ್,ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಪಿ.ಕೆ.ಪೆÇನ್ನಪ್ಪ, ಗೋಣಿಕೊಪ್ಪಲು ಗ್ರಾ.ಪಂ.ಅಧ್ಯಕ್ಷೆ ಸೆಲ್ವಿ ಹಾಗೂ ಗ್ರಾ.ಪಂ.ಸದಸ್ಯರು, ಹುದಿಕೇರಿಯ ಮೀದೇರಿರ ನವೀನ್, ಟಿ.ಶೆಟ್ಟಿಗೇರಿಯ ವಿಶು ರಂಜಿ, ಮಾಜಿ ತಾ.ಪಂ.ಸದಸ್ಯ ಟಾಟೂ ಮೊಣ್ಣಪ್ಪ ಮುಂತಾದವರು ಇದ್ದರು.
ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ,ಗೋಣಿಕೊಪ್ಪಲು ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು, ವೀರಾಜಪೇಟೆ ಪೆÇಲೀಸ್ ವೃತ್ತ ನಿರೀಕ್ಷಕ ಶಾಂತಮಲ್ಲಪ್ಪ, ಗೋಣಿಕೊಪ್ಪಲು-ಪೆÇನ್ನಂಪೇಟೆ ಪೆÇಲೀಸ್ ಉಪನಿರೀಕ್ಷಕರಾದ ಗೋವಿಂದರಾಜು, ಜಯರಾಮ್ ಮತ್ತು ಸಿಬ್ಬಂದಿಗಳು ಸಚಿವರ ಆಗಮನದ ಸಂದರ್ಭ ಭದ್ರತೆ ಒದಗಿಸಿದ್ದರು.
ಗೋಣಿಕೊಪ್ಪಲು ಕಾಂಗ್ರೆಸ್ ಪ್ರಮುಖರಾದ ಕುಲ್ಲಚಂಡ ಗಣಪತಿ, ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ನಿರ್ದೇಶಕ ಹಾಗೂ ಗ್ರಾ.ಪಂ. ಸದಸ್ಯ ಬಿ.ಎನ್.ಪ್ರಕಾಶ್ ಅಗತ್ಯ ಮಾಹಿತಿಯನ್ನು ಸಚಿವರಿಗೆ ನೀಡಿದರು.
ವರದಿ:- ಟಿ.ಎಲ್.ಶ್ರೀನಿವಾಸ್