ಗೋಣಿಕೊಪ್ಪಲು, ಅ. 23: ಗೋಣಿಕೊಪ್ಪಲು ಲಯನ್ಸ್ ಸಮೂಹ ವಿದ್ಯಾಸಂಸ್ಥೆಗಳ ಆಡಳಿತಾತ್ಮಕ ಕಚೇರಿ ಕಟ್ಟಡವನ್ನು ರೂ. 50 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದು, ಇತ್ತಿಚೇಗೆ ಅಂತರರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಉಪಾಧ್ಯಕ್ಷ ನರೇಶ್ ಅಗರ್‍ವಾಲ್ ಭೂಮಿಪೂಜೆ ನೆರವೇರಿಸಿದರು.

ಇಲ್ಲಿನ ಲಯನ್ಸ್ ಶಾಲಾ ಸಭಾಂಗಣದಲ್ಲಿ ಗೋಣಿಕೊಪ್ಪಲು ಲಯನ್ಸ್ ಹಾಗೂ ಲಯನೆಸ್ ಸದಸ್ಯರು ಮತ್ತು ಶಾಲಾ ಆಡಳಿತ ವರ್ಗವನ್ನು ಉದ್ದೇಶಿಸಿ ಮಾತನಾಡಿದ ಅವರು, ವಿಶ್ವಮಟ್ಟದಲ್ಲಿ ಲಯನ್ಸ್ ಸಂಸ್ಥೆ ಉತ್ತಮ ಸ್ವಯಂ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಲ್ಲಿಯೂ ಲಯನ್ಸ್ ಸಂಸ್ಥೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಲಯನ್ಸ್ ಸದಸ್ಯರು ಒಗ್ಗೂಡಿ ಕಾರ್ಯಕ್ರಮ ಹಮ್ಮಿಕೊಳ್ಳುವದರಿಂದ ಸಿಗುವ ಆತ್ಮಗೌರವ, ಉತ್ತಮ ಯೋಜನೆಗಳನ್ನು ಅನುಷ್ಠಾನ ಮಾಡುವದರಿಂದ ಸಿಗುವ ತೃಪ್ತಿ ಇವುಗಳನ್ನು ಅರಿತು ಭಾರತ ದೇಶದ ಅಭಿವೃದ್ಧಿಮುಖಿ ಕೆಲಸದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಮಾಜಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಸದಾಶಿವ, ಜಿಲ್ಲಾ ರಾಜ್ಯಪಾಲ ಅರುಣ್ ಶೆಟ್ಟಿ, ಮಾಜಿ ಜಿಲ್ಲಾ ರಾಜ್ಯಪಾಲ ಸುಭಾಶ್ ಮುತ್ತಣ್ಣ, ಕೆ.ಬಿ. ವಿಶ್ವನಾಥ್, ಅಂತರರಾಷ್ಟ್ರೀಯ ಲಯನ್ಸ್ ನಿರ್ದೇಶಕ ಕೃಷ್ಣರೆಡ್ಡಿ, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಶರತ್ ದೇವಯ್ಯ, ಲಯನೆಸ್ ಅಧ್ಯಕ್ಷೆ ಸುಶ್ಮಾ ದೇವಯ್ಯ, ಬೋಸ್ ಪೆಮ್ಮಯ್ಯ, ಲಯನ್ಸ್ ಪ.ಪೂ. ಕಾಲೇಜು ಪ್ರಾಂಶುಪಾಲೆ ಪವಿತ್ರಾ ಚಿಣ್ಣಪ್ಪ, ಪ್ರೌಢಶಾಲಾ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿಯರಾದ ಅಕ್ಕಮ್ಮ ಹಾಗೂ ತಂಗಮ್ಮ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸಂಸ್ಥೆಯ ಕೆ.ಪಿ. ಸುಬ್ಬಯ್ಯ ಧ್ವಜವಂದನೆ ನೆರವೇರಿಸಿದರೆ, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸಿ.ಎಂ. ಅಪ್ಪಣ್ಣ ಸ್ವಾಗತಿಸಿದರು. ಕೆ.ಎಸ್. ಚಂಗಪ್ಪ ಟ್ರಸ್ಟ್ ವರದಿ ಓದಿದರೆ, ಪಿ.ಟಿ. ಸೋಮಯ್ಯ ಹಾಗೂ ಕೆ.ಎಂ. ಅಜಿತ್ ಅಯ್ಯಪ್ಪ ಅತಿಥಿ ಪರಿಚಯ ನೆರವೇರಿಸಿದರು.