ಗೋಣಿಕೊಪ್ಪಲು, ಸೆ. 29 : ಅಕ್ಟೋಬರ್ 10 ರಂದು ಗೋಣಿಕೊಪ್ಪ ಪರಿಮಳ ಮಂಗಳ ವಿಹಾರದಲ್ಲಿ 3 ನೇ ವರ್ಷದ ಮಹಿಳಾ ದಸರಾ ನಡೆಯಲಿದೆ ಎಂದು ಗೋಣಿಕೊಪ್ಪ ಮಹಿಳಾ ದಸರಾ ಸಮಿತಿ ತಿಳಿಸಿದೆ.

ಎರಡು ಬಾರಿ ನಡೆದಿರುವ ಮಹಿಳಾ ದಸರಾದ ಯಶಸ್ವಿಯಿಂದ ಮಹಿಳೆಯರು ಪುಳಕಿತರಾಗಿದ್ದಾರೆ. ಮಹಿಳೆಯರನ್ನು ಸಾಮಾಜಿಕವಾಗಿ ಪ್ರೋತ್ಸಾಹಿಸುವ ದೃಷ್ಟಿಯಿಂದ ಈ ಬಾರಿಯೂ ಮಹಿಳಾ ದಸರಾ ಆಚರಣೆ ಮೂಲಕ ಕಾರ್ಯಕ್ರಮದಲ್ಲಿ ಪೈಪೋಟಿಗೆ ಅವಕಾಶ ನೀಡಲಾಗಿದೆ ಎಂದು ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಪ್ರವಿ ಮೊಣ್ಣಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಮೆರವಣಿಗೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಲಿದ್ದಾರೆ. ವಿವಿಧ ಸಂಘ-ಸಂಸ್ಥೆಗಳು, ಮಹಿಳಾ ಸಂಘಗಳ ಸೇರಿದಂತೆ ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಮಹಿಳಾ ದಸರಾ ಸಮಿತಿ ಖಜಾಂಚಿ ಚೇಂದಿರ ಪ್ರಭಾವತಿ ಮಾತನಾಡಿ, ಈ ಬಾರಿ ಮಹಿಳೆಯರಿಗೆ 10 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 8 ರ ಒಳಗೆ ಸ್ಪರ್ಧಿಗಳು ಹೆಸರು ನೋಂದಾಯಿಸಿಕೊಳ್ಳಬೇಕಾಗಿದೆ. ಸ್ಪರ್ಧೆಯಲ್ಲಿ ಸಾಂಪ್ರದಾಯಿಕ ಉಡುಗೆ ಪ್ರದರ್ಶನ ಸ್ಪರ್ಧೆಯಾಗಿ ಫ್ಯಾನ್ಸಿ ಡ್ರೆಸ್, ಮಿಸಸ್ ಗೋಣಿಕೊಪ್ಪ, ಮೆಹಂದಿ ಸ್ಪರ್ಧೆ, ಹೂವಿನ ಅಲಂಕಾರ, ಬೆಂಕಿ ಇಲ್ಲದೆ ಅಡುಗೆ ತಯಾರಿಸುವದು, ವಾಲಗತ್ತಾಟ್, 5 ಜನರ ಗುಂಪು ನೃತ್ಯ, 5 ಜನರ ತಂಡದ ಜನಪದ ಗೀತೆ ಹಾಗೂ ಪಿಕ್ ಅಯಿಂಡ್ ಆಕ್ಟ್ ಸ್ಪರ್ಧೆ ನಡೆಯಲಿದೆ ಎಂದರು. ಹೆಚ್ಚಿನ ಮಾಹಿತಿಗೆ 8971612050, 9448721017 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ರಮಾವತಿ, ಪ್ರ. ಕಾರ್ಯದರ್ಶಿ ಎಂ. ಮಂಜುಳ ಹಾಗೂ ಸಹ ಕಾರ್ಯದರ್ಶಿ ಪಿ. ಪಿ. ಸೀತಮ್ಮ ಉಪಸ್ಥಿತರಿದ್ದರು.