ಸೋಮವಾರಪೇಟೆ, ಅ. 5: ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ಮಾರ್ಗದರ್ಶನದೊಂದಿಗೆ ನಡೆಯುವ ಮಂಗಲ ಗೋಯಾತ್ರೆಯ ಪೂರ್ವಭಾವಿಯಾಗಿ ಹಮ್ಮಿಕೊಂಡಿರುವ ಗೋ ಕಿಂಕರ ಯಾತ್ರೆ ಸೋಮವಾರಪೇಟೆಗೆ ಆಗಮಿಸಿದ ಸಂದರ್ಭ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಗೋ ಪ್ರೇಮಿಗಳು ಸ್ವಾಗತ ಕೋರಿದರು.

ಇಲ್ಲಿನ ಸೋಮೇಶ್ವರ ದೇವಾಲಯಕ್ಕೆ ಆಗಮಿಸಿದ ಯಾತ್ರೆಗೆ ಸ್ವಾಗತ ಸಮಿತಿಯ ಪದಾಧಿಕಾರಿಗಳು, ದೇವಾಲಯ ಆಡಳಿತ ಮಂಡಳಿ ಸದಸ್ಯರುಗಳು ಸ್ವಾಗತ ಕೋರಿದರು. ನಂತರ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಿತು.

ಗೋವಿನ ಮಹತ್ವವನ್ನು ಸಮಾಜಕ್ಕೆ ತಿಳಿಸುವ ನಿಟ್ಟಿನಲ್ಲಿ ಗೋ ಕಿಂಕರ ಯಾತ್ರೆ ನಡೆಯುತ್ತಿದ್ದು, ಯಾತ್ರೆಯುದ್ದಕ್ಕೂ ಗೋವಿನ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಗೋವುಗಳು ಸಂಚರಿಸುವ ಸ್ಥಳ, ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಜಾಗೃತಿ ಮೂಡಿಸಲಾಗುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಗೋ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸುವದು ಯಾತ್ರೆಯ ಮೂಲ ಉದ್ದೇಶವಾಗಿದೆ ಎಂದು ಪ್ರಮುಖರಾದ ಚಿ.ನಾ. ಸೋಮೇಶ್ ತಿಳಿಸಿದರು.

ಈ ಸಂದರ್ಭ ರಾಮಚಂದ್ರಾಪುರ ಮಠದ ರಾಘವೇಂದ್ರ ಸ್ವಾಮೀಜಿ, ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ, ಸೋಮೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎಸ್.ಆರ್. ಸೋಮೇಶ್, ಧರ್ಮ ಜಾಗರಣಾ ಸಮಿತಿ ಸಂಚಾಲಕ ಸಿ.ಪಿ. ಗೋಪಾಲ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.