ಸಿದ್ದಾಪುರ, ಸೆ. 28: ಸಿದ್ದಾಪುರ, ಗುಯ್ಯ, ಕರಡಿಗೋಡು ಮೂರು ಗ್ರಾಮಗಳ ವ್ಯಾಪ್ತಿಯನ್ನೊಳಗೊಂಡ ಗುಹ್ಯ-ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2015-2016 ನೇ ಸಾಲಿನ ವಾರ್ಷಿಕ ಮಹಾ ಸಭೆ ಸಿದ್ದಾಪುರ ಸೆಂಟರಿ ಹಾಲ್‍ನಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಒಳಿತಿಗಾಗಿ ವ್ಯವಹಾರದೊಂದಿಗೆ ಹಲವು ಸಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಂದಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2000 ಸಾವಿರದಷ್ಟು ಪ್ರೋತ್ಸಾಹ ಧನ ನೀಡುತ್ತಿದ್ದು. ಮರಣಪಟ್ಟ ಸದಸ್ಯರ ಕುಟುಂಬದವರಿಗೆ 2,000 ಹಣವನ್ನು ಅಂತ್ಯಕ್ರಿಯೆಗೆಂದು ನೀಡುತ್ತಿರುವದಾಗಿ ತಿಳಿಸಿದರು.

ಸಂಘದಲ್ಲಿ ಪಾಲು ಬಂಡವಾಳ ರೂ. 1.01 ಕೋಟಿಗಳಿದ್ದು, ಠೇವಣಿ ರೂ. 21.29 ಕೋಟಿ ಹಾಗೂ ಸದಸ್ಯರುಗಳಿಗೆ ಕೃಷಿ ಹಾಗೂ ಕೃಷಿಯೇತರ ಸಾಲ ಸೇರಿ ಒಟ್ಟು ರೂ. 18.59 ಕೋಟಿ ಸಾಲ ನೀಡಿರುತ್ತದೆ. ಸಂಘದಲ್ಲಿ ದುಡಿಯುವ ಬಂಡವಾಳ ರೂ. 26.84 ಕೋಟಿ ಹಾಗೂ 2015-16ನೇ ಸಾಲಿನಲ್ಲಿ ರೂ. 124.88 ಕೋಟಿ ವ್ಯವಹಾರ ನಡೆದಿದೆ.

ಪ್ರಸ್ತುತ ವರ್ಷ ರೂ. 53.98 ಲಕ್ಷ ಲಾಭಗಳಿಸಿದ್ದು, ಸಂಘದ ಸದಸ್ಯರಿಗೆ ಶೇ. 25 ಡಿವಿಡೆಂಡ್ ನೀಡಲು ತೀರ್ಮಾನಿಸಿರುವದಾಗಿ ಹೇಳಿದರು. ಸಂಘ ಪ್ರತಿ ವರ್ಷದಂತೆ ಈ ಬಾರಿಯೂ ಶೇ. 100 ಫಸಲು ಸಾಲ ವಸೂಲಾತಿ ಮಾಡಲಾಗಿದೆ. ಡಿಸೇಲ್ ಹಾಗೂ ಪೆಟ್ರೋಲ್ ವ್ಯಾಪಾರದಲ್ಲಿ ರೂ. 14.34 ಕೋಟಿಯ ವ್ಯವಹಾರ ನಡೆಸಲಾಗಿದೆ.

ಸಂಘದಲ್ಲಿ ಉತ್ತಮ ವ್ಯವಹಾರ ನಡೆಸಿರುವ ಕರಡಿಗೋಡು ಗ್ರಾಮದ ಮಿತ್ತೂರು ರಾಘವ, ಸಿದ್ದಾಪುರ ಗ್ರಾಮದಿಂದ ಕೆ.ಕೆ. ಶ್ರೀನಿವಾಸ್, ಗುಹ್ಯ ಗ್ರಾಮದ ಮೂಕಂಡ ನಾಣಯ್ಯ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಉತ್ತಮ ವ್ಯವಹಾರ ನಡೆಸಿದ ಮೂರು ಸ್ವಸಹಾಯ ಗುಂಪುಗಳಿಗೆ ಬಹುಮಾನ ವಿತರಿಸಲಾಯಿತು. ಸ್ವ ಸಹಾಯ ಗುಂಪಿನ ಉತ್ತಮ ಪ್ರತಿನಿಧಿಯಾಗಿ ಕೆ.ಆರ್. ದೇವಿಯಾನಿ ಅವರನ್ನು ಗೌರವಿಸಲಾಯಿತು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಬಿಜೋಯ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಪ್ರಸನ್ನ ಕುಮಾರ್, ನಿರ್ದೇಶಕರಾದ ಕೆ.ಕೆ. ಚಂದ್ರಕುಮಾರ್, ಕೆ.ಜಿ. ಈರಪ್ಪ, ಪಿ.ಕೆ. ಚಂದ್ರನ್, ಕೆ.ಎಸ್. ಸುನೀಲ್, ಎಂ.ಹೆಚ್. ಮೂಸ, ಹೆಚ್.ಕೆ. ಚೆಲುವಯ್ಯ, ಎ.ಕೆ. ಪಾರ್ವತಿ, ಸಿಬ್ಬಂದಿ ವರ್ಗದವರು ಹಾಜರಿದ್ದರು. - ಅಂಚೆಮನೆ ಸುಧಿ