ಕುಶಾಲನಗರ, ಜ. 30: ಕೂಡಿಗೆ ಸೈನಿಕ ಶಾಲೆ ಆಶ್ರಯದಲ್ಲಿ ಅಂತರ ನಿಲಯ ಗುಡ್ಡಗಾಡು ಓಟ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಒಟ್ಟು ನಾಲ್ಕು ವಿಭಾಗಗಳ ಸ್ಪರ್ಧೆಯಲ್ಲಿ ‘ಎ’ ವಿಭಾಗದಲ್ಲಿ ಶಾಲೆಯ 12ನೇ ತರಗತಿಯ ವಿದ್ಯಾರ್ಥಿಗಳು, ‘ಬಿ’ ವಿಭಾಗದಲ್ಲಿ 10 ಮತ್ತು 11ನೇ ತರಗತಿ ವಿದ್ಯಾರ್ಥಿಗಳು, ‘ಸಿ’ ವಿಭಾಗದಲ್ಲಿ 8 ಮತ್ತು 9ನೇ ತರಗತಿಯ ವಿದ್ಯಾರ್ಥಿಗಳು ಹಾಗೂ ‘ಡಿ’ ವಿಭಾಗದಲ್ಲಿ 6 ಮತ್ತು 7ನೇ ತರಗತಿಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಸ್ಪರ್ಧೆಯಲ್ಲಿ ಹಿರಿಯ ವಿಭಾಗದ ವಿದ್ಯಾರ್ಥಿಗಳಿಗೆ ಶಾಲೆಯ ಪ್ರಾಂಶುಪಾಲರಾದ ಕ್ಯಾಪ್ಟನ್ ಬೆನ್ ಹೆಚ್ ಬೆರ್ಸನ್‍ರವರು ಧ್ವಜ ಸಂಕೇತವನ್ನು ತೋರಿಸುವ ಮೂಲಕ ಚಾಲನೆಯನ್ನು ನೀಡಿದರೆ, ಕಿರಿಯರ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಿನ್ಸಿ ಬೆರ್ಸನ್‍ರವರು ಧ್ವಜ ಸಂಕೇತವನ್ನು ತೋರಿಸುವದರ ಮೂಲಕ ಸ್ಪರ್ಧೆಗೆ ಚಾಲನೆ ನೀಡಿದರು.

ಸ್ಪರ್ಧೆಯಲ್ಲಿ ‘ಎ’ ವಿಭಾಗಕ್ಕೆ 10 ಕಿ ಮೀ, ‘ಬಿ’ ವಿಭಾಗಕ್ಕೆ 8 ಕಿ ಮೀ, ‘ಸಿ’ ವಿಭಾಗಕ್ಕೆ 6 ಕಿ.ಮೀ. ಮತ್ತು ‘ಡಿ’ ವಿಭಾಗಕ್ಕೆ 1.5 ಕಿ.ಮೀ. ದೂರವನ್ನು ನಿಗದಿಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಪ್ರಿನ್ಸಿ ಬರ್ಸನ್‍ರವರು ಬಹುಮಾನ ವಿತರಣೆ ಮಾಡಿದರು. ಫಲಿತಾಂಶದಲ್ಲಿ ಶಾಲೆಯ ಮೆನನ್ ನಿಲಯವು ತನ್ನ ಉತ್ತಮ ಸಾಧನೆಗಾಗಿ ‘ಗುಡ್ಡಗಾಡು ಓಟ ಸ್ಪರ್ಧೆ 2016-17ರ ಪಾರಿತೋಷಕ’ ವನ್ನು ತನ್ನದಾಗಿಸಿಕೊಂಡಿತು.