ಕುಶಾಲನಗರ, ಜ. 2: ಹೊಸ ವರ್ಷಾಚರಣೆ ನಂತರ ಗುಡ್ಡೆಹೊಸೂರು ಬಳಿ ನಡೆದ ಗುಂಡೇಟು ಪ್ರಕರಣದ ಬಗ್ಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ. ನೂತನ ವರ್ಷಾಚರಣೆ ನಡೆಸಿ ಬೆಳಗಿನ ಜಾವ 2.30 ಗಂಟೆಗೆ ದುಬಾರೆ ಕಡೆಯಿಂದ ಬರುತ್ತಿದ್ದ ಸಂದರ್ಭ ಎರಡು ವಾಹನಗಳ ನಡುವೆ ರಸ್ತೆಯಲ್ಲಿ ದಾರಿ ಬಿಡುವ ವಿಚಾರದಲ್ಲಿ ನಡೆದ ಸಂಘರ್ಷ ಶೂಟೌಟ್ ತನಕ ಮುಂದುವರೆದಿದ್ದು, ಈ ಸಂದರ್ಭ ಮೈಸೂರಿನ ಕಿರಣ್ ಎಂಬಾತನ ಕಾಲಿಗೆ ಗುಂಡು ತಗುಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಂಜರಾಯಪಟ್ಟಣದ ರಾಕೇಶ್, ಕುಶಾಲನಗರದ ಜಗದೀಶ್ ಮತ್ತು ಮೈಸೂರಿನ ಕಿರಣ್ ದುಬಾರೆಯಿಂದ ನೂತನ ವರ್ಷಾಚರಣೆ ಮುಗಿಸಿ ಹೊರಬರುತ್ತಿದ್ದ ಸಂದರ್ಭ ನಂಜರಾಯಪಟ್ಟಣ ದುಬಾರೆ ಜಂಕ್ಷನ್ನಲ್ಲಿ ಗೋಣಿಕೊಪ್ಪದ ಬಿದ್ದಪ್ಪ ಮತ್ತು ಕೆಬಿನ್ ಎಂಬವರ ಇಂಡಿಕಾ ಕಾರು ರಾಕೇಶ್ ಚಾಲಿಸುತ್ತಿದ್ದ ಆಲ್ಟೋ ಕಾರಿಗೆ ತಾಗಿದ ಹಿನ್ನೆಲೆಯಲ್ಲಿ ಮಾತಿಗೆ ಮಾತು ಬೆಳೆದು ಎರಡೂ ಗುಂಪುಗಳ ನಡುವೆ ಪರಸ್ಪರ ನೂಕಾಟ ತಳ್ಳಾಟ ನಡೆದಿದೆ. ನಂತರ ಗುಡ್ಡೆಹೊಸೂರು ಬಳಿ ಬಂದ ರಾಕೇಶ್ ಗುಂಪು ಬಿದ್ದಪ್ಪ ನಡುವೆ ಮಾರಾಮಾರಿ ಸಂದರ್ಭ ಆತ್ಮರಕ್ಷಣೆಗಾಗಿ ರಿವಾಲ್ವರ್ನಿಂದ ಎರಡು ಸುತ್ತು ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆ ಸಂದರ್ಭ ಬಿದ್ದಪ್ಪ ರಿವಾಲ್ವರ್ನಿಂದ ಹಾರಿಸಿದ ಒಂದು ಗುಂಡು ಗಾಳಿಯಲ್ಲಿ ತೂರಿದ್ದು, ಇನ್ನೊಂದು ಗುಂಡು ಮೈಸೂರಿನ ಕಿರಣ್ ಕಾಲಿಗೆ ತಗುಲಿದೆ. ತಕ್ಷಣ ಕಿರಣ್ನನ್ನು ಮೈಸೂರು ಆಸ್ಪತ್ರೆಗೆ ಸಾಗಿಸಲಾಗಿದ್ದು ಬಲಗಾಲಿಗೆ ತಗುಲಿದ್ದ ಗುಂಡನ್ನು ಹೊರತೆಗೆಯಲಾಗಿದೆ. ಕಿರಣ್ ಪ್ರಾಣಾಪಾಯದಿಂದ ಪಾರಾಗಿರುವದಾಗಿ ಆಸ್ಪತ್ರೆ ಮೂಲಗಳು ತಿಳಿಸಿವೆ.
ರಾಕೇಶ್ ಮತ್ತು ಜಗದೀಶ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಗೋಣಿಕೊಪ್ಪದ ಮೂಲದವರಾದ ಬಿದ್ದಪ್ಪ ಮತ್ತು ಕೆವಿನ್ ಅವರುಗಳನ್ನು ವಶಕ್ಕೆ ಪಡೆಯಲು ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಜೆ.ಇ.ಮಹೇಶ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ. ಸ್ಥಳಕ್ಕೆ ಕುಶಾಲನಗರ ಡಿವೈಎಸ್ಪಿ ಸಂಪತ್ಕುಮಾರ್ ಭೇಟಿ ನೀಡಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ.