ಮಡಿಕೇರಿ, ಆ. 16: ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ವಾಸಿಸುವ ಗಿರಿಜನರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ 400 ಎಕರೆ ಜಾಗ ಗುರುತಿಸುವಲ್ಲಿ ಯೋಜನೆ ರೂಪಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್. ಸೀತಾರಾಂ ತಿಳಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಐಟಿಡಿಪಿ ಇಲಾಖೆ ವತಿಯಿಂದ ಅರ್ಹ ಫಲಾನುಭವಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕುಪತ್ರ ವಿತರಿಸಿ ಸಾರ್ವಜನಿಕರ ಅಹವಾಲು ಆಲಿಸಿ ಸಚಿವರು ಮಾತನಾಡಿದರು.
ವೀರಾಜಪೇಟೆ ತಾಲೂಕಿನ ದಿಡ್ಡಳ್ಳಿ ಗ್ರಾಮದ ಗಿರಿಜನರ ಅಹವಾಲು ಸ್ವೀಕರಿದ ಸಚಿವರು ಈಗಾಗಲೇ ತಿತಿಮತಿ ವ್ಯಾಪ್ತಿಯ ಅರಣ್ಯ ಪೈಸಾರಿಯ ಜಾಗದಲ್ಲಿ ಸುಮಾರು 56 ಎಕರೆ ಭೂಮಿಯನ್ನು ಗಿರಿಜನರಿಗೆ ಒದಗಿಸುವಂತಾಗಲು ಅರಣ್ಯ ಇಲಾಖೆಯವರು ಅಗತ್ಯ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಅರಣ್ಯ ಪೈಸಾರಿ ಜಾಗವನ್ನು ಭೂ ಪರಿವರ್ತನೆ ಮಾಡುವಲ್ಲಿ ಅರಣ್ಯ ಇಲಾಖೆಯವರು ಪ್ರಸ್ತಾವನೆ ಸಲ್ಲಿಸಿದ್ದು, ಗಿರಿಜನರಿಗೆ ಮೂಲಸೌಲಭ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ.
ರಕ್ಷಿತ ಮೀಸಲು ಅರಣ್ಯ ಪ್ರದೇಶಗಳಲ್ಲಿ ಮೂಲ ಸೌಲಭ್ಯ ಕಲ್ಪಿಸುವಲ್ಲಿ ಅನೇಕ ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಆದ್ದರಿಂದ ಸುಮ್ಮನೆ ಭರವಸೆ ನೀಡಲು ಆಗದು ಎಂದು ಸಚಿವರು ಸ್ಪಷ್ಟಪಡಿಸಿದರು.
ಸುವರ್ಣ ಕರ್ನಾಟಕ ಸಮುಚ್ಚಯ ಭವನ ಕಾಮಾಗಾರಿ ಸಂಬಂಧಿಸಿದಂತೆ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ಅವರಿಂದ ಮಾಹಿತಿ ಪಡೆದ ಸಚಿವರು ಈ ತಿಂಗಳ 26 ರ ಒಳಗೆ ಕಾಮಾಗಾರಿ ಆರಂಭಿಸದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ವಿಶೇಷ ಪ್ಯಾಕೇಜ್ನಡಿ 27 ಕೋಟಿ ರೂ ಬಿಡುಗಡೆ ಸಂಬಂಧ ಜಿಲ್ಲಾ ಪಂಚಾಯತ್ ಎಂಜಿನಿಯರಿಂದ ಮಾಹಿತಿ
(ಮೊದಲ ಪುಟದಿಂದ) ಪಡೆದ ಸಚಿವರು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದಿದ್ದರೆ, ಹಣ ಬಿಡುಗಡೆಯಾಗುವದಾದರೂ ಹೇಗೆ ಎಂದು ಪ್ರಶ್ನಿಸಿದರು.
ಜಿಲ್ಲೆಯ ಗ್ರಾಮೀಣ, ನಗರ, ಪಟ್ಟಣ ಪ್ರದೇಶದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ. ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ವಹಿಸುವದು ಅಗತ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಸಲಹೆ ಮಾಡಿದರು.
ಕೊಡ್ಲಿಪೇಟೆ, ಸೋಮವಾರಪೇಟೆ, ಮಡಿಕೇರಿ ಮಾರ್ಗ ಬಸ್ ವೇಳಾಪಟ್ಟಿ ನಿಗಧಿ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಆರ್.ಟಿ.ಓ. ಅಧಿಕಾರಿಗೆ ಸಚಿವರು ಸೂಚಿಸಿದರು.
ಇದೇ ಸಂದರ್ಭದಲ್ಲಿ ಎರವ ಮತ್ತು ಸೋಲಿಗ ಜನಾಂಗದ ಅಭಿವೃದ್ಧಿ ಯೋಜನೆಯಡಿ ಬಿಡುಗಡೆಯಾಗಿರುವ ಅನುದಾನದಲ್ಲಿ ಸ್ವಯಂ ಉದ್ಯೋಗ ಕಾರ್ಯಕ್ರಮದಡಿ 10 ಜನ ಫಲಾನುಭವಿಗಳಿಗೆ ಟಾಟಾ ಏಸ್ ಗೂಡ್ಸ್ ಆಟೋವನ್ನು ವಿತರಿಸಲಾಯಿತು. ಇದೇ ಸಂದರ್ಭ 45 ಮಂದಿ ಫಲಾನುಭವಿಗಳ ಪೈಕಿ 8 ಮಂದಿ ಫಲಾನುಭವಿಗೆ ವೈಯಕ್ತಿಕ ಅರಣ್ಯ ಹಕ್ಕು ಪತ್ರವನ್ನು ಸಾಂಕೇತಿಕವಾಗಿ ಸಚಿವರು ವಿತರಿಸಿದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕೊಡಗು ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಸುರಯ್ಯ ಅಬ್ರಾರ್, ಜಿ.ಪಂ. ಉಪ ಕಾರ್ಯದರ್ಶಿ ವಿಶ್ವನಾಥ ಪೂಜಾರಿ, ಜಿಲ್ಲಾ ಪಂಚಾಯತ್ ಎಂಜಿನಿಯರ್ ರಾಜ್ಕುಮಾರ್ ರೆಡ್ಡಿ, ಶಶಿಧರ್, ಲೋಕೋಪಯೋಗಿ ಇಂಜಿನಿಯರ್ ಜಾಫರ್, ಡಿ.ಎಚ್.ಒ ಓ.ಆರ್. ಶ್ರೀರಂಗಪ್ಪ, ನಗರಸಭೆ ಪೌರಾಯುಕ್ತೆ ಬಿ.ಬಿ. ಪುಷ್ಪಾವತಿ, ಐ.ಟಿ.ಡಿ.ಪಿ. ಇಲಾಖೆ ಅಧಿಕಾರಿ ಕೆ.ವಿ ಸುರೇಶ್ ಮತ್ತಿತರರು ಇದ್ದರು.